ಮಂಗಳವಾರ, ಆಗಸ್ಟ್ 16, 2022
27 °C
ಕುಲಪತಿ–ಕುಲಸಚಿವರ ಮುಸುಕಿನ ಗುದ್ದಾಟ

ಬೆಂಗಳೂರು ವಿವಿ ಸಿಂಡಿಕೇಟ್ ಸಭೆ ಮೊಟಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಮತ್ತು ಕುಲಸಚಿವರ ನಡುವಿನ ಮುಸುಕಿನ ಗುದ್ದಾಟಕ್ಕೆ ಶುಕ್ರವಾರ ನಡೆಯಬೇಕಿದ್ದ ಸಿಂಡಿಕೇಟ್ ಸಭೆ ಮೊಟಕುಗೊಂಡಿದೆ. ಆನ್‌ಲೈನ್‌ ಸಭೆ ಬದಲು ನೇರ ಅಥವಾ ಆಫ್‌ಲೈನ್‌ ಸಭೆ ನಡೆಸುವಂತೆ ಸಿಂಡಿಕೇಟ್‌ನ ಕೆಲವು ಸದಸ್ಯರು ಮಾಡಿಕೊಂಡ ಮನವಿಗೆ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ ಒಪ್ಪದಿದ್ದಾಗ ಸಭೆ ಮೊಟಕುಗೊಂಡಿದೆ. ಕುಲಪತಿಯವರ ನಡೆ ಖಂಡಿಸಿ ಕೆಲವು ಸದಸ್ಯರು ರಾಜ್ಯಪಾಲರಿಗೂ ದೂರು ನೀಡಿದ್ದಾರೆ.

‘ಮೂರು ತಿಂಗಳಿನಿಂದ ಸಿಂಡಿಕೇಟ್‌ ಸಭೆ ಕರೆದಿರಲಿಲ್ಲ. ಪದೇ ಪದೇ ಮನವಿ ಸಲ್ಲಿಸಿದ ನಂತರ ಶುಕ್ರವಾರ ಆನ್‌ಲೈನ್‌ ಸಭೆ ಕರೆಯಲಾಗಿತ್ತು. ಆದರೆ, ಆನ್‌ಲೈನ್‌ ಸಭೆಯಲ್ಲಿ ಯಾವುದೇ ಪ್ರಶ್ನೆ ಕೇಳಲು ಸಾಧ್ಯವಾಗುವುದಿಲ್ಲ. ತಾಂತ್ರಿಕ ಅಡಚಣೆ ಮಾಡುವುದು ಅಥವಾ ಮ್ಯೂಟ್‌ ಮಾಡುವ ಕೆಲಸವೂ ನಡೆಯುತ್ತಿದೆ. ಇದಕ್ಕಾಗಿ ನೇರವಾಗಿ (ಆಫ್‌ಲೈನ್‌) ಸಭೆ ನಡೆಸಲು ಕುಲಪತಿಯವರು ಒಪ್ಪಲಿಲ್ಲ. ಈ ಸಂಬಂಧ ರಾಜ್ಯಪಾಲರು ಮತ್ತು ಉನ್ನತ ಶಿಕ್ಷಣ ಸಚಿವರಿಗೆ ದೂರು ನೀಡಿದ್ದೇವೆ’ ಎಂದು ಸಿಂಡಿಕೇಟ್‌ ಸದಸ್ಯ ಡಾ. ಎಚ್. ಸುಧಾಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕುಲಸಚಿವರಾದ (ಆಡಳಿತ) ಡಾ.ಕೆ. ಜ್ಯೋತಿ ಅವರು ಹುದ್ದೆಯಿಂದ ನಿರ್ಗಮಿಸುವವರೆಗೂ ಆಫ್‌ಲೈನ್‌ ಸಭೆ ಕರೆಯುವುದಿಲ್ಲ ಎಂದು ಕುಲಪತಿಯವರು ನೇರವಾಗಿ ನಮ್ಮೆದುರೇ ಹೇಳಿದ್ದಾರೆ. ಇವರಿಬ್ಬರು ಮುಸುಕಿನ ಗುದ್ದಾಟದಲ್ಲಿ ಶೈಕ್ಷಣಿಕ ಚಟುವಟಿಕೆಗಳು ಕುಂಠಿತಗೊಂಡಿವೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ರಾತ್ರಿ 11ಗಂಟೆಗೆ ಸಭೆಯ ಅಜೆಂಡಾವನ್ನು ಮೇಲ್‌ ಮಾಡಿ, ಮರುದಿನವೇ ಸಭೆ ಇದೆ ಎಂದು ತಿಳಿಸುತ್ತಾರೆ. ಪ್ರಶ್ನಿಸಲು ಮುಂದಾದರೆ ನಾನು ಹೇಳಿದಂತೆಯೇ ನಡೆಯಬೇಕು ಎಂಬಂತೆ ಕುಲಪತಿ ನಡೆದುಕೊಳ್ಳುತ್ತಿದ್ದಾರೆ. ಮೊದಲು ಸಭೆ ನಡೆಯುತ್ತಿದ್ದಾಗ ಕುಲಸಚಿವರು ಪ್ರತಿಯೊಂದನ್ನೂ ಕಾನೂನುಬದ್ಧವಾಗಿ ಪ್ರಶ್ನಿಸುತ್ತಿದ್ದರು. ಅದರ ನಂತರ ಸರಿಯಾಗಿ ಸಭೆಯನ್ನೇ ನಡೆಸುತ್ತಿಲ್ಲ’ ಎಂದೂ ಅವರು ದೂರಿದರು.

‘ಎರಡು ವರ್ಷಗಳಿಂದ ಘಟಿಕೋತ್ಸವ ನಡೆಸಿಲ್ಲ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಕುಲಪತಿ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಬೇರೆ ಕಾಲೇಜಿಗೆ ಸೇರಬೇಕಾದ ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಗಿದೆ’ ಎಂದು ಹೇಳಿದರು.

ಸಭೆಯ ಕುರಿತಂತೆ ಪ್ರತಿಕ್ರಿಯೆ ನೀಡಿದ ಕುಲಸಚಿವರಾದ ಡಾ.ಕೆ. ಜ್ಯೋತಿ, ‘ಕುಲಪತಿಯವರು ಆನ್‌ಲೈನ್‌ ಸಭೆ ಕರೆದಿದ್ದರು. ಅದರಂತೆ ನಾನು ನನ್ನ ಕೊಠಡಿಯಿಂದಲೇ ಸಭೆಗೆ ಹಾಜರಾಗಿದ್ದೆ. ಆಫ್‌ಲೈನ್‌ ತರಗತಿ ನಡೆಸುವಂತೆ ಸಿಂಡಿಕೇಟ್‌ ಸದಸ್ಯರು ಒತ್ತಾಯಿಸಿದರು. ಸಭೆ ಮೊಟಕುಗೊಂಡಿತು’ ಎಂದಷ್ಟೇ ಹೇಳಿದರು.

‘ವಿಶ್ವವಿದ್ಯಾಲಯಗಳ ನಿಯಮದ ಅನ್ವಯ ಕಾರ್ಯನಿರ್ವಹಿಸಲು ಕುಲಪತಿಯವರು ನನಗೆ ಅಡ್ಡಿಪಡಿಸುತ್ತಿದ್ದಾರೆ. ಈ ರೀತಿ ಮಾಡದಂತೆ ಅವರಿಗೆ ಸೂಚನೆ ನೀಡಬೇಕು. ಪರೋಕ್ಷವಾಗಿ ನನಗೆ ಬೆದರಿಕೆ ಒಡ್ಡುವ ಸನ್ನಿವೇಶ ನಿರ್ಮಾಣವಾದರೆ ಸ್ವಯಂರಕ್ಷಣೆಗಾಗಿ ಕುಲಪತಿಯವರ ವಿರುದ್ಧ ದೂರು ದಾಖಲಿಸಲು ಅನುಮತಿ ನೀಡಬೇಕು’ ಎಂದು ಜ್ಯೋತಿಯವರು ಈ ಹಿಂದೆ ಸರ್ಕಾರಕ್ಕೆ ದೂರು ನೀಡಿದ್ದರು.

‘ಅಧೀನ ಅಧಿಕಾರಿಯಿಂದ ಅಪಹಾಸ್ಯ ಮಾಡಿಸಿಕೊಳ್ಳಬೇಕೇ’
‘ಕೆಳಹಂತದ ಅಧಿಕಾರಿಯೊಬ್ಬರಿಯೊಬ್ಬರು ಪ್ರಾಮಾಣಿಕ ಕುಲಪತಿ ಮೇಲೆ ದೂರು ನೀಡಿದರೆ, ಅಪಹಾಸ್ಯ ಮಾಡಿದರೆ ಸುಮ್ಮನಿರಬೇಕೇ’ ಎಂದು ಪ್ರಶ್ನಿಸಿದ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ, ‘ಬೆದರಿಕೆ ಒಡ್ಡಲಾಗುತ್ತಿದೆ. ಸ್ವಯಂರಕ್ಷಣೆ ನೀಡಬೇಕು ಎಂದು ಕುಲಸಚಿವರು ದೂರು ನೀಡಿದ್ದರು. ಆಫ್‌ಲೈನ್‌ ತರಗತಿ ನಡೆದು ಅವರಿಗೆ ಏನಾದರೂ ತೊಂದರೆಯಾದರೆ ಆ ಆರೋಪ ನನ್ನ ಮೇಲೆ ಬರುವುದಿಲ್ಲವೇ’ ಎಂದೂ ಹೇಳಿದರು.

‘ಆನ್‌ಲೈನ್‌ ಸಭೆಯ ವೇಳೆ ಯಾವುದೇ ತಾಂತ್ರಿಕ ತೊಂದರೆಗಳು ಇರಲಿಲ್ಲ. 12 ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಆಫ್‌ಲೈನ್‌ ಸಭೆ ನಡೆಸುವಂತೆ ಕೆಲವು ಸದಸ್ಯರು ಒತ್ತಾಯಿಸಿದ್ದು ನಿಜ.  ಈ ಸಂಬಂಧ ರಾಜ್ಯಪಾಲರಿಗೆ ಅಥವಾ ಸರ್ಕಾರಕ್ಕೆ ಯಾರೇ ದೂರು ನೀಡಿದ್ದರೂ ಸೂಕ್ತ ಉತ್ತರ ಕೊಡುತ್ತೇನೆ’ ಎಂದೂ ತಿಳಿಸಿದರು.

‘ಘಟಿಕೋತ್ಸವಕ್ಕೆ ಆಹ್ವಾನಿಸಲು ಗಣ್ಯರ ದಿನಾಂಕ ಹೊಂದಾಣಿಕೆಯಾಗಿಲ್ಲ. ಗಣ್ಯರ ಅನುಮತಿ ಸಿಕ್ಕಕೂಡಲೇ ಘಟಿಕೋತ್ಸವ ದಿನಾಂಕ ಪ್ರಕಟಿಸಲಾಗುವುದು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇದ್ದುದರಿಂದ ಎರಡು ತಿಂಗಳಿನಿಂದ ಸಿಂಡಿಕೇಟ್ ಸಭೆ ಕರೆಯಲಾಗಿರಲಿಲ್ಲ’ ಎಂದೂ ಸ್ಪಷ್ಟಪಡಿಸಿದರು.

‘ಅಜೆಂಡಾಗಳನ್ನು ಸಭೆಯ ಕೊನೆಯ ಕ್ಷಣದವರೆಗೂ ಕಳುಹಿಸಲು ಅವಕಾಶವಿದೆ’ ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು