ಸೋಮವಾರ, ಏಪ್ರಿಲ್ 12, 2021
25 °C
ಬೆಂಗಳೂರು ವಿ.ವಿ.ಕುಲಪತಿ ವಿರುದ್ದ ಎಸ್.ಸಿ. ಎಸ್.ಟಿ ಕಲ್ಯಾಣ ಸಮಿತಿಗೆ ದೂರು

ನೇಮಕಾತಿ, ಬಡ್ತಿಯಲ್ಲಿ ನಿಯಮ ಉಲಂಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನೇಮಕಾತಿ ಹಾಗೂ ಬಡ್ತಿ ನಿಯಮಗಳನ್ನು ಸರಿಯಾಗಿ ಪಾಲಿಸದೆ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್ ತಾರತಮ್ಯ ಎದುರಿಸುತ್ತಿದ್ದಾರೆ ಎಂದು ವಿಧಾನಸಭೆಯ ಅನುಸೂಚಿತ ಜಾತಿ, ಪಂಗಡಗಳ (ಎಸ್‌ಸಿ,ಎಸ್‌ಟಿ) ಕಲ್ಯಾಣ ಸಮಿತಿಗೆ ದೂರು ನೀಡಲಾಗಿದೆ. 

ವಿಶ್ವವಿದ್ಯಾಲಯದ ಕುಲಸಚಿವರಾದ (ಆಡಳಿತ) ಕೆ. ಜ್ಯೋತಿ, ಸಿಂಡಿಕೇಟ್ ಸದಸ್ಯರು, ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಸಮಿತಿಗೆ ದೂರು ನೀಡಿದರು.

ಸಮಿತಿಯ ಅಧ್ಯಕ್ಷ ಎಂ.ಪಿ.ಕುಮಾರಸ್ವಾಮಿ ನೇತೃತ್ವದ ಸಮಿತಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ದೂರು ಸಲ್ಲಿಸಲಾಯಿತು.

‘ಯಾವುದೇ ನೇಮಕಾತಿಯಲ್ಲಿ ಕುಲಪತಿಯವರು ನೀತಿ–ನಿಯಮ ಪಾಲಿಸಿಲ್ಲ’ ಎಂದು ಕುಲಸಚಿವರು ದೂರು ನೀಡಿದರು.

ಅವ್ಯವಸ್ಥೆಗೆ ಅಸಮಾಧಾನ:
ಸ್ನಾತಕೋತ್ತರ ಪದವೀಧರರ ವಸತಿ ನಿಲಯಕ್ಕೆ ಭೇಟಿ ನೀಡಿದ ಎಂ.ಪಿ. ಕುಮಾರಸ್ವಾಮಿ ಅಲ್ಲಿನ ಅವ್ಯವಸ್ಥೆ ಕಂಡು ಅಸಮಾಧಾನ ವ್ಯಕ್ತಪಡಿಸಿದರು.

ಮುರಿದ ಬಾಗಿಲುಗಳು, ಒಂದೇ ಕೊಠಡಿಯಲ್ಲಿ ಏಳು ವಿದ್ಯಾರ್ಥಿಗಳು ಇದ್ದ ಸ್ಥಿತಿ ಕಂಡ ಅವರು, ಕೂಡಲೇ ಅವ್ಯವಸ್ಥೆ ಸರಿ ಪಡಿಸುವಂತೆ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಮಿತಿಯ ಸದಸ್ಯರು ಮತ್ತು ಶಾಸಕರಾದ ಎಚ್.ಕೆ.ಕುಮಾರಸ್ವಾಮಿ, ಅವಿನಾಶ್ ಜಾಧವ್, ಆಶ್ವಿನಿ ಕುಮಾರ್, ಪ್ರೊ.ಲಿಂಗಣ್ಣ ಹಾಜರಿದ್ದರು.

ಪಟ್ಟಿ ನೀಡಲಿ: ‘ಒಬ್ಬ ಅಭ್ಯರ್ಥಿಯನ್ನೂ ಅಕ್ರಮವಾಗಿ ನೇಮಕ ಮಾಡಿಲ್ಲ ಮತ್ತು ಯಾರಿಗೂ ನಿಯಮಕ್ಕೆ ವಿರುದ್ಧವಾಗಿ ಬಡ್ತಿ ನೀಡಿಲ್ಲ. ಬಡ್ತಿ ಪ್ರಕ್ರಿಯೆ ನಡೆಯುವ ಸಂದರ್ಭದಲ್ಲಿ ಈಗಿನ ಕುಲಸಚಿವರೂ ಇರಲಿಲ್ಲ. ಆರೋಪ ಮಾಡುವವರು, ಯಾರನ್ನು ಅಕ್ರಮವಾಗಿ ನೇಮಕ ಮಾಡಲಾಗಿದೆ ಮತ್ತು ಯಾರಿಗೆ ನಿಯಮ ಬಾಹಿರವಾಗಿ ಬಡ್ತಿ ನೀಡಲಾಗಿದೆ ಎಂಬ ಪಟ್ಟಿ ನೀಡಲಿ’ ಎಂದು ಪ್ರೊ. ವೇಣುಗೋಪಾಲ್ ‘ಪ್ರಜಾವಾಣಿ’ಗೆ ಹೇಳಿದರು.

‘ಈ ಪ್ರಕ್ರಿಯೆ ನಿಯಮ ಬಾಹಿರವಾಗಿ ನಡೆದಿದ್ದರೆ ಈ ವೇಳೆಗಾಗಲೇ ಹಲವರು ನ್ಯಾಯಾಲಯದ ಮೊರೆ ಹೋಗಬೇಕಾಗಿತ್ತು. ಸಿಂಡಿಕೇಟ್‌ ಅನುಮತಿ ಪಡೆದೇ ಎಲ್ಲ ಪ್ರಕ್ರಿಯೆ ನಡೆಸಲಾಗಿದೆ. ನನ್ನ ಆದೇಶದಲ್ಲಿ ಯಾವುದೇ ತಪ್ಪಾಗಿಲ್ಲ. ತಪ್ಪಾಗಿದ್ದರೆ, ಅದನ್ನು ಹಿಂಪಡೆಯುವ ಅವಕಾಶವೂ ಇದೆ’ ಎಂದು ಅವರು ಸ್ಪಷ್ಟಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು