ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರ್ಯಾಂಡ್ ಬೆಂಗಳೂರು-ದಾರಿ ಹತ್ತಾರು: ರೈಲು ನಿಲ್ದಾಣಗಳಿನ್ನು ಹೈಟೆಕ್ ‘ನಲ್ದಾಣ’

ಯಶವಂತಪುರ, ಕಂಟೋನ್ಮೆಂಟ್‌ ರೈಲು ನಿಲ್ದಾಣಗಳ ಪುನರ್ ಅಭಿವೃದ್ಧಿಗೆ ಯೋಜನೆ
Last Updated 24 ಅಕ್ಟೋಬರ್ 2022, 19:42 IST
ಅಕ್ಷರ ಗಾತ್ರ

ಬೆಂಗಳೂರು: ಯಶವಂತಪುರ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣಗಳು ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಹೈಟೆಕ್‌ ಆಗಲಿವೆ. ಪುನರ್ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಮೂರೇ ವರ್ಷಗಳಲ್ಲಿ ಈ ನಿಲ್ದಾಣಗಳ ಚಿತ್ರಣವೇ ಬದಲಾಗಲಿದೆ. ಪ್ರಯಾಣಿಕರ ಪಾಲಿಗೆ ಇವುಗಳು ನಿಲ್ದಾಣಗಳ ಜತೆಗೆ ‘ನಲ್ದಾಣ’ಗಳಾಗಿ ಕಂಗೊಳಿಸಲಿವೆ.

ಬೆಂಗಳೂರಿನ ನಾಲ್ಕು ಪ್ರಮುಖ ರೈಲು ನಿಲ್ದಾಣಗಳಲ್ಲಿಬೈಯಪ್ಪನಹಳ್ಳಿಯ ಸರ್ ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಈಗಾಗಲೇ ಹೈಟೆಕ್‌ ಆಗಿದೆ. ಯಶವಂತಪುರ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣಗಳ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದರೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಅಭಿವೃದ್ಧಿಗೆ ಮಹಾಯೋಜನೆ ಸಿದ್ಧವಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 20ರಂದು ಬೆಂಗಳೂರಿಗೆ ಭೇಟಿ ನೀಡಿದ್ದಾಗ ಯಶವಂತಪುರ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣಗಳ ಅಭಿವೃದ್ಧಿಗೆ ಅಡಿಗಲ್ಲು ಹಾಕಿದ್ದಾರೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಆರಂಭವಾದರೆ 30 ತಿಂಗಳಲ್ಲಿ ನಿಲ್ದಾಣಗಳು ಹೈಟೆಕ್ ರೂಪ ಪಡೆಯಲಿವೆ. ವಿಮಾನ ನಿಲ್ದಾಣಗಳಲ್ಲಿನ ಮಾದರಿಯಲ್ಲೇ ಹವಾನಿಯಂತ್ರಿತ ಮತ್ತು ಪ್ರಯಾಣಿಕರ ಸೌಲಭ್ಯಗಳು ದೊರೆಯಲಿವೆ.

‘ರೈಲಿನಲ್ಲಿ ಪ್ರಯಾಣಿಸಲು ಟಿಕೆಟ್ ಸಿಕ್ಕರೆ ಸಾಕು, ನಿಲ್ದಾಣಗಳಲ್ಲಿ ಕೂರಲು ಬೆಂಚ್‌ಗಳಿದ್ದರೆ ಸಾಕು ಎಂಬ ಕಾಲ ಈಗಿಲ್ಲ. ಹೈಟೆಕ್ ಸೌಕರ್ಯಗಳನ್ನು ಜನ ಬಯಸುತ್ತಿದ್ದಾರೆ. ಮುಂದಿನ 60 ವರ್ಷಗಳ ಮುಂದಾಲೋಚನೆಯೊಂದಿಗೆ ನಿಲ್ದಾಣಗಳು ಅಭಿವೃದ್ಧಿಗೊಳ್ಳಲಿವೆ’ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗಡೆ ‘ಪ್ರಜಾವಾಣಿ’ಗೆ ತಿಳಿಸಿದರು.

ಪಾರಂಪರಿಕ ಶೈಲಿ ಉಳಿಸಿಕೊಂಡೇ ಅಭಿವೃದ್ಧಿ

ಕಂಟೋನ್ಮೆಂಟ್ ರೈಲು ನಿಲ್ದಾಣದ ಪಾರಂಪರಿಕ ಶೈಲಿಯನ್ನು ಉಳಿಸಿಕೊಂಡೇ ಹೊಸ ವಿನ್ಯಾಸವನ್ನು ನೈರುತ್ಯ ರೈಲ್ವೆ ಸಿದ್ಧಪಡಿಸುತ್ತಿದೆ.

ಈಗಿರುವಂತೆಯೇ ವಸಂತನಗರ ಭಾಗಕ್ಕೆ ಮುಖ್ಯ ಪ್ರವೇಶ ದ್ವಾರ, ಮಿಲ್ಲರ್ಸ್ ರಸ್ತೆ ಕಡೆಗೆ ಎರಡನೇ ಪ್ರವೇಶ ದ್ವಾರ ನಿರ್ಮಿಸಲು ಯೋಜನೆಯಲ್ಲಿ ಪ್ರಸ್ತಾಪಿಸಲಾಗಿದೆ. ಪ್ರವೇಶ ದ್ವಾರಗಳಲ್ಲಿ ಪ್ರಯಾಣಿಕರ ಸಂಚಾರಕ್ಕೆ ತೊಂದರೆ ಆಗದಂತೆ ಎರಡೂ ಕಡೆ ಪ್ರತ್ಯೇಕ ಟಿಕೆಟ್ ವಿತರಿಸುವ ಕೌಂಟರ್‌ಗಳನ್ನು ತೆರೆಯಲು ಉದ್ದೇಶಿಸಿದೆ. ಎರಡೂ ಪ್ರವೇಶ ದ್ವಾರದ ಕಡೆಯೂ ಎರಡು ಮಹಡಿಗಳಲ್ಲಿ ವಾಹನಗಳ ನಿಲುಗಡೆ ತಾಣ ನಿರ್ಮಿಸುವುದನ್ನು ಯೋಜನೆ ಒಳಗೊಂಡಿದೆ.

ಪಾರಂಪರಿಕ ಶೈಲಿಯೇ ಈ ನಿಲ್ದಾಣದ ವಿಶೇಷ. ಅದನ್ನು ಉಳಿಸಿಕೊಂಡು ವಿಶ್ವ ದರ್ಜೆಯ ಸೌಕರ್ಯಗಳನ್ನು ಯಾವ ರೀತಿ ಕಲ್ಪಿಸಬಹುದು ಎಂಬುದಕ್ಕೆ ತಾಂತ್ರಿಕ ತಜ್ಞರ ಸಲಹೆಯನ್ನು ನೈರುತ್ಯ ರೈಲ್ವೆ ಪಡೆಯುತ್ತಿದೆ.‌

ಯಶವಂತಪುರ: ಹೊಸ ವಿನ್ಯಾಸ ಉಳಿಸಿಕೊಳ್ಳಲು ಅಧ್ಯಯನ

ಯಶವಂತಪುರ ರೈಲು ನಿಲ್ದಾಣದ ಹೊರ ಭಾಗವನ್ನು ಇತ್ತೀಚೆಗೆ ಮರು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಈ ವಿನ್ಯಾಸವನ್ನು ಉಳಿಸಿಕೊಂಡು ಅಭಿವೃದ್ಧಿಪಡಿಸುವ ಬಗ್ಗೆಯೂ ಅಧ್ಯಯನ ನಡೆಸಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಹೇಳುತ್ತಾರೆ.

ಹೊರ ಭಾಗದಲ್ಲಿ ವಿಮಾನ ನಿಲ್ದಾಣ ಮಾದರಿಯ ವಿನ್ಯಾಸ, ಕಾರಂಜಿ ಸಹಿತ ಉದ್ಯಾನ, ವಾಹನಗಳ ನಿಲುಗಡೆ ತಾಣದ ಅಭಿವೃದ್ಧಿ ಕಾಮಗಾರಿಗಳನ್ನು ಈಗಾಗಲೇ ನಿರ್ವಹಿಸಲಾಗಿದೆ. ನಿಲ್ದಾಣದ ಒಳಭಾಗದಲ್ಲಿ ಹೈಟೆಕ್ ಸೌಕರ್ಯಗಳನ್ನು ಕಲ್ಪಿಸುವ ಉದ್ದೇಶ ಹೊಸ ಯೋಜನೆಯಲ್ಲಿ ಇದೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.

ಪ್ರತಿ ನಿಲ್ದಾಣವು ವಿಶಾಲವಾದ ಚಾವಣಿ ಪ್ಲಾಜಾವನ್ನು ಹೊಂದಿರಲಿದೆ. ಚಿಲ್ಲರೆ ವ್ಯಾಪಾರ, ಕೆಫೆಟೇರಿಯಾಗಳು, ಮನರಂಜನಾ ಸೌಲಭ್ಯ ಸೇರಿ ಒಂದೇ ಸ್ಥಳದಲ್ಲಿ ಎಲ್ಲ ಪ್ರಯಾಣಿಕ ಸೌಕರ್ಯಗಳನ್ನು ಹೊಂದಿರುತ್ತದೆ ಎಂದು ಅವರು ಹೇಳುತ್ತಾರೆ.

ಯಶವಂತಪುರ ರೈಲು ನಿಲ್ದಾಣದ ವಿನ್ಯಾಸ
ಯಶವಂತಪುರ ರೈಲು ನಿಲ್ದಾಣದ ವಿನ್ಯಾಸ

ಕೆಎಸ್‌ಆರ್ ನಿಲ್ದಾಣಕ್ಕೂ ಹೊಸ ಲುಕ್

ದೇಶದ 199 ರೈಲು ನಿಲ್ದಾಣಗಳ ಅಭಿವೃದ್ಧಿಯಾಗುತ್ತಿದ್ದು, ಅವುಗಳ ಪೈಕಿ 47 ನಿಲ್ದಾಣಗಳ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ.

ಉಳಿದ ನಿಲ್ದಾಣಗಳ ಅಭಿವೃದ್ಧಿಗೆ ಮಹಾಯೋಜನೆ ಸಿದ್ಧಪಡಿಸಲಾಗುತ್ತಿದೆ. ಈ ಪಟ್ಟಿಯಲ್ಲಿ ಕೆಎಸ್‌ಆರ್ ರೈಲು ನಿಲ್ದಾಣವೂ ಸೇರಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಹೇಳುತ್ತಾರೆ.

ಎರಡೂ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಸೌಕರ್ಯ

lರೈಲು ನಿಲ್ದಾಣ ಪ್ರವೇಶಿಸಿದ ಕೂಡಲೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವೇಶಿಸಿದ ಅನುಭವ ದೊರಕಿದಂತೆ ಆಗಲಿದೆ.

lಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ, ಉಪಾಹಾರ ಮಂದಿರ, ಅಂಗಡಿ ಮುಂಗಟ್ಟುಗಳೆಲ್ಲವೂ ಹೈಟೆಕ್ ಸ್ವರೂಪ.

lಹೈಟೆಕ್ ಶೌಚಾಲಯ, ವಿಶಾಲವಾದ ವಿಶ್ರಾಂತಿ ಗೃಹಗಳ ನಿರ್ಮಾಣ.

lಸುಸಜ್ಜಿತ ವಾಹನ ನಿಲುಗಡೆ ತಾಣಗಳ ಅಭಿವೃದ್ಧಿ. ಬಸ್‌, ಆಟೊರಿಕ್ಷಾ ಮತ್ತು ಟ್ಯಾಕ್ಸಿಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ.

lಪ್ರಯಾಣಿಕರ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ಜಾಗ.

lಎರಡೂ ನಿಲ್ದಾಣಗಳು ಸಂಪೂರ್ಣ ಸೌರ ಚಾವಣಿ, ಶೌಚ ನೀರು ಸಂಸ್ಕರಣಾ ಘಟಕ, ಮಳೆ ನೀರು ಸಂಗ್ರಹ ವ್ಯವಸ್ಥೆ.

lಅಂಗವಿಕಲರು, ವೃದ್ಧರ ಅನುಕೂಲಕ್ಕಾಗಿ ಎಸ್ಕಲೇಟರ್, ಲಿಫ್ಟ್‌, ರ್‍ಯಾಂಪ್‌ಗಳ ನಿರ್ಮಾಣ.

ಅಂಕಿ–ಅಂಶ

₹480 ಕೋಟಿ:ಕಂಟೋನ್ಮೆಂಟ್ ರೈಲು ನಿಲ್ದಾಣ ಅಭಿವೃದ್ಧಿಗೆ ಯೋಜನಾ ಮೊತ್ತ

₹400 ಕೋಟಿ:ಯಶವಂತಪುರ ರೈಲು ನಿಲ್ದಾಣ ಅಭಿವೃದ್ಧಿಗೆ ಯೋಜನಾ ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT