ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಕ್ಕೆ ಬೆಂಕಿ– ಕಡಿವಾಣ ಹಾಕದ ಪಾಲಿಕೆ

ಬೇಸಿಗೆಯಲ್ಲಿ ಹೆಚ್ಚುತ್ತಿದೆ ಕಸ ಸುಡುವ ಪ್ರವೃತ್ತಿ
Last Updated 28 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಬೇಸಿಗೆಯ ಬಿಸಿ ಏರುತ್ತಿದ್ದಂತೆಯೇ ನಗರದಲ್ಲಿ ಕಸದ ರಾಶಿಗೆ ಬೆಂಕಿ ಹಾಕುವ ಪ್ರಕರಣಗಳೂ ಹೆಚ್ಚು
ತ್ತಿವೆ. ಶಿವಾಜಿನಗರದ ಪೊಲೀಸ್‌ ವಸತಿ ಗೃಹಗಳ ಸಮುಚ್ಚಯದ ಆವರಣದಲ್ಲಿ ಕಸಕ್ಕೆ ಹಚ್ಚಿದ್ದ ಬೆಂಕಿಗೆ ಬಾಲಕಿ ಹರ್ಷಾಲಿ ಬಲಿಯಾದ ದುರ್ಘಟನೆ ಬಳಿಕವೂ ಇಂತಹ ಕೃತ್ಯ ತಡೆಯಲು ಪಾಲಿಕೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿಲ್ಲ.

ಶಿವಾಜಿನಗರದ ಘಟನೆಯ ಕಹಿನೆನಪು ಮರೆಯಾಗುವ ಮುನ್ನವೇ ಬೆನ್ನಲ್ಲೇ ಫ್ರೇಜರ್‌ಟೌನ್‌ನಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಆಂಬುಲೆನ್ಸ್‌ ಒಂದು ಕಸದ ರಾಶಿಗೆ ಹಾಕಿದ ಬೆಂಕಿಗೆ ಮಂಗಳವಾರ ಆಹುತಿಯಾಗಿದೆ.

ಬೇಸಿಗೆಯಲ್ಲಿ ರಸ್ತೆ ಬದಿಯ ಮರಗಳ ಒಣಗಿದ ಎಲೆಗಳು ಉರುಳುತ್ತವೆ. ಪೌರ ಕಾರ್ಮಿಕರು ಅದನ್ನು ಗುಡಿಸಿ ರಾಶಿ ಹಾಕುತ್ತಾರೆ. ಆದರೆ, ಬಹುತೇಕ ಸಂದರ್ಭಗಳಲ್ಲಿ ಕಸದ ರಾಶಿ ಹಾಗೆಯೇ ಉಳಿದಿರುತ್ತದೆ. ಇದಕ್ಕೆ ದಾರಿಹೋಕರು ಬೀಡಿ ಸಿಗರೇಟು ಸೇದಿ ಎಸೆದರೆ ಆಕಸ್ಮಿಕವಾಗಿಯೂ ಬೆಂಕಿ ಬೀಳುತ್ತದೆ.

ಸಾರ್ವಜನಿಕ ಸ್ಥಳಗಳಲ್ಲಿ, ಕೆಲವು ಆಯಕಟ್ಟಿನ ಜಾಗಗಳಲ್ಲಿ ರಾಶಿ ಬೀಳುದ ಕಸವನ್ನು ಬೇರೆ ಕಡೆ ಸಾಗಿಸುವುದಕ್ಕೆ ಸೂಕ್ತ ವ್ಯವಸ್ಥೆ ಇರುವುದಿಲ್ಲ. ಅದನ್ನು ಸೂಕ್ತ ರೀತಿಯಲ್ಲಿ ವಿಲೇ ಮಾಡುವ ಬದಲು ಕೆಲವರು ಸುಡುವ ಸುಲಭದ ದಾರಿಯ ಮೊರೆ ಹೋಗುತ್ತಾರೆ.

ಸಗಟು ಕಸವನ್ನು ವಿಲೇ ಮಾಡುವುದಕ್ಕೆ ಪ್ರತ್ಯೇಕ ವ್ಯವಸ್ಥೆ ಇದೆ. ಇದನ್ನು ಪೌರಕಾರ್ಮಿಕರು ಒಯ್ಯುವುದಿಲ್ಲ. ಕೆಲವು ಖಾಸಗಿ ಸಂಸ್ಥೆಗಳು ಅದನ್ನು ಒಯ್ದು ವಿಲೇ ಮಾಡುವುದಕ್ಕೆ ಶುಲ್ಕವನ್ನೂ ಪಡೆಯುತ್ತವೆ. ಕೆಲವೊಮ್ಮೆ ಮನೆಗಳಲ್ಲಿ ಸಭೆ ಸಮಾರಂಭಗಳಿದ್ದಾಗ ಸಂಗ್ರಹ
ವಾಗುವ ಕಸವನ್ನು ಸಾಗಿಸಲು ಖಾಸಗಿ ಸಂಸ್ಥೆಯನ್ನು ಹುಡುಕಿಕೊಂಡು ಹೋಗುವಷ್ಟು ವ್ಯವಧಾನ ಜನರಿಗೂ ಇರುವು
ದಿಲ್ಲ. ಅಂತಹವರು ರಾತ್ರೋರಾತ್ರಿ ಕಸಕ್ಕೆ ಬೆಂಕಿ ಹಚ್ಚುತ್ತಾರೆ. ಇನ್ನು ಕೆಲವರು ಖಾಸಗಿಯವರಿಗೆ ಶುಲ್ಕ ಕೊಡುವುದನ್ನು ತಪ್ಪಿಕೊಳ್ಳುವ ಸಲುವಾಗಿ ಸಗಟು ಕಸವನ್ನು ಸುಡುತ್ತಾರೆ.

‘ಘನತ್ಯಾಜ್ಯ ನಿರ್ವಹಣೆ ನಿಯಮಗಳ ಪ್ರಕಾರ ಒಣಕಸಕ್ಕೆ ಬೆಂಕಿ ಹಚ್ಚುವುದು ಅಪರಾಧ. ಅದನ್ನು ಮರುಬಳಕೆ ಮಾಡಬೇಕು. ಮರುಬಳಕೆ ಸಾಧ್ಯವಿಲ್ಲದ ಕಸವನ್ನು ಮಾತ್ರ ಭೂಭರ್ತಿ ಪ್ರದೇಶದಲ್ಲಿ ವಿಲೇವಾರಿ ಮಾಡಬೇಕು. ಕಸಕ್ಕೆ ಬೆಂಕಿ ಹಚ್ಚುವುದರಿಂದ ವಾಯು
ಮಾಲಿನ್ಯ ಹೆಚ್ಚುತ್ತದೆ. ಇದು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ ಹೆಚ್ಚಳಕ್ಕೂ ಕಾರಣವಾಗುತ್ತದೆ. ಇನ್ನೊಂದೆಡೆ ಬೆಂಕಿ ವ್ಯಾಪಿಸಿ ಆಸ್ತಿಪಾಸ್ತಿಗೆ ನಷ್ಟ ಉಂಟಾಗುವ ಅಪಾಯವೂ ಇದೆ’ ಎನ್ನುತ್ತಾರೆ ಪಾಲಿಕೆಯ ಹೆಚ್ಚುವರಿ ಆಯುಕ್ತ (ಘನತ್ಯಾಜ್ಯ ವಿಲೇವಾರಿ) ರಂದೀಪ್‌.

‘ಕಸಕ್ಕೆ ಬೆಂಕಿ ಹಚ್ಚಿದರೆ ಅಂಥವರನ್ನು ಪತ್ತೆಹಚ್ಚಿ ದಂಡ ವಿಧಿಸುತ್ತೇವೆ. ಯಾರಾದರೂ ಕಸವನ್ನು ಸುಡುತ್ತಿದ್ದರೆ ತಕ್ಷಣವೇ ಸಾರ್ವಜನಿಕರು ಪಾಲಿಕೆ ಅಧಿಕಾರಿಗಳ ಗಮನಕ್ಕೆ ತರಬಹುದು. ಮಾರ್ಷಲ್‌ಗಳಿಗೆ ಮಾಹಿತಿ ನೀಡುತ್ತೇವೆ. ಸ್ಥಳಕ್ಕೆ ಧಾವಿಸಿ ದಂಡ ವಿಧಿಸುತ್ತಾರೆ’ ಎಂದು ಸರ್ಫರಾಜ್‌ ಖಾನ್‌ ತಿಳಿಸಿದರು.

ಪೊಲೀಸ್‌ ಇಲಾಖೆಯವರೇ ಹೀಗೆ ಮಾಡಿದರೆ ಹೇಗೆ?

ತ್ಯಾಜ್ಯಕ್ಕೆ ಬೆಂಕಿ ಹಚ್ಚುವುದು ತಪ್ಪು ಎಂದು ಗೊತ್ತಿರುವ ಪೊಲೀಸ್‌ ಇಲಾಖೆಯವರೇ ತಮ್ಮ ವಸತಿಗೃಹಗಳ ಸಮುಚ್ಚಯದಲ್ಲಿ ಕಸಕ್ಕೆ ಬೆಂಕಿ ಹಚ್ಚಿದರೆ ಹೇಗೆ?

ಶಿವಾಜಿನಗರದ ಪೊಲೀಸ್‌ ವಸತಿಗೃಹಗಳ ಸಮುಚ್ಚಯದ ಆವರಣದಲ್ಲಿ ಕಸಕ್ಕೆ ಬೆಂಕಿ ಹಚ್ಚಿದ ಪ್ರಕರಣದ ಕುರಿತು ಬಿಬಿಎಂಪಿ ಜಂಟಿ ಆಯುಕ್ತ (ಘನತ್ಯಾಜ್ಯ ವಿಲೇವಾರಿ) ಸರ್ಫರಾಜ್‌ ಖಾನ್‌ ಅವರ ಪ್ರತಿಕ್ರಿಯೆ ಇದು.

‘10 ಕೆ.ಜಿ.ಗಿಂತ ಹೆಚ್ಚು ಕಸ ಸಂಗ್ರಹವಾದರೆ ಅದನ್ನು ಪಾಲಿಕೆ ಸಗಟು ಕಸ ಎಂದೇ ಪರಿಗಣಿಸುತ್ತದೆ. ಅದನ್ನು ಸಗಟು ಕಸ ವಿಲೇವಾರಿ ಮಾಡುವ ಸಂಸ್ಥೆಯವರಿಗೆ ನೀಡಬೇಕು. ಅದು ಪೊಲೀಸ್‌ ಅಧಿಕಾರಿಗಳ ವಸತಿ ಸಮುಚ್ಚಯವಿರಲಿ, ವಿಧಾನಸೌಧವೇ ಆಗಿರಲಿ. ಸಗಟು ಕಸವನ್ನು ಪಾಲಿಕೆಯವರು ವಿಲೇ ಮಾಡಬೇಕು ಎಂದು ಯಾರೂ ನಿರೀಕ್ಷೆ ಮಾಡಬಾರದು’ ಎಂದು ಅವರು ಸ್ಪಷ್ಟಪಡಿಸಿದರು.

‘ಇತ್ತೀಚೆಗೆ ಹಲಸೂರು ಕೆರೆಯ ಬಳಿ ಸೇನಾ ಸಿಬ್ಬಂದಿ ಕಸವನ್ನು ಸುರಿದು ಬೆಂಕಿ ಹಚ್ಚಿದ್ದಾರೆ. ಜವಾಬ್ದಾರಿಯುತವಾಗಿ ನಡೆದುಕೊಳ್ಳ ಬೇಕಾದವರೇ ಹೀಗೆ ಮಾಡಿದರೆ ಹೇಗೆ’ ಎಂದು ಪ್ರಶ್ನಿಸುತ್ತಾರೆ ಖಾನ್‌. ಈ ಬಗ್ಗೆ ತಪಾಸಣೆ ನಡೆಸಿ ವರದಿ ನೀಡುವಂತೆ ಸ್ಥಳೀಯ ಆರೋಗ್ಯಾಧಿಕಾರಿಗೆ ಸೂಚಿಸಿದ್ದೇನೆ ಎಂದು ಅವರು ತಿಳಿಸಿದರು.
ಶಿವಾಜಿನಗರದ ಪೊಲೀಸ್‌ ವಸತಿ ಸಮುಚ್ಚಯದ ಆವರಣದಲ್ಲಿ ಉರಿಯುತ್ತಿದ್ದ ಕಸದ ರಾಶಿಗೆ ಬಿದ್ದು ಕಬ್ಬನ್‌ಪಾರ್ಕ್ ಸಂಚಾರ ಠಾಣೆ ಹೆಡ್ ಕಾನ್‌ಸ್ಟೆಬಲ್ ಲೋಕೇಶಪ್ಪ ಅವರ ಮಗು ಹರ್ಷಾಲಿ ಮಾ. 13ರಂದು ಮೃತಪಟ್ಟಿತ್ತು.

₹ 5000 ದಂಡ

‘ ಕಸಕ್ಕೆ ಬೆಂಕಿ ಹಚ್ಚಿದವರಿಗೆ ₹ 500 ದಂಡ ವಿಧಿಸಲಾಗುತ್ತದೆ. ದಂಡದ ಮೊತ್ತವನ್ನು ₹ ಐದು ಸಾವಿರಕ್ಕೆ ಹೆಚ್ಚಿಸಲು ಪಾಲಿಕೆ ನಿರ್ಣಯ ಕೈಗೊಂಡಿದೆ.

ಆದರೆ, ಇದಕ್ಕೆ ಇನ್ನೂ ನಗರಾಭಿವೃದ್ಧಿ ಇಲಾಖೆಯ ಅನುಮೋದನೆ ಸಿಕ್ಕಿಲ್ಲ’ ಸರ್ಫರಾಜ್‌ ಖಾನ್‌ ’ಪ್ರಜಾವಾಣಿ’ಗೆ ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT