ಮಂಗಳವಾರ, ಜೂನ್ 15, 2021
25 °C

ಬಿಬಿಎಂಪಿ ಆಯುಕ್ತರ ಆದೇಶ ವಾಪಸ್‌: ಸಿ.ಎಂ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳ ಗುತ್ತಿಗೆಗೆ ಪಡೆದ ಗುತ್ತಿಗೆದಾರರು ಕನಿಷ್ಠ ಎರಡರಿಂದ ಮೂರು ವರ್ಷಗಳ ಬಿಲ್‌ ಮೊತ್ತ ಬಿಡುಗಡೆಗೆ ಒತ್ತಾಯಿಸಬಾರದು’ ಎಂದು ಬಿಬಿಎಂಪಿ ಆಯುಕ್ತರು ಹೊರಡಿಸಿರುವ ಆದೇಶವನ್ನು ತಕ್ಷಣ ವಾಪಸ್‌ ಪಡೆಯಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

ವಿಧಾನ ಪರಿಷತ್‌ನಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಕಾಂಗ್ರೆಸ್ಸಿನ ಪಿ.ಆರ್. ರಮೇಶ್, ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ಗುತ್ತಿಗೆಗೆ ಪಡೆಯುವವರು ಕಾಮಗಾರಿ ಮುಗಿದ ನಂತರ ಕನಿಷ್ಠ 2–3 ವರ್ಷಗಳ ಹಣ ಬಿಡುಗಡೆಗೆ ಒತ್ತಾಯಿಸಬಾರದು. ಈ ಸಂಬಂಧ ₹200ರ ಬಾಂಡ್ ಪೇಪರ್‌ನಲ್ಲಿ ಮುಚ್ಚಳಿಕೆ ಬರೆದುಕೊಡಬೇಕು ಎಂದು ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ’ ಎಂದರು.

‘ಆಯುಕ್ತರ ಈ ಆದೇಶದಿಂದ ಸಾಲ ಮಾಡಿ ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ಗುತ್ತಿಗೆದಾರರ ಸಾಲ ತೀರಿಸಲು ಸಾಧ್ಯವಾಗುವುದಿಲ್ಲ. ಇಂಥ ಆದೇಶಗಳಿಂದ ಬಿಬಿಎಂಪಿ ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ಗುತ್ತಿಗೆದಾರರು ಕಾಮಗಾರಿಗಳನ್ನು ನಿರ್ವಹಿಸಲು ಮುಂದೆ ಬರುವುದಿಲ್ಲ. ತಕ್ಷಣ ಈ ಆದೇಶ ಹಿಂಪಡೆಯಬೇಕು’  ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸದನದಲ್ಲಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ‘ಈ ಕುರಿತು ಬಿಬಿಎಂಪಿ ಆಯುಕ್ತರ ಜೊತೆ ಚರ್ಚೆ ನಡೆಸಲಾಗುವುದು. ಆದೇಶವನ್ನು ತಕ್ಷಣ ಹಿಂಪಡೆಯುವಂತೆ ಸೂಚಿಸುತ್ತೇನೆ’ ಎಂದು ಭರವಸೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು