ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರ್ಯಾಂಡ್ ಬೆಂಗಳೂರು: ಸ್ಮಾರ್ಟ್‌ ಆಗದ ಬಿಎಂಟಿಸಿ

Last Updated 4 ಏಪ್ರಿಲ್ 2022, 20:25 IST
ಅಕ್ಷರ ಗಾತ್ರ

ಬೆಂಗಳೂರು: ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತಿರುವುದು ಒಂದೆಡೆಯಾದರೆ, ಪ್ರಯಾಣಿಕರಿಗೆ ಹತ್ತಿರವಾಗುವ ಪ್ರಯತ್ನದಲ್ಲಿ ಇನ್ನೂ ಹಿಂದೆಯೇ ಉಳಿದಿದೆ.

ಬಸ್ ಆದ್ಯತಾ ಪಥ ಹೆಚ್ಚಿಸುವುದು, ಬಸ್‌ಗಳು ಬರುವ ನೈಜ ಸಮಯದ ಬಗ್ಗೆ ಮಾಹಿತಿ ಫಲಕ ಅಳವಡಿಕೆ, ಕೊನೆ ತಾಣಗಳಿಗೆ ಬಸ್ ಸೌಕರ್ಯ ಕಲ್ಪಿಸುವ ಬಗ್ಗೆ ಬಿಎಂಟಿಸಿ ಹಲವು ವರ್ಷಗಳಿಂದ ಹೇಳುತ್ತಿದ್ದರೂ, ಅನುಷ್ಠಾನಕ್ಕೆ ಮಾತ್ರ ಬಂದಿಲ್ಲ. ಇದೆಲ್ಲದರ ಪರಿಣಾಮವಾಗಿ ಬಸ್‌ಗಳಿಗೆ ಜನ ಹತ್ತುವುದು ಕಡಿಮೆಯಾಗಿದ್ದು, ರಸ್ತೆಗಳಲ್ಲಿ ಬೇರೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ.

6,565 ಬಸ್‌ಗಳನ್ನು ಹೊಂದಿರುವ ಬಿಎಂಟಿಸಿ, 5,452 ಮಾರ್ಗಗಳಲ್ಲಿ ಪ್ರತಿ ದಿನ 9.41 ಲಕ್ಷ ಕಿಲೋ ಮೀಟರ್ ಕಾರ್ಯಾಚರಣೆ ಮಾಡುತ್ತಿದೆ. 45 ಘಟಕ, 54 ಬಸ್‌ ನಿಲ್ದಾಣಗಳನ್ನು ಹೊಂದಿದ್ದು, ಪ್ರತಿನಿತ್ಯ 20 ಲಕ್ಷಕ್ಕೂ ಹೆಚ್ಚು ಮಂದಿ ಈ ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಿದ್ದು, ₹2.60 ಕೋಟಿ ವರಮಾನ ಸಂಗ್ರಹಿಸುತ್ತಿದೆ.

ಕೆಲವೇ ವರ್ಷಗಳ ಹಿಂದೆ ದಿನಕ್ಕೆ 50 ಲಕ್ಷ ಪ್ರಯಾಣಿಕರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸುತ್ತಿದ್ದ ಬಿಎಂಟಿಸಿ ಬಸ್‌ಗಳಲ್ಲಿ ಈಗ ಪ್ರಯಾಣಿಕರ ಸಂಖ್ಯೆ ಶೇ 50ಕ್ಕೂ ಕಡಿಮೆಯಾಗಿದೆ. ಸಂಸ್ಥೆಯನ್ನು ಸ್ಮಾರ್ಟ್‌ ಆಗಿಸುವ ಜತೆಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಳಕ್ಕೆ ಸಂಸ್ಥೆ ಹಾಕಿಕೊಂಡಿರುವ ಯೋಜನೆಗಳು ಹಲವು ವರ್ಷಗಳಿಂದ ಅಲ್ಲೇ ಉಳಿದುಕೊಂಡಿವೆ.

‘ಬಸ್‌ ದರ ಕಡಿಮೆ ಮಾಡಬೇಕು, ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು ಎಂಬ ಕೂಗಿಗೆ ಸರ್ಕಾರ ಕಿವಿಗೊಟ್ಟೇ ಇಲ್ಲ. ಕೋವಿಡ್‌ ಬಳಿಕ ಹಲವರು ಉದ್ಯೋಗ ಕಳೆದುಕೊಂಡಿದ್ದರೆ, ಬಹುತೇಕರಿಗೆ ವರಮಾನ ಕಡಿಮೆಯಾಗಿದೆ. ಆದ್ದರಿಂದ ಅವರಿಗೆ ಬಸ್ ದರ ದುಬಾರಿ ಎನಿಸುತ್ತಿದೆ. ಬಸ್ ದರ ಕಡಿಮೆ ಮಾಡಿದರೆ ಅದರಿಂದ ಬೇರೆ ರೀತಿಯ ಆರ್ಥಿಕ ಚಟುವಟಿಕೆ ಹೆಚ್ಚಾಗುತ್ತದೆ. ಮಹಿಳೆಯರಿಗೆ
ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವುದರಿಂದ ಅವರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಅನುಕೂಲ ಆಗಲಿದೆ. ಅದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು’ ಎಂಬುದು ಬಸ್ ಪ್ರಯಾಣಿಕರ ವೇದಿಕೆಯ ಪದಾಧಿಕಾರಿಗಳ ಅಭಿಪ್ರಾಯ.

ಬಸ್ ಪಥಕ್ಕೆ ಇಲ್ಲವಾದ ಆದ್ಯತೆ

ಸಂಚಾರ ದಟ್ಟಣೆ ಕಡಿಮೆ ಮಾಡಲು ಅನುಕೂಲ ಆಗಲಿರುವ ಬಸ್ ಆದ್ಯತಾ ಪಥ ನಿರ್ಮಿಸಲು ಸರ್ಕಾರ ಆದ್ಯತೆಯನ್ನೇ ನೀಡಿಲ್ಲ. ಇದ್ದ ಒಂದು ಆದ್ಯತಾ ಪಥವೂ ಈಗ ಹೆಸರಿಗಷ್ಟೇ ಎನ್ನುವಂತಾಗಿದೆ.

ಐ.ಟಿ ಕಂಪನಿಗಳೇ ಹೆಚ್ಚಿರುವ ಹೊರವರ್ತುಲ ರಸ್ತೆಯಲ್ಲಿ ನಿರ್ಮಾಣವಾದ ಬಸ್ ಆದ್ಯತಾ ಪಥ ಈಗ ಇದ್ದೂ ಇಲ್ಲದಂತಾಗಿದೆ. ಅದೇ ಮಾರ್ಗದಲ್ಲಿ ಮೆಟ್ರೊ ರೈಲು ಮಾರ್ಗದ ಕಾಮಾಗಾರಿ ಆರಂಭ ಆಗಿರುವುದರಿಂದ ಬಸ್ ಆದ್ಯತಾ ಪಥ ಬಹುತೇಕ ಇಲ್ಲವಾಗಿದೆ.

‘ಒಟ್ಟು 12 ಪ್ರಮುಖ ರಸ್ತೆಗಳಲ್ಲಿ ಬಸ್ ಆದ್ಯತಾ ಪಥ ನಿರ್ಮಿಸಲು ಉದ್ದೇಶಿಸಲಾಗಿದೆ ಎಂಬ ಘೋಷಣೆ ಮಾಡಿ ಹಲವು ವರ್ಷಗಳೇ ಕಳೆದಿವೆ. ಆದರೆ, ಆ ಬಗ್ಗೆ ಸರ್ಕಾರವಾಗಲೀ, ಬಿಎಂಟಿಸಿಯಾಗಲಿ ಪ್ರಸ್ತಾಪಿಸುತ್ತಲೇ ಇಲ್ಲ. ಬಸ್‌ನಲ್ಲಿ ಪ್ರಯಾಣಿಸಿದರೆ ಬೇಗನೆ ಕಚೇರಿ ಅಥವಾ ಮನೆ ತಲುಪಬಹುದು ಎಂಬ ನಂಬಿಕೆ ಜನರಿಗೆ ಬಂದರೆ ಬಸ್‌ ಹತ್ತಲು ಹಿಂಜರಿಯುವುದಿಲ್ಲ. ಆದರೆ, ಪ್ರಯಾಣಿಕರನ್ನು ಆಕರ್ಷಿಸಲು ಸರ್ಕಾರ ಹಿಂದೆ ಬಿದ್ದಿದೆ’ ಎನ್ನುತ್ತಾರೆ ಬಸ್‌ ಪ್ರಯಾಣಿಕರ ವೇದಿಕೆಯ ಶಾಹೀನ್ ಶಸಾ.

ಬರಲೇ ಇಲ್ಲ ನೈಜ ಸಮಯದ ಫಲಕ

ಬಸ್‌ಗಳ ಬರುವ ಮತ್ತು ಹೊರಡುವ ನೈಜ ಸಮಯದ ಬಗ್ಗೆ ಮಾಹಿತಿ ಒದಗಿಸುವ ಫಲಕಗಳನ್ನು ಎಲ್ಲ ನಿಲ್ದಾಣಗಳಲ್ಲಿ ಅಳವಡಿಸುವ ಯೋಜನೆಯೂ ಹಲವು ವರ್ಷಗಳಿಂದ ಪ್ರಸ್ತಾವನೆ ಹಂತದಲ್ಲೇ ಉಳಿದುಕೊಂಡಿದೆ.

ಯಾವ ಮಾರ್ಗದ ಬಸ್ ಎಷ್ಟು ಗಂಟೆಗೆ ನಿಲ್ದಾಣಕ್ಕೆ ಬರಲಿದೆ ಎಂಬ ಮಾಹಿತಿ ಪ್ರಯಾಣಿಕರಿಗೆ ಲಭ್ಯವಾಗದೆ ಕಾದು ನಿಲ್ಲಬೇಕಾದ ಅನಿವಾರ್ಯತೆ ಇದೆ. ಇದನ್ನು ತಪ್ಪಿಸಲು ಬಸ್‌ ಬರಲಿರುವ ನೈಜ ಸಮಯದ ಮಾಹಿತಿ ಒಳಗೊಂಡ ಡಿಜಿಟಲ್ ಫಲಕ ಅಳವಡಿಕೆ ಮಾಡುವುದಾಗಿ ಬಿಎಂಟಿಸಿ ಹೇಳುತ್ತಲೇ ಇದೆ. ಕಾರ್ಯರೂಪಕ್ಕೆ ಮಾತ್ರ ಬರಲೇ ಇಲ್ಲ.

‘ಮಾಹಿತಿ ತಂತ್ರಜ್ಞಾನದ (ಐ.ಟಿ) ಬೀಡು ಎಂದು ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಮಾಹಿತಿ ಫಲಕ ಅಳವಡಿಸುವುದು ಕಷ್ಟದ ಕೆಲಸವೇನೂ ಅಲ್ಲ. ಇಂತಹ ಸೂಕ್ಷ್ಮ ಗಂಭೀರವಾಗಿ ಪರಿಗಣಿಸುವ ಇಚ್ಛಾಶಕ್ತಿ ಬೇಕು’ ಎಂಬುದು ಪ್ರಯಾಣಿಕರ ಅಭಿಪ್ರಾಯ.

ಮಾಯವಾದವು ಇಟಿಎಂ

ಬಿಎಂಟಿಸಿ ಬಸ್‌ಗಳಲ್ಲಿ ಇಟಿಎಂ (ಎಲೆಕ್ಟ್ರಾನಿಕ್ ಟಿಕೆಟಿಂಗ್ ಮಷಿನ್‌) ಮೂಲಕ ಟಿಕೆಟ್ ವಿತರಿಸುವ ಪದ್ಧತಿ ಕ್ರಮೇಣ ಮಾಯವಾಗಿ ಹೋಗಿದೆ. ಹಿಂದೆ ಇದ್ದಂತೆ ಟಿಕೆಟ್ ವಿತರಿಸುವ ಪದ್ಧತಿ ಇದೆ.

ಒಂದಕ್ಕೊಂದು ಅಂಟಿಕೊಂಡಿರುವ ಟಿಕೆಟ್‌ಗಳನ್ನು ಬಿಡಿಸಿ ವಿತರಿಸಲು ನಿರ್ವಾಹಕರು ಎಂಜಲು ಹಚ್ಚಬೇಕಾದ ಅನಿವಾರ್ಯತೆ ಇದೆ. ಇದಕ್ಕೆ ವಿರೋಧ ವ್ಯಕ್ತವಾದ ಬಳಿಕ ಈಗ ಬಹುತೇಕ ನಿರ್ವಾಹಕರು ದುಡ್ಡಿನ ಚೀಲದ ಜತೆಗೊಂದು ನೀರಿನ ಸಣ್ಣ ಡಬ್ಬಿಯೊಂದನ್ನು ಜೋಡಿಸಿಕೊಂಡಿದ್ದಾರೆ. ಅದರಲ್ಲಿ ಬೆರಳು ಒದ್ದೆ ಮಾಡಿಕೊಂಡು ಬಳಿಕ ಟಿಕೆಟ್ ವಿತರಿಸುತ್ತಿದ್ದಾರೆ. ಇಟಿಎಂ ಯಂತ್ರಗಳನ್ನು ನಿರ್ವಾಹಕರಿಗೆ ಒದಗಿಸಲು ಹಲವು ವರ್ಷಗಳಿಂದಬಿಎಂಟಿಸಿ ತಿಣುಕಾಡುತ್ತಲೇ ಇದೆ.

ಎಲೆಕ್ಟ್ರಿಕ್ ಬಸ್‌ಗೆ ಚಾರ್ಜಿಂಗ್ ಸಮಸ್ಯೆ

ಎಲೆಕ್ಟ್ರಿಕ್ ವಾಹನಗಳ ಯುಗಕ್ಕೆ ತೆರೆದುಕೊಳ್ಳುವ ಮೊದಲ ಪ್ರಯತ್ನದಲ್ಲೇ ಬಿಎಂಟಿಸಿ ಹಿಂದೆ ಬಿದ್ದಿದೆ. 90 ಮಿನಿ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳುವ ಪ್ರಯತ್ನವೇ ಇನ್ನೂ ‍ಪೂರ್ಣ ಪ್ರಮಾಣದಲ್ಲಿ ಸಾಕಾರಗೊಂಡಿಲ್ಲ.

ಬಸ್‌ಗಳು ಸಿದ್ಧವಿದ್ದರೂ ಚಾರ್ಜಿಂಗ್ ಸೌಲಭ್ಯ ಇಲ್ಲದಿರುವ ಕಾರಣಕ್ಕೆ ವಿಳಂಬವಾಗುತ್ತಿದೆ ಎಂಬುದನ್ನು ಬಿಎಂಟಿಸಿಯೇ ಹೇಳುತ್ತಿದೆ. ‘ಎಲೆಕ್ಟ್ರಿಕ್ ಬಸ್‌ಗಳನ್ನು ಏಕಾಏಕಿ ಗುತ್ತಿಗೆ ಆಧಾರದಲ್ಲಿ ಪಡೆದುಕೊಂಡಿಲ್ಲ. ಎಲ್ಲ ರೀತಿಯ ಒಪ್ಪಂದ, ಪೂರ್ವ ತಯಾರಿಕೆ ಮಾಡಿಕೊಂಡಿಯೇ ಹೆಜ್ಜೆ ಇಡಲಾಗಿದ್ದರೂ ವಿಳಂಬ ಆಗುವುದೇಕೆ’ ಎಂಬುದು ಪ್ರಯಾಣಿಕರ ಪ್ರಶ್ನೆ.

ಬೇಕಿರುವುದು ಇಚ್ಛಾಶಕ್ತಿ ಮಾತ್ರ

‘ಬಸ್ ಪ್ರಯಾಣಿಕರ ಸಂಖ್ಯೆ ಹೆಚ್ಚಿಸಲು ಹೆಚ್ಚಿನ ಹಣ ಮತ್ತು ಸಮಯ ಬೇಕಿಲ್ಲ. ಬೇಕಿರುವುದು ರಾಜಕೀಯ ಇಚ್ಛಾಶಕ್ತಿ ಮಾತ್ರ’ ಎಂದು ಬಸ್ ಪ್ರಯಾಣಿಕರ ವೇದಿಕೆಯ ಶಾಹೀನ್ ಶಸಾ ಹೇಳಿದರು.

‘ಮೆಟ್ರೊ ರೈಲು ಮಾರ್ಗಕ್ಕೆ ಸಾವಿರಾರು ಕೋಟಿ ಖರ್ಚು ಮಾಡಲಾಗುತ್ತಿದೆ. ಬಸ್ ಆದ್ಯತಾ ಪಥಕ್ಕೆ ಅಷ್ಟೇನೂ ಹಣದ ಅಗತ್ಯ ಇಲ್ಲ. ಇರುವ ರಸ್ತೆಗಳಲ್ಲಿ ಬಸ್ ಆದ್ಯತಾ ಪಥ ಮೀಸಲಿಟ್ಟರೆ ಸಾಕು. ಪ್ರಯಾಣಿಕರನ್ನು ಬಸ್‌ಗಳಿಗೆ ಸೆಳೆಯಬಹುದು ಮತ್ತು ಬೆಂಗಳೂರನ್ನು ಸುಂದರ ನಗರವಾಗಿ ಉಳಿಸಿಕೊಳ್ಳಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT