ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತನಾಡಬೇಡ ಎಂದಿದ್ದಕ್ಕೆ ಮಹಿಳಾ ಲೆಕ್ಕಾಧಿಕಾರಿ ಕೊಲೆ: ಕಚೇರಿ ಕ್ಯಾಬ್ ಚಾಲಕ ಬಂಧನ

ಮಾತನಾಡಬೇಡ ಎಂದಿದ್ದಕ್ಕೆ ಹತ್ಯೆ: ಹಳ್ಳದಲ್ಲಿ ಶವ ಪತ್ತೆ
Last Updated 10 ಮಾರ್ಚ್ 2023, 3:14 IST
ಅಕ್ಷರ ಗಾತ್ರ

ಬೆಂಗಳೂರು: ಹೊಸಕೋಟೆ ಬಳಿಯ ಕಂಪನಿಯೊಂದರ ಲೆಕ್ಕಾಧಿಕಾರಿ ದೀಪಾ (48) ಅವರನ್ನು ಹತ್ಯೆ ಮಾಡಿ ಹಳ್ಳದಲ್ಲಿ ಮೃತದೇಹ ಎಸೆದು ಪರಾರಿಯಾಗಿದ್ದ, ಅದೇ ಕಂಪನಿಯ ಕ್ಯಾಬ್ ಚಾಲಕ ಭೀಮರಾಯ್ (22) ಎಂಬುವವರನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ತಮಿಳುನಾಡಿನ ದೀಪಾ, ಹಲವು ವರ್ಷಗಳಿಂದ ಇಂದಿರಾನಗರದ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರ ಫ್ಲ್ಯಾಟ್‌ನಲ್ಲಿ ಒಂಟಿಯಾಗಿ ನೆಲೆಸಿದ್ದರು. ಅವಿವಾಹಿತರಾಗಿದ್ದ ಅವರು, ನಿತ್ಯವೂ ಕ್ಯಾಬ್‌ನಲ್ಲಿ ಕೆಲಸಕ್ಕೆ ಹೋಗಿಬರುತ್ತಿದ್ದರು. ಇವರನ್ನು ಕಚೇರಿಗೆ ಕರೆದೊಯ್ಯುತ್ತಿದ್ದ ಆರೋಪಿ ಭೀಮರಾಯ್, ಫೆ. 27ರಂದು ಕೊಲೆ ಮಾಡಿ ಪರಾರಿಯಾಗಿದ್ದ’ ಎಂದು ಬಾಗಲೂರು ಪೊಲೀಸರು ಹೇಳಿದರು.

‘ಫೆ. 27ರಂದು ದೀಪಾ ನಾಪತ್ತೆಯಾಗಿದ್ದ ಬಗ್ಗೆ ಅವರ ಚಿಕ್ಕಪ್ಪ, ಇಂದಿರಾನಗರ ಠಾಣೆಗೆ ದೂರು ನೀಡಿದ್ದರು. ಸಾತನೂರು ಹೊಸಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಫೆ. 28ರಂದು ಮೃತದೇಹ ಪತ್ತೆಯಾಗಿತ್ತು. ಆರಂಭದಲ್ಲಿ ಗುರುತು ಪತ್ತೆಯಾಗಿರಲಿಲ್ಲ.

ಮೃತದೇಹವನ್ನು ಆಸ್ಪತ್ರೆಯಲ್ಲಿ ಇರಿಸಿ, ಎಲ್ಲ ಠಾಣೆಗಳಿಗೆ ಫೋಟೊ ಸಮೇತ ಮಾಹಿತಿ ರವಾನಿಸಲಾಗಿತ್ತು. ಇಂದಿರಾನಗರ ಪೊಲೀಸರು, ದೀಪಾ ಮೃತದೇಹವೆಂದು ಅನುಮಾನ ವ್ಯಕ್ತಪಡಿಸಿದ್ದರು. ಸಂಬಂಧಿಕರನ್ನು ಆಸ್ಪತ್ರೆಗೆ ಕರೆಸಿದಾಗ, ಮೃತದೇಹ ಗುರುತಿಸಿ
ದರು’ ಎಂದು ಪೊಲೀಸರು ತಿಳಿಸಿದರು.

ಹಲವು ವರ್ಷಗಳ ಸಲುಗೆ: ‘ಕಲಬುರಗಿಯ ಭೀಮರಾಯ್, ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ. ಹುಣಸಮಾರನಹಳ್ಳಿಯಲ್ಲಿ ಸಂಬಂಧಿಕರ ಮನೆಯಲ್ಲಿ ವಾಸವಿದ್ದ. ಕಚೇರಿ ಕ್ಯಾಬ್ ಚಾಲಕನಾಗಿ ವೃತ್ತಿ ಆರಂಭಿಸಿದ್ದ’ ಎಂದು ಪೊಲೀಸರು ಹೇಳಿದರು.

‘ದೀಪಾ ಅವರಿಗೆ ತಂದೆ– ತಾಯಿ ಇರಲಿಲ್ಲ. ಚಿಕ್ಕಪ್ಪ ಆಶ್ರಯದಲ್ಲಿ ಬೆಳೆದಿದ್ದರು. ಕೆಲಸಕ್ಕೆ ಸೇರಿದ ಮೇಲೆ, ಅಪಾರ್ಟ್‌ಮೆಂಟ್‌ ಸಮುಚ್ಚಯದ ಫ್ಲ್ಯಾಟ್‌ನಲ್ಲಿ ಪ್ರತ್ಯೇಕವಾಗಿ ವಾಸವಿದ್ದರು. ಅವರನ್ನು ನಿತ್ಯವೂ ಕಚೇರಿಗೆ ಕರೆದೊಯ್ಯುತ್ತಿದ್ದ ಭೀಮರಾಯ್, ಸಲುಗೆ ಬೆಳೆಸಿದ್ದ. ಇಬ್ಬರೂ ಆಗಾಗ ಜಗಳ ಮಾಡಿಕೊಳ್ಳುತ್ತಿದ್ದರು’ ಎಂದು ತಿಳಿಸಿದರು.

ರಸ್ತೆಯಲ್ಲಿ ಜಗಳ, ಕೊಲೆ
‘ಫೆ. 27ರಂದು ಸಂಜೆ ದೀಪಾ ಅವರನ್ನು ಕ್ಯಾಬ್‌ನಲ್ಲಿ ಕರೆದೊಯ್ಯುತ್ತಿದ್ದ ಆರೋಪಿ, ಮಾರ್ಗಮಧ್ಯೆ ಜಗಳ ಮಾಡಿದ್ದ. ಹಲಸೂರು ಠಾಣೆ ವ್ಯಾಪ್ತಿಯ ಕೇಂಬ್ರಿಡ್ಜ್‌ ರಸ್ತೆಯಲ್ಲಿ ಕ್ಯಾಬ್ ನಿಲ್ಲಿಸಿದ್ದ. ಆತನ ವರ್ತನೆಯಿಂದ ಕೋಪಗೊಂಡಿದ್ದ ದೀಪಾ, ಕ್ಯಾಬ್‌ನಿಂದ ಇಳಿದು ನಡೆದುಕೊಂಡು ಹೊರಟಿದ್ದರು. ‘ನನ್ನ ಜೊತೆ ಮಾತನಾಡಬೇಡ. ಕರೆ ಸಹ ಮಾಡಬೇಡ. ನಿನ್ನ ನಂಬರ್ ಬ್ಲಾಕ್ ಮಾಡುತ್ತೇನೆ’ ಎಂದಿದ್ದರು. ಅಷ್ಟಕ್ಕೇ ಕೋಪಗೊಂಡ ಆರೋಪಿ, ಕ್ಯಾಬ್‌ನಲ್ಲಿದ್ದ ರಾಡ್‌ನಿಂದ ದೀಪಾ ಮುಖಕ್ಕೆ ಹೊಡೆದಿದ್ದ’ ಎಂದು ಪೊಲೀಸರು ಹೇಳಿದರು.

‘ರಕ್ಷಣೆಗಾಗಿ ದೀಪಾ ಕೂಗಾಡಿದ್ದರು. ಪುನಃ ಹಲ್ಲೆ ಮಾಡಿದ್ದ ಆರೋಪಿ, ಅವರ ವೇಲ್‌ನಿಂದಲೇ ಕುತ್ತಿಗೆಗೆ ಬಿಗಿದು ಹತ್ಯೆ ಮಾಡಿದ್ದ. ಬಳಿಕ, ಕ್ಯಾಬ್‌ನಲ್ಲಿ ಮೃತದೇಹ ಇಟ್ಟುಕೊಂಡು ಸಾತನೂರು ಹೊಸಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದ’ ಎಂದು ತಿಳಿಸಿದರು.

‘ಅವರಿಬ್ಬರ ನಡುವಿನ ಸಂಬಂಧ ಹಾಗೂ ವೈಯಕ್ತಿಕ ದ್ವೇಷದಿಂದಾಗಿ ಕೊಲೆ ನಡೆದಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿ ಭೀಮರಾಯ್‌ನನ್ನು ಕಸ್ಟಡಿಗೆ ಪಡೆಯಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT