ಬುಧವಾರ, ಜನವರಿ 20, 2021
27 °C

ಸಫ್ದರ್ ದಾರಿಯಲ್ಲಿ ರಂಗಭೂಮಿ ಸಾಗಲಿ: ರಂಗ‌ಕರ್ಮಿ ಅರುಂಧತಿ ‌ನಾಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ರಂಗಭಾಷೆಯ ಮೂಲಕ ಪ್ರತಿರೋಧವನ್ನು ದಾಖಲಿಸಿದ ಹಾಗೂ ಜನರ ಸಮಸ್ಯೆಗಳಿಗೆ ಬೀದಿ ನಾಟಕಗಳ ಮೂಲಕ ಧ್ವನಿ ಕೊಟ್ಟ ಸಫ್ದರ್ ಹಷ್ಮಿಯನ್ನು ಆಳುವ ಜನರು ಛೂ‌ಬಿಟ್ಟ ಗೂಂಡಾಗಳಿಂದ ದೆಹಲಿಯಲ್ಲಿ ಹತ್ಯೆ ಮಾಡಿದರು. ಸಫ್ದರ್ ತೋರಿಸಿದ ಪ್ರತಿರೋಧದ ಹಾದಿಯಲ್ಲೇ ರಂಗಭೂಮಿಯವರು ಸಾಗಬೇಕು’ ಎಂದು ರಂಗ‌ಕರ್ಮಿ ಅರುಂಧತಿ ‌ನಾಗ್ ತಿಳಿಸಿದರು.

ಸಮುದಾಯ ಸಾಂಸ್ಕೃತಿಕ ಸಂಘಟನೆಯು ರಂಗಶಂಕರದ ಸಹಕಾರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂ.ಜಿ.ವೆಂಕಟೇಶ್ ಅವರು ಕನ್ನಡಕ್ಕೆ ಅನುವಾದಿಸಿರುವ ಸಫ್ದರ್ ಹಷ್ಮಿ ಸಾವು ಮತ್ತು ಬದುಕು ಕುರಿತ ‘ಹಲ್ಲಾಬೋಲ್’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ದೇಶಕ್ಕೆ ಅನ್ನ ಕೊಡುವ ಲಕ್ಷಾಂತರ ರೈತರು ದೆಹಲಿಯ‌ ಹೊರವಲಯದಲ್ಲಿ ಕೊರೆಯುವ ಚಳಿಯಲ್ಲಿ ಜೀವದ ಹಂಗು ತೊರೆದು, ದೇಶದ ಕೃಷಿಯ ಉಳಿವಿಗಾಗಿ ಹೋರಾಟದಲ್ಲಿ ತೊಡಗಿದ್ದಾರೆ. ಆದರೆ, ಆಳುವ ಸರ್ಕಾರ ಹೃದಯಹೀನವಾಗಿ ವರ್ತಿಸುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಜನನಾಟ್ಯ ಮಂಚ್‌ನ ಒಡನಾಟ ಹಾಗೂ ಪುಸ್ತಕದಲ್ಲಿನ ಹಬೀಬ್ ತನ್ವೀರ್‌ ಅವರ ಮಾತುಗಳು, ಬೀದಿ ನಾಟಕದ ಕುರಿತು ಸಫ್ದರ್‌ಗೆ ಇದ್ದ ಸ್ಪಷ್ಟತೆಯ ಕುರಿತು ಖ್ಯಾತ ಗಾಯಕಿ ಎಂ.ಡಿ.ಪಲ್ಲವಿ ಮಾತನಾಡಿದರು. ಅನುವಾದಕ ಎಂ.ಜಿ.ವೆಂಕಟೇಶ್ ಅವರು ಸಫ್ದರ್ ಹಷ್ಮಿಯವರ‌ ಜೊತೆಗಿನ ನೆನಪುಗಳನ್ನು ತೆರೆದಿಟ್ಟರು. 

ಸಮುದಾಯ ಬೆಂಗಳೂರು ತಂಡದ ಕಲಾವಿದರು ಸಫ್ದರ್ ಹಷ್ಮಿ ಅವರ ‘ಭಯೋತ್ಪಾದನೆಯ‌ ನೆಪದಲ್ಲಿ’ ನಾಟಕದ ಆಯ್ದ ಭಾಗಗಳನ್ನು ಓದಿದರು. ಸಫ್ಧರ್ ಹಷ್ಮಿ ಮತ್ತು ಜನ ನಾಟ್ಯ ಮಂಚ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.

ಚಿಂತಕಿ ಡಾ.ವಿಜಯಾ, ನಿರ್ದೇಶಕ ಬಿ.ಸುರೇಶ್, ನಿವೃತ್ತ ನ್ಯಾಯಾಧೀಶರಾದ ಮಂಜುಳಾ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು