ಗುರುವಾರ , ಅಕ್ಟೋಬರ್ 29, 2020
20 °C
ಒಳ ಚರಂಡಿ, ರಸ್ತೆಯೆಲ್ಲಾ ರಾಡಿ ಭಾಗ– 4

ರಾಚೇನಹಳ್ಳಿ: ಹೆಜ್ಜೆ ಹೆಜ್ಜೆಗೂ ಕೆಸರು

ಮನೋಹರ್ ಎಂ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಳೆ ಬಂದರೆ ಇಲ್ಲಿನ ರಸ್ತೆಗಳಲ್ಲಿ ಹೆಜ್ಜೆ ಇಡಲು ಆತಂಕ, ಆಗಾಗ್ಗೆ ರಸ್ತೆಯ ಕೆಸರಿನಲ್ಲಿ ಸಿಲುಕಿಕೊಳ್ಳುವ ವಾಹನಗಳು, ಕೊಳಚೆ ನೀರು ಕಟ್ಟಿಕೊಳ್ಳುವ ಚರಂಡಿಗಳು, ದುರ್ವಾಸನೆಯಲ್ಲೇ ಜೀವನ ನಡೆಸುತ್ತಿರುವ ಅಸಹಾಯಕ ಜನರು...

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಥಣಿಸಂದ್ರ ವಾರ್ಡ್‌ನ ರಾಚೇನಹಳ್ಳಿ ನಿವಾಸಿಗಳ ನಿತ್ಯದ ಗೋಳು ಇದು.

110 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯಡಿಯಲ್ಲಿ ಕಳೆದ ವರ್ಷ ಜಲಮಂಡಳಿಯು ಕಾವೇರಿ ನೀರು ಹಾಗೂ ಒಳಚರಂಡಿ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಆರಂಭಿಸಿತ್ತು. ಕಾಮಗಾರಿ ಆರಂಭವಾಗಿ ವರ್ಷ ಉರುಳಿದರೂ ಬಡಾವಣೆಗೆ ಕಾವೇರಿ  ನೀರು ತಲುಪಿಲ್ಲ. ಆದರೆ, ಚೆನ್ನಾ
ಗಿದ್ದ ರಸ್ತೆಗಳೆಲ್ಲಾ ಹಾಳಾಗಿ ಹೋಗಿವೆ. ಮಳೆ ಬಂದರಂತೂ ಇಲ್ಲಿನ ಸ್ಥಿತಿ ದೇವರಿಗೇ ಪ್ರೀತಿ. ರಸ್ತೆಯ ಗುಂಡಿಗಳಲ್ಲಿ ಕೆಸರು ಸಂಗ್ರಹವಾಗಿ ವಾಹನಗಳು ಸಿಲುಕಿಕೊಳ್ಳುವುದಂತೂ ಇಲ್ಲಿ ಮಾಮೂಲಿ.

ಮಾನ್ಯತಾ ಟೆಕ್‌ ಪಾರ್ಕ್‌ ಪಕ್ಕದಲ್ಲೇ ಇರುವ ಅಂಜನಾದ್ರಿ ಬಡಾವಣೆಯಲ್ಲಿ ಪೇಯಿಂಗ್‌ ಗೆಸ್ಟ್‌ (ಪಿ.ಜಿ) ಸೌಕರ್ಯ ಒದಗಿಸುವ ಕಟ್ಟಡಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಖಾಸಗಿ ಕಂಪನಿಗಳಲ್ಲಿ ಉದ್ಯೋಗ ನಿರ್ವಹಿಸುವ ಟೆಕಿಗಳು ಈ ಬಡಾವಣೆಯ ಪಿ.ಜಿ.ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ.   

ನೀರಿನ ಕೊಳವೆ ಅಳವಡಿಕೆ ಕಾಮಗಾರಿಗಾಗಿ ರಸ್ತೆಗಳ ಡಾಂಬರು ಅಗೆಯಲಾಗಿದೆ. ಸ್ಥಳಿಯರೇ ಸ್ವಂತ ಖರ್ಚಿನಲ್ಲಿ ಮನೆ ಮುಂದೆ ಮಣ್ಣು ಹಾಕಿಕೊಂಡು ರಸ್ತೆಯನ್ನು ತಕ್ಕಮಟ್ಟಿಗೆ ಸರಿಪ‍ಡಿಸಿಕೊಂಡಿದ್ದರು. ಆದರೆ, ಮಳೆ ಬಂದಾಗ ವಾಹನಗಳ ಓಡಾಟದಿಂದ ಈ ರಸ್ತೆಗಳು ಹಳ್ಳಗಳಾಂತಾಗಿವೆ. ‘ಈ ದುಸ್ಥಿತಿ ಬಗ್ಗೆ ಹಲವು ಬಾರಿ ‍ಪಾಲಿಕೆಗೆ ಮನವಿ ಸಲ್ಲಿಸಿದರೂ ಯಾವ ಅಧಿಕಾರಿಯೂ ಇತ್ತ ಮುಖ ಮಾಡಿಲ್ಲ’ ಎಂದು ಸ್ಥಳೀಯರು ದೂರುತ್ತಾರೆ.‌ 

‘ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿದ್ದವು. ಒಳಚರಂಡಿ, ಕುಡಿಯುವ ನೀರಿನ ಕೊಳವೆ ಅಳವಡಿಸಲು ತರಾತುರಿಯಲ್ಲಿ ಇಲ್ಲಿನ ರಸ್ತೆಗಳನ್ನು ಅಗೆದರು. ಕಾಮಗಾರಿ ಅರ್ಧಕ್ಕೆ ನಿಂತಿರುವು
ದರಿಂದ ಬಡಾವಣೆಯ ರಸ್ತೆಗಳೆಲ್ಲಾ ಗುಂಡಿಮಯವಾಗಿದೆ’ ಎಂದು ಸ್ಥಳೀಯ ನಿವಾಸಿ ಮಹಮದ್‌ ಅಲಿ ಬೇಸರ ವ್ಯಕ್ತಪಡಿಸಿದರು.

‘ಪಾಲಿಕೆಗೆ ಕಾಯದೆ ಸ್ಥಳೀಯರೇ ಸೇರಿ ₹60 ಸಾವಿರ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಿಕೊಂಡಿದ್ದೆವು. ಒಳಚರಂಡಿ ಕಾಮಗಾರಿಗಾಗಿ ಚೆನ್ನಾಗಿದ್ದ ರಸ್ತೆಯನ್ನೂ ಕೆಡವಿದ್ದಲ್ಲದೇ, ಕೊಳಚೆ ನೀರು ಮನೆಗಳ ಮುಂದೆ ನಿಲ್ಲುವಂತೆ ಮಾಡಿದ್ದಾರೆ’ ಎಂದು ದೂರಿದರು. ‘ಕಾಮಗಾರಿಯನ್ನು ಹಂತಹಂತವಾಗಿ ಅನುಷ್ಠಾನಗೊಳಿಸಬಹುದಾಗಿತ್ತು. ಅಗತ್ಯವಿದ್ದ ರಸ್ತೆಗಳನ್ನು ಮಾತ್ರ ಅಗೆದು ಪೈಪ್‌ಲೈನ್‌ ಅಳವಡಿಸಿದ್ದರೆ ಜನ ಬದಲಿ ರಸ್ತೆ ಬಳಸಬಹುದಾಗಿತ್ತು. ಇಡೀ ಬಡಾವಣೆಯ ಎಲ್ಲ ರಸ್ತೆಗಳ ಸ್ಥಿತಿ ಒಂದೇ ಆಗಿದೆ. ನಾವೀಗ ಅಸಹಾಯಕರಾಗಿದ್ದೇವೆ. ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸಲು ಸಾಧ್ಯವಾಗದ ಮೇಲೆ ಅವುಗಳನ್ನು ಕೈಗೆತ್ತಿಕೊಂಡಿದ್ದಾದರೂ ಏಕೆ’ ಎಂದು ನಿವಾಸಿ ತೌಸಿಫ್ ಆಕ್ರೋಶ ಹೊರಹಾಕಿದರು.

ಕೊಳಚೆ ನೀರು ಹರಿವಿಗೆ ಮಾರ್ಗವೇ ಇಲ್ಲ: ‘ಬಡಾವಣೆಯ ಎಲ್ಲ ರಸ್ತೆಗಳನ್ನು ಕೆಡವಿಗೆದ ಕಾರಣ ಇಲ್ಲಿನ ಚರಂಡಿಗಳೆಲ್ಲ ಮಣ್ಣಿನಿಂದ ತುಂಬಿಕೊಂಡಿದ್ದು, ಕೊಳಚೆ ನೀರು ಸಮರ್ಪಕವಾಗಿ ಹರಿಯದೆ ಅಲ್ಲಲ್ಲೇ ಕಟ್ಟಿಕೊಂಡಿದೆ. ಮಳೆ ಸುರಿದರಂತೂ ಕೊಳಚೆ ನೀರು ರಸ್ತೆಯಲ್ಲೇ ನಿಂತಿರುತ್ತದೆ. ರಸ್ತೆ ಸರಿಪಡಿಸುವ ಮುನ್ನ ಇಲ್ಲಿ ಕಟ್ಟಿಕೊಂಡಿರುವ ಚರಂಡಿಗಳನ್ನು ಸ್ವಚ್ಛಗೊಳಿಸಿ, ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳಬೇಕು’ ಎಂದು ನಿವಾಸಿ ಮಹೇಶ್‌ ಒತ್ತಾಯಿಸಿದರು.

‘ಕಾಮಗಾರಿ ಪೂರ್ಣಗೊಳಿಸಲು ಅನುದಾನ ಕೊರತೆ ಇದೆ. ಇದರಿಂದಲೇ ಕಾಮಗಾರಿ ನಿಧಾನವಾಗಿ ಸಾಗಿದೆ. ಅನುದಾನ ಬಿಡುಗಡೆ ಮಾಡುವ ಬಗ್ಗೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ. ಆರು ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಅಂಜನಾದ್ರಿ ಬಡಾವಣೆಯ ಸಮಸ್ಯೆಗಳು ಪರಿಹಾರವಾಗ
ಲಿವೆ’ ಎಂದು ಥಣಿಸಂದ್ರ ವಾರ್ಡ್‌ನ ಪಾಲಿಕೆ ಸದಸ್ಯೆ ಕೆ.ಎಂ.ಮಮತಾ, ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಮಗಾರಿ ವಿಳಂಬ–ನೀರಿನ ಅಭಾವ’

‘ಕಾವೇರಿ ಪೈಪ್‌ಲೈನ್‌ ಕಾಮಗಾರಿ ಆರಂಭವಾಗಿದ್ದನ್ನು ಕಂಡು, ಇನ್ನು ಕುಡಿಯುವ ನೀರಿನ ಸಮಸ್ಯೆ ನೀಗಲಿದೆ ಎಂದು ನಿಟ್ಟುಸಿರು ಬಿಟ್ಟೆವು. ಆದರೆ, ಇಂದು ಅದೇ ಕಾಮಗಾರಿ ಬಳಿಕ ಇಲ್ಲಿ ನೀರಿನ ಅಭಾವ ಮತ್ತಷ್ಟು ಜಾಸ್ತಿ ಆಗಿದೆ. ಪಾಲಿಕೆಯಿಂದ ತಿಂಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಅದೂ, ಒಂದು ಮನೆಗೆ
ನಾಲ್ಕು ಬಿಂದಿಗೆ ಮಾತ್ರ. ಅದನ್ನೇ  ಒಂದು ತಿಂಗಳು ಬಳಸಬೇಕು. ಹಣ ಪಾವತಿಸಿ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಖರೀದಿಸುತ್ತಿದ್ದೇವೆ’ ಎಂದು ಸ್ಥಳೀಯ ನಿವಾಸಿ ಮುಬೀನಾ ಅಳಲು ತೋಡಿಕೊಂಡರು. 

ವ್ಯಾಪಾರಕ್ಕೆ ಹಿನ್ನಡೆ’

‘ರಸ್ತೆಗಳು ಸರಿ ಇಲ್ಲದ ಕಾರಣ ಬಡಾವಣೆಯಲ್ಲಿ ಬಾಡಿಗೆ ಮನೆಗಳಿಗೆ ಬೇಡಿಕೆ ಕುಸಿದಿದೆ. ಇಲ್ಲಿನ ಅಂಗಡಿಗಳಲ್ಲಿ ವ್ಯಾಪಾರವೂ ಕ್ಷೀಣಿಸಿದೆ. ಸರಕು ಸಾಮಗ್ರಿ ಹೊತ್ತು ಬರುವ ಭಾರಿ ವಾಹನಗಳ ಚಾಲಕರು ಅಂಗಡಿಗಳವರೆಗೆ ಬರಲು ಹೆದರುತ್ತಾರೆ. ಅಪೂರ್ಣ ಕಾಮಗಾರಿಯಿಂದ ಇಲ್ಲಿನ ವ್ಯಾಪಾರ ವಹಿವಾಟಿಗೂ ಹೊಡೆತ ಬಿದ್ದಿದೆ’ ಎಂದು ಅಂಗಡಿ ಮಾಲೀಕ ಹರೀಶ್‌ ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು