ಮಂಗಳವಾರ, ಮೇ 11, 2021
26 °C
ನ್ಯಾಯಾಲಯ ಆದೇಶ ಪಾಲಿಸಲು ಒತ್ತಾಯ

ಬೆಂಗಳೂರು ವಿವಿ: ಬ್ಯಾಕ್‌ಲಾಗ್ ನಿಯಮ ಉಲ್ಲಂಘನೆ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್‌ ಅವರು ರಾಜ್ಯ ಸರ್ಕಾರದ ವಿಶೇಷ ಬ್ಯಾಕ್‌ಲಾಗ್‌ ನಿಯಮಗಳನ್ನು ಉಲ್ಲಂಘಿಸಿ ನೇಮಕಾತಿಗಳಲ್ಲಿ ಅಕ್ರಮ ಎಸಗಿದ್ದಾರೆ’ ಎಂದು ಸಹಾಯಕ ಪ್ರಾಧ್ಯಾಪಕ ಹುದ್ದೆ ಆಕಾಂಕ್ಷಿ ಡಾ.ಎಚ್.ಕೆ. ರಾಘವೇಂದ್ರ ಆರೋಪಿಸಿದ್ದಾರೆ.

‘ಸಹಾಯಕ ಪ್ರಾಧ್ಯಾಪಕರ ಆಯ್ಕೆಗೆ ನಡೆದ ಸಂದರ್ಶನದಲ್ಲಿ ಆಯ್ಕೆ ಸಮಿತಿಯು ಅರ್ಹ ಅಭ್ಯರ್ಥಿಗಳ ಶೈಕ್ಷಣಿಕ ವಿದ್ಯಾರ್ಹತೆ, ಅನುಭವ, ಶೈಕ್ಷಣಿಕ ಪ್ರಕಟಣೆ ಮುಂತಾದವುಗಳನ್ನು ಕಡೆಗಣಿಸಿ, ಅನರ್ಹ ಅಭ್ಯರ್ಥಿಗಳಿಗೆ ಹೆಚ್ಚು ಅಂಕಗಳನ್ನು ನೀಡುವ ಮೂಲಕ ನೇಮಕಾತಿ ಆದೇಶವನ್ನು ನೀಡಲಾಗಿದೆ’ ಎಂದು ಅವರು ದೂರಿದ್ದಾರೆ.

‘37 ವರ್ಷದ ನಾನು ಹೈದರಾಬಾದ್‌ನ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪದವಿ ಪಡೆದಿದ್ದೇನೆ. ಅಲ್ಲದೆ, ಐದು ವರ್ಷದ ಬೋಧನಾ ಅನುಭವ ಹೊಂದಿರುವುದಲ್ಲದೆ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ, ಹಲವು ಪತ್ರಿಕೆಗಳನ್ನು ಪ್ರಕಟಿಸಿದ್ದೇನೆ’ ಎಂದು ಅವರು ಹೇಳಿದ್ದಾರೆ.

‘ಬೆಂಗಳೂರು ವಿಶ್ವವಿದ್ಯಾಲಯವು 2018ರಲ್ಲಿ ಹೊರಡಿಸಿದ ಅಧಿಸೂಚನೆಯಂತೆ, ರಾಜ್ಯ ಸರ್ಕಾರದ ವಿಶೇಷ ಬ್ಯಾಕ್‌ಲಾಗ್‌ ನಿಯಮಗಳ ಪ್ರಕಾರ, ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದೆ. 2019ರಲ್ಲಿ ಸಂದರ್ಶನಕ್ಕೆ ಹಾಜರಾಗಿದ್ದೆ’ ಎಂದು ಅವರು ತಿಳಿಸಿದ್ದಾರೆ.

‘ನಿಯಮದ ಅನ್ವಯ, 29ರಿಂದ 40 ವರ್ಷ ವಯಸ್ಸಿನವರಿಗೆ ಈ ಹುದ್ದೆಗೆ ಪರಿಗಣಿಸಬೇಕಾಗಿತ್ತು. ಆದರೆ, ಕುಲಪತಿಯವರ ಅಧ್ಯಕ್ಷತೆಯ ಆಯ್ಕೆ ಸಮಿತಿಯು 24 ವರ್ಷದ ಮಹಿಳಾ ಅಭ್ಯರ್ಥಿಯೊಬ್ಬರಿಗೆ ನೇಮಕಾತಿ ಆದೇಶ ನೀಡಿತು. ಸಿಂಡಿಕೇಟ್‌ ಒಪ್ಪಿಗೆ ಪಡೆದ ದಿನವೇ ಅಂದರೆ 2019ರ ಡಿ.27ರಂದು ಈ ನೇಮಕ ಆದೇಶವನ್ನು ಕುಲಪತಿ ನೀಡಿದ್ದಾರೆ. ಇದನ್ನು ಪ್ರಶ್ನಿಸಿ ರಾಜ್ಯ ಹೈಕೋರ್ಟ್‌ ಮೊರೆ ಹೋಗಿದ್ದೆ. ಆ ಮಹಿಳೆಯ ನೇಮಕಾತಿಯನ್ನು ನ್ಯಾಯಾಲಯ ಅನೂರ್ಜಿತಗೊಳಿಸಿದೆ’ ಎಂದೂ ಅವರು ಹೇಳಿದ್ದಾರೆ. 

‘ಆಯ್ಕೆಯಾಗಿದ್ದ ಮಹಿಳೆಗೆ ಸಂದರ್ಶನದಲ್ಲಿ 41.5 ಅಂಕಗಳನ್ನು ನೀಡಲಾಗಿತ್ತು. ಎರಡನೆಯನಾಗಿದ್ದ ನನಗೆ 35.5 ಅಂಕಗಳನ್ನು ನೀಡಲಾಗಿದೆ. ಮಹಿಳೆಯ ಆಯ್ಕೆ ಅನೂರ್ಜಿತಗೊಂಡಿರುವುದರಿಂದ ಮೊದಲನೆಯನಾದ ನನಗೇ ನೇಮಕಾತಿ ಆದೇಶ ನೀಡಬೇಕು. ಆದರೆ, ಸಂದರ್ಶನದಲ್ಲಿ ವಿಫಲನಾದ ಅಭ್ಯರ್ಥಿಗೆ ಆಯ್ಕೆ ಸಮಿತಿಯನ್ನು ಪ್ರಶ್ನಿಸುವ ಯಾವುದೇ ಹಕ್ಕು ಇರುವುದಿಲ್ಲ ಎಂಬ ಸುಪ್ರೀಂಕೋರ್ಟಿನ ಅದೇಶ ಉಲ್ಲೇಖಿಸಿ ಕುಲಪತಿಯವರು ನನಗೆ ಅವಕಾಶ ನಿರಾಕರಿಸುತ್ತಿದ್ದಾರೆ’ ಎಂದೂ ರಾಘವೇಂದ್ರ ದೂರಿದ್ದಾರೆ.

‘ಯುಜಿಸಿ ನಿಯಮದಂತೆ ನೇಮಕ’

‘ಸಂದರ್ಶನ ಪ್ರಕ್ರಿಯೆ ಸಂಪೂರ್ಣವಾಗಿ ವಿಡಿಯೊ ಚಿತ್ರೀಕರಣವಾಗಿದೆ. ಸಂದರ್ಶನದಲ್ಲಿ ಯಾರು ಉತ್ತಮವಾಗಿ ಉತ್ತರಿಸಿದ್ದಾರೋ ಅಂತಹ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದು ಕುಲಪತಿ ಪ್ರೊ. ಕೆ.ಆರ್. ವೇಣುಗೋಪಾಲ್ ಹೇಳಿದರು.

‘ಈಗಿನ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ರಾಜ್ಯ ಸರ್ಕಾರದ ನಿಯಮಾವಳಿ ಪ್ರಕಾರ ನೇಮಕ ಮಾಡಿಕೊಳ್ಳಬೇಕೋ, ಯುಜಿಸಿ ನಿಯಮದಂತೆ ನೇಮಕ ಮಾಡಿಕೊಳ್ಳಬೇಕೋ ಎಂದು ಸಲಹೆ ಕೇಳಲಾಗಿತ್ತು. ಯುಜಿಸಿ ನಿಯಮದಂತೆ ಮಾಡಿ ಎಂದು ಸರ್ಕಾರ ಹೇಳಿದೆ. ಅದರಂತೆ, 24 ವರ್ಷದವರನ್ನೂ ನೇಮಕ ಮಾಡಿಕೊಳ್ಳಬಹುದು. ಆ ನಿಯಮ ಪಾಲಿಸಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

‘ಹೈಕೋರ್ಟ್‌ನಲ್ಲಿ ಆದೇಶವಿದ್ದರೂ, ಮಹಿಳಾ ಅಭ್ಯರ್ಥಿ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ. ಆ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಅದು ಬಂದ ನಂತರ ಆಯ್ಕೆ ಸಮಿತಿ ಮತ್ತೆ ಸಭೆ ಸೇರಬೇಕು. ಈ ವಿಷಯ ಸಿಂಡಿಕೇಟ್‌ ಮುಂದೆ ಬರಬೇಕು. ಇದರಲ್ಲಿ ಕುಲಪತಿ ಒಬ್ಬರದೇ ಪಾತ್ರ ಇರುವುದಿಲ್ಲ’ ಎಂದೂ ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.