ಭಾನುವಾರ, ಜುಲೈ 3, 2022
24 °C
ನಗರಕ್ಕೆ ನೈಸರ್ಗಿಕ ವರದಂತಿರುವ ಅರಣ್ಯ * ಟ್ರೀ ಪಾರ್ಕ್‌ ನಿರ್ಮಾಣದಿಂದ ಜೀವವೈವಿಧ್ಯಕ್ಕೆ ಹಾನಿ ಆತಂಕ

ತುರಹಳ್ಳಿ ಕಾಡು ಕೆಡಿಸಲು ತರಾತುರಿ !

ಗುರು ಪಿ.ಎಸ್‌. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಯಾವುದೇ ನಗರದ ಅಭಿವೃದ್ಧಿಗೆ ಮತ್ತು ಪ್ರಗತಿಗೆ ಪರಿಸರ ಸಮತೋಲನ ಕಾಯ್ದುಕೊಳ್ಳುವುದೂ ಮುಖ್ಯ. ಜಲಮೂಲಗಳನ್ನು, ಅರಣ್ಯ ಸಂಪತ್ತನ್ನು ಕಾಪಾಡಿಕೊಳ್ಳುವುದೂ ಮಹತ್ವದ ವಿಷಯವಾಗಿರುತ್ತದೆ. ಅರಣ್ಯ ಸಂರಕ್ಷಣೆಯು ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಾಗಿರುವ ಈ ಸಂದರ್ಭದಲ್ಲಿ, ನಗರದ ತುರಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಅರಣ್ಯೇತರ ಚಟುವಟಿಕೆ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ಪರಿಸರ ಪ್ರಿಯರನ್ನು ಕೆರಳಿಸಿದೆ.

ರಾಜಧಾನಿಯು ‘ಹಸಿರು ನಗರಿ’ ಎಂದು ಕರೆಸಿಕೊಳ್ಳಲು ಇರುವ ದೊಡ್ಡ ಸಸ್ಯ ಸಂಪತ್ತನ್ನು ಹಾಳುಗೆಡವಬೇಡಿ ಎಂಬ ಒತ್ತಾಯಿಸುವುದರ ಜೊತೆ ಜೊತೆಗೇ, ಅರಣ್ಯ ಪ್ರದೇಶವನ್ನು ಕಡಿದು, ಅದರೊಳಗೆ ‘ಮರಗಳ ಉದ್ಯಾನ’ ನಿರ್ಮಿಸುವ ಅರಣ್ಯ ಇಲಾಖೆಯ ನಿರ್ಧಾರ ಮೂರ್ಖತನದ್ದು ಎಂದೂ ಪರಿಸರ ತಜ್ಞರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ಘೋಷಿಸಿರುವ ‘ವಿಷನ್‌ 2022’ ಯೋಜನೆಗಳ ಪಟ್ಟಿಯಲ್ಲಿ ಈ ಅರಣ್ಯ ಪ್ರದೇಶದಲ್ಲಿ ‘ಮರಗಳ ಉದ್ಯಾನ’ ನಿರ್ಮಿಸುವ ಯೋಜನೆಯೂ ಇದೆ. ಹಾಗೆ ನೋಡಿದರೆ, ಪ್ರತಿ ಎರಡು– ಮೂರು ವರ್ಷಗಳಿಗೊಮ್ಮೆ ರಾಜ್ಯಸರ್ಕಾರದಿಂದ ಇಂತಹ ನಿರ್ಧಾರಗಳು ಪ್ರಕಟವಾಗುತ್ತಲೇ ಇರುತ್ತವೆ. ತುರಹಳ್ಳಿ ಕಿರುಅರಣ್ಯ ಪ್ರದೇಶದಲ್ಲಿ ಅರಣ್ಯೇತರ ಚಟುವಟಿಕೆ ನಡೆಸುವಂತಹ ಯೋಜನೆಗಳನ್ನು ಘೋಷಿಸಲಾಗುತ್ತಿರುತ್ತದೆ. ಒಂದೂವರೆ ಲಕ್ಷಕ್ಕೂ ಹೆಚ್ಚು ಮರಗಳಿರುವ, ‘ಆಮ್ಲಜನಕ ಉತ್ಪಾದನೆಯ ದೊಡ್ಡ ಕಾರ್ಖಾನೆ’ಯಂತಿರುವ ಈ ಅರಣ್ಯವನ್ನು ರಕ್ಷಿಸದೇ ಹೋದರೆ ನಗರದ ‘ಬ್ರ್ಯಾಂಡ್ ಮೌಲ್ಯ’ ಕುಸಿಯುವುದು ನಿಶ್ಚಿತ ಎಂಬ ಆತಂಕ ಅವರದು.

ಪ್ರಾಣಿ, ಪಕ್ಷಿ, ಚಿಟ್ಟೆ, ಸಣ್ಣ ಸಸ್ತನಿಗಳು, ಸರೀಸೃಪ, ಜಿಂಕೆಗಳು, ನವಿಲುಗಳ ಆವಾಸಸ್ಥಾನವಾಗಿದೆ ಈ ಅರಣ್ಯ ಪ್ರದೇಶ. 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸಂರಕ್ಷಿಸಲೇಬೇಕಾದ ಪ್ರಭೇದಗಳಿವು. ‘ಟ್ರೀ’ ಪಾರ್ಕ್‌ನಿಂದ ಈ ಎಲ್ಲ ಪ್ರಭೇದಗಳ ಮೇಲೆ ದುಷ್ಪರಿಣಾಮವಾಗುತ್ತದೆ ಎಂಬ ಆತಂಕ ಇದೆ.

ರಾಷ್ಟ್ರೀಯ ಪಕ್ಷಿಯಾದ ನವಿಲು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿವೆ. ಅವುಗಳ ಸಂತಾನೋತ್ಪತ್ತಿಗೆ, ಬೆಳವಣಿಗೆಗೂ ಈ ಯೋಜನೆಯಿಂದ ತೊಂದರೆಯಾಗಲಿದೆ. ಅರಣ್ಯದಲ್ಲಿರುವ ವಿಶಿಷ್ಟ ಕಲ್ಲಿನ ರಚನೆ ಅಥವಾ ಬಂಡೆಗಳ ಸಾಲು, ನೈಸರ್ಗಿಕವಾಗಿ ನಿರ್ಮಾಣವಾಗಿರುವ ನೀರಿನ ಕಾಲುವೆಗಳು ವನ್ಯಜೀವಿಗಳ ವಾಸಕ್ಕೆ ಹೇಳಿ ಮಾಡಿಸಿದಂತಿವೆ. ಇಲ್ಲಿ ಮನುಷ್ಯ ಚಟುವಟಿಕೆ ಹೆಚ್ಚಾದರೆ ಜೀವವೈವಿಧ್ಯಕ್ಕೆ ಧಕ್ಕೆಯಾಗಲಿದೆ.

ಮತ್ತೊಂದು ವೃಕ್ಷೋದ್ಯಾನವೇಕೆ ?

ಅರಣ್ಯಪ್ರದೇಶವನ್ನು ವೀಕ್ಷಿಸುವ ಆಸಕ್ತಿ ಹೊಂದಿರುವವರಿಗಾಗಿ ನಿರ್ದಿಷ್ಟ ಅರಣ್ಯ ಪ್ರದೇಶದ ಶೇ 5ರಷ್ಟು ಭಾಗವನ್ನು ಇಂತಹ ಉದ್ದೇಶಕ್ಕೆ ಬಳಸಬಹುದು ಎಂಬ ಕಾನೂನು ಇದೆ. ಅದರಂತೆ ಈ ಅರಣ್ಯದಲ್ಲಿ ಸುಮಾರು 10 ಎಕರೆ ಪ್ರದೇಶವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸಿಕೊಳ್ಳಬಹುದು. ಅದರಂತೆ, 2011ರಲ್ಲಿಯೇ 38 ಎಕರೆ ಪ್ರದೇಶದಲ್ಲಿ ಇಲ್ಲೊಂದು ‘ವೃಕ್ಷೋದ್ಯಾನ’ ನಿರ್ಮಾಣ ಮಾಡಲು ಪ್ರಾರಂಭಿಸಿದ ಅರಣ್ಯ ಇಲಾಖೆ, 2018ರಲ್ಲಿ ಅದನ್ನು ಪೂರ್ಣಗೊಳಿಸಿದೆ.

ಯಾವುದೇ ಮಾಹಿತಿ ನೀಡದೇ ಮತ್ತೊಂದು ಟ್ರೀ ಪಾರ್ಕ್‌ ನಿರ್ಮಾಣಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಬುಲ್ಡೋಜರ್‌ಗಳನ್ನು ಅರಣ್ಯದೊಳಗೆ ನುಗ್ಗಿಸಿ ಕೆಲಸವನ್ನೂ ಪ್ರಾರಂಭಿಸಲಾಗಿತ್ತು. ಜನರು ಪ್ರತಿಭಟನೆ ನಡೆಸಿದ ನಂತರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆದರೆ, ಉದ್ದೇಶಿತ ಮರಗಳ ಉದ್ಯಾನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವುದೇ ವಿಸ್ತೃತ ಯೋಜನಾ ವರದಿ ( ಡಿಪಿಆರ್) ಸಿದ್ಧಪಡಿಸಿಲ್ಲ. ರಾಜ್ಯ ವನ್ಯಜೀವಿ ಮಂಡಳಿಯಿಂದ ಅನುಮತಿಯನ್ನೂ ಪಡೆದಿಲ್ಲ. ಅರಣ್ಯ ಪ್ರದೇಶದಲ್ಲಿ ಯಾವುದೇ ಕಾರ್ಯಾದೇಶ ಪಡೆಯದೆ ಅರಣ್ಯೇತರ ಚಟುವಟಿಕೆ ನಡೆಸುವುದು 1980ರ ಅರಣ್ಯ ಸಂರಕ್ಷಣಾ ಕಾಯ್ದೆಯ ಸ್ಪಷ್ಟ ಉಲ್ಲಂಘನೆ. ಈ ಅಂಶಗಳನ್ನೇ ಮುಂದಿಟ್ಟುಕೊಂಡು ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ನಗರಕ್ಕೆ ‘ಪ್ರಾಕೃತಿಕ ವರ’ದಂತಿರುವ ಈ ಪ್ರದೇಶವನ್ನು ಸಂರಕ್ಷಿಸಲೇಬೇಕು ಎಂದು ಪಣ ತೊಟ್ಟಿದ್ದಾರೆ.

ಸ್ಥಳೀಯರ ವಿರೋಧ

ಬಯಲು ಪ್ರದೇಶದಲ್ಲಿ ನಿರ್ಮಿಸಿ

ಮುಖ್ಯಮಂತ್ರಿಯವರೇ ಈ ಯೋಜನೆ ಘೋಷಿಸಿದ್ದಾರೆ. ‘ಟ್ರೀ ಪಾರ್ಕ್‌’ನಿಂದ ಅರಣ್ಯದೊಳಗೆ ಜನ ಸಂಚಾರ ಹೆಚ್ಚಾಗುತ್ತದೆ. ಬಯಲು ಪ್ರದೇಶದಲ್ಲಿ ಸಸಿಗಳನ್ನು ನಿರ್ಮಾಣ ಮಾಡಿ ಮರಗಳ ಉದ್ಯಾನ ಮಾಡಿ.

- ಡಾ. ಪುಟ್ಟಸ್ವಾಮಿ 

 

ಸ್ಥಳೀಯರ ಅಭಿಪ್ರಾಯ ಕೇಳಿಲ್ಲ

ಮೀಸಲು ಅರಣ್ಯಪ್ರದೇಶವಿದು. ಇದನ್ನು ಸಂರಕ್ಷಿಸಬೇಕಾದದ್ದು ಎಲ್ಲರ ಕರ್ತವ್ಯ. ಇಲ್ಲಿ ಪಾರ್ಕಿಂಗ್ ಸ್ಥಳ, ಹೋಟೆಲ್‌, ಶೌಚಾಲಯ ಎಂದು ನಿರ್ಮಿಸುತ್ತಾ ಹಾಳು ಮಾಡುತ್ತಾರೆ. ಈ ಯೋಜನೆ ಬಗ್ಗೆ ಸ್ಥಳೀಯರ ಅಭಿಪ್ರಾಯ ಕೇಳಿಲ್ಲ.

- ಪ್ರಸನ್ನ

ರಸ್ತೆ ಬದಿ ಮರ ಬೆಳೆಸಿ

ಕಾಡು ಹೇಗಿರುತ್ತದೆ ಎಂದು ಮಕ್ಕಳಿಗೆ ತೋರಿಸಲು ನಗರದ ಬಳಿ ಇರುವ ಏಕೈಕ ಅರಣ್ಯಪ್ರದೇಶವಿದು. ಅರಣ್ಯದ ಸುತ್ತ ಇರುವ ಮುಖ್ಯರಸ್ತೆಗಳ ಬದಿಯಲ್ಲಿ ಮರಗಳಿಲ್ಲ. ಅರಣ್ಯ ಇಲಾಖೆ ಅಲ್ಲಿ ಗಿಡಗಳನ್ನು ಬೆಳೆಸಲಿ

- ಕಮಲಾ ಕೃಷ್ಣಮೂರ್ತಿ

 

ಕಾಡು ಕಾಡಂತಿರಲಿ

ಅರಣ್ಯದಲ್ಲಿ ಟ್ರೀ ಪಾರ್ಕ್‌ ಎಂದೆಲ್ಲ ಹೇಳಿ ಕೃತಕ ವಾತಾವರಣ ಸೃಷ್ಟಿಸುವುದು ಬೇಡ. ಕಾಡು ಕಾಡಿನಂತಿರಲಿ. ಲಾಕ್‌ಡೌನ್‌ ಸಂದರ್ಭದಲ್ಲಿ ವಾಹನ–ಜನ ಸಂಚಾರ ಇಲ್ಲದಾಗ ತುರಹಳ್ಳಿ ಅರಣ್ಯ ಹೆಚ್ಚು ಹಸಿರಿನಿಂದ ಕಂಗೊಳಿಸುತ್ತಿತ್ತು. ಹಾಗೆಯೇ ಇರಲು ಬಿಡಿ.

- ವಾಸುಕಿ ಕಶ್ಯಪ್

 

ಶಿಲ್ಪೋದ್ಯಾನ ಅಭಿವೃದ್ಧಿ ಪಡಿಸಿ

ತುರಹಳ್ಳಿ ಅರಣ್ಯಪ್ರದೇಶದ ಹತ್ತಿರದಲ್ಲಿ ಶಿಲ್ಪೋದ್ಯಾನ ನಿರ್ಮಾಣ ಮಾಡಲಾಗಿದೆ. ಕೋಟ್ಯಂತರ ರೂಪಾಯಿ ವೆಚ್ಚದ ಈ ಶಿಲ್ಪೋದ್ಯಾನದಲ್ಲಿ ಮರಗಳನ್ನು ಬೆಳೆಸಲು ಹೆಚ್ಚು ಅವಕಾಶವಿದೆ. ಬೇಕಾದರೆ ಅಲ್ಲಿ ಟ್ರೀ ಪಾರ್ಕ್‌ ಮಾಡಲಿ.

- ಶ್ರೀಕಾಂತ

 

ಅರಣ್ಯದ ನಿರ್ಲಕ್ಷ್ಯ ಬೇಡ 

‘ಟ್ರೀ ಪಾರ್ಕ್‌’ ಬೇಡ ಎಂದ ತಕ್ಷಣವೇ ಸಂಪೂರ್ಣ ಅರಣ್ಯವನ್ನೇ ನಿರ್ಲಕ್ಷಿಸುವಂತಾಗಬಾರದು. ಕಾಡಿನೊಳಗೆ ಪ್ರಾಣಿ–ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಬೇಕು. ಅರಣ್ಯ ಸಂರಕ್ಷಣೆಗೆ ಆದ್ಯತೆ ನೀಡಬೇಕು.

- ಸೌಮ್ಯಾ ಕಶ್ಯಪ್

 

ಇರುವ ಟ್ರೀ ಪಾರ್ಕ್‌ ಅಭಿವೃದ್ಧಿಯಾಗಲಿ

ಈಗಾಗಲೇ ಇರುವ ವೃಕ್ಷೋದ್ಯಾನವನ್ನು ಅರಣ್ಯ ಇಲಾಖೆ ಅಭಿವೃದ್ಧಿ ಪಡಿಸಬೇಕು. ಸಾರ್ವಜನಿಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಎಲ್ಲ ಸೌಲಭ್ಯ ಕಲ್ಪಿಸಬೇಕು. ಈ ಪ್ರದೇಶದ ರಕ್ಷಣೆಗೆ ಸುತ್ತ ತಂತಿ ಬೇಲಿ ನಿರ್ಮಿಸಬೇಕು

- ವಿದ್ಯಾ ಈಶ್ವರ್

 

ಪದೇ ಪದೇ ಪ್ರಸ್ತಾವ

ತುರಹಳ್ಳಿ ಅರಣ್ಯದಲ್ಲಿ ಇಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಬಗ್ಗೆ ಎರಡು ವರ್ಷಗಳಿಗೊಮ್ಮೆ ಘೋಷಣೆಗಳು ಹೊರಡುತ್ತವೆ. ವಿಷನ್‌ 2022 ಪಟ್ಟಿಯಿಂದಲೇ ಈ ಪ್ರಸ್ತಾವವನ್ನು ತೆಗೆದು ಹಾಕಬೇಕು

- ವಿಜೇತಾ ಸಂಜಯ್

 

ಹಿರಿಯ ನಾಗರಿಕರ ಬೆಂಬಲವೂ ಇಲ್ಲ

ಕೆಲವು ಹಿರಿಯ ನಾಗರಿಕರು ವಾಯುವಿಹಾರ ಮಾಡಲು ಇಲ್ಲೊಂದು ಟ್ರೀ ಪಾರ್ಕ್ ಬೇಕು ಎಂದು ಮನವಿ ಮಾಡಿದ್ದರು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹಿರಿಯರು ಯಾರೂ ಇದನ್ನು ಕೇಳಿಲ್ಲ.

- ಶಾಂತಕುಮಾರ್

 

‘ಅರಣ್ಯ ನಾಶ ಎಂಬುದು ತಪ್ಪು’

‘ಅರಣ್ಯ ಇಲಾಖೆಯ ಕೆಲಸ ಮರಗಳನ್ನು ಬೆಳೆಸುವುದೇ ವಿನಾ ಅರಣ್ಯ ನಾಶ ಮಾಡುವುದಲ್ಲ. ‘ಟ್ರೀ ಪಾರ್ಕ್‌’ ಮಾಡುವುದಕ್ಕಾಗಿ ಮರಗಳನ್ನ ಕಡಿಯಲಾಗುತ್ತದೆ ಎಂಬ ವಾದ ತಪ್ಪು’ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್‌) ಸಂಜಯ್ ಮೋಹನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾರ್ವಜನಿಕರಿಂದಲೇ ಬೇಡಿಕೆ ಬಂದಿದ್ದರಿಂದ ಮರಗಳ ಉದ್ಯಾನ ನಿರ್ಮಿಸಲು ಉದ್ದೇಶಿಸಲಾಗಿತ್ತು. ಈಗ ಕೆಲವು ಸ್ಥಳೀಯರು ಈ ಯೋಜನೆ ಬೇಡ ಎನ್ನುತ್ತಿದ್ದಾರೆ. ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದಲೇ ಈ ಯೋಜನೆ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿತ್ತು. ಅವರಿಗೆ ಇಷ್ಟವಿಲ್ಲದಿದ್ದರೆ ಬೇರೆ ಕಡೆಗೆ ಟ್ರೀ ಪಾರ್ಕ್‌ ನಿರ್ಮಾಣ ಮಾಡುತ್ತೇವೆ. ತುರಹಳ್ಳಿ ಅರಣ್ಯ ಪ್ರದೇಶದಲ್ಲಿಯೇ ಇದನ್ನು ಮಾಡಬೇಕು ಎಂಬ ಉದ್ದೇಶವೂ ನಮಗಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ಅರಣ್ಯದ ಒಂದು ಬದಿಯಲ್ಲಿ ಟ್ರೀ ಪಾರ್ಕ್‌ ಇದೆ, ಮತ್ತೊಂದೇಕೆ ಎಂಬ ಪ್ರಶ್ನೆ ಎಲ್ಲರೂ ಕೇಳುತ್ತಿದ್ದಾರೆ. ಶೋಭಾ ಫಾರೆಸ್ಟ್‌ ವ್ಯೂ ಬದಿಯಲ್ಲಿ ಸಾವಿರಾರು ಜನ ವಾಸಿಸುತ್ತಿದ್ದಾರೆ. ಮತ್ತೊಂದು ಬದಿ ಅಂದರೆ ಬ್ರಿಗೇಡ್ ಒಮೆಗಾ ಅಪಾರ್ಟ್‌ಮೆಂಟ್‌ ಬಳಿಯೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಎಲ್ಲರಿಗೂ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮತ್ತೊಂದು ಟ್ರೀ ಪಾರ್ಕ್‌ ನಿರ್ಮಾಣ ಯೋಜನೆ ರೂಪಿಸಲಾಗಿತ್ತು’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು