ಬೆಂಗಳೂರು: ತಮ್ಮ ಹೆಸರಿಗೆ ಬಂದಿರುವ ಪಾರ್ಸೆಲ್‌ನಲ್ಲಿ ಮಾದಕ ವಸ್ತು ಪತ್ತೆಯಾಗಿದೆ ಎಂದು ಕರೆ ಮಾಡಿ ಬೆದರಿಸಿದವರು ಸೂಚಿಸಿದ ಖಾತೆಗಳಿಗೆ ಕೊಡಗು ಜಿಲ್ಲೆಯ ನಿವೃತ್ತ ಅಧಿಕಾರಿಯೊಬ್ಬರು ₹2.21 ಕೋಟಿ ವರ್ಗಾವಣೆ ಮಾಡಿ ಮೋಸ ಹೋಗಿದ್ದಾರೆ!
ಈ ವಂಚನೆ ಜಾಲವನ್ನು ಭೇದಿಸಿರುವ ಸಿಐಡಿ ಸೈಬರ್ ಅಪರಾಧ ವಿಭಾಗದ ಘಟಕದ ಪೊಲೀಸರು ಬೆಂಗಳೂರಿನ ಮೊಹಮ್ಮದ್ ಶಾಖಿಬ್, ಮೊಹಮ್ಮದ್ ಅಯಾನ್, ಅಹ್ಸಾನ್ ಅನ್ಸಾರಿ, ಸಾಲೋಮನ್ ರಾಜ ಹಾಗೂ ದುಬೈ ಮೂಲದ ಯೂಸುಫ್ ಸೇಠ್ ಎಂಬುವವರನ್ನು ಬಂಧಿಸಿದ್ದಾರೆ. ಅವರಿಂದ ₹1.70 ಕೋಟಿ ನಗದು, 7,700 ಅಮೆರಿಕನ್ ಡಾಲರ್ ಮತ್ತು ವಂಚನೆ ಹಣದಲ್ಲಿ ಖರೀದಿಸಿದ್ದ ಬೆಂಜ್ ಕಾರನ್ನು ವಶಪಡಿಸಿಕೊಂಡಿದ್ದಾರೆ.
ವಂಚಿಸಿದ್ದು ಹೇಗೆ?: ಮೇ ತಿಂಗಳಲ್ಲಿ ದುಬೈನಿಂದ ವಂಚಕನೊಬ್ಬ ರಾಜ್ಯ ಸರ್ಕಾರದ ಇಲಾಖೆಯೊಂದರಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಸಿವಿಲ್ ಎಂಜಿನಿಯರ್ ಒಬ್ಬರ ಮೊಬೈಲ್ಗೆ ಕರೆ ಮಾಡಿ, ಫೆಡೆಕ್ಸ್ ಕಂಪನಿಯಿಂದ ಮಾತನಾಡುತ್ತಿರುವುದಾಗಿ ಪರಚಯಿಸಿಕೊಂಡಿದ್ದ.
‘ನಿಮ್ಮ ಹೆಸರಿಗೆ ಪಾರ್ಸೆಲ್ ಬಂದಿದೆ. ಅದರಲ್ಲಿ ಮಾದಕವಸ್ತು ಇದ್ದು, ಜಪ್ತಿ ಮಾಡಲಾಗಿದೆ. ನಿಮ್ಮನ್ನು ‘ಡಿಜಿಟಲ್ ಅರೆಸ್ಟ್’(ಪೊಲೀಸರ ಸೋಗಿನಲ್ಲಿ ಆನ್‌ಲೈನ್‌ನಲ್ಲಿ ವಿಚಾರಣೆ ನಡೆಸುವುದು) ಮಾಡಲಾಗಿದೆ. ಕ್ರೈಂ ಪೊಲೀಸ್‌ರ ಜತೆ ಮಾತನಾಡಿ, ಇಂತಿಷ್ಟು ಹಣ ನೀಡಿ ಇತ್ಯರ್ಥಪಡಿಸಿಕೊಳ್ಳಬೇಕು’ ಎಂದು ಹೇಳಿ ವಾಟ್ಸ್‌ಆ್ಯಪ್‌ನಲ್ಲಿ ಪೊಲೀಸ್ ಸೋಗಿನಲ್ಲಿದ್ದ ಬೇರೊಬ್ಬ ವ್ಯಕ್ತಿಗೆ ಕರೆಯನ್ನು ವರ್ಗಾಯಿಸಿದ್ದ’ ಎಂದು ಸಿಐಡಿ ಅಧಿಕಾರಿಗಳು
ತಿಳಿಸಿದ್ದಾರೆ.
ಬಳಿಕ ಕ್ರೈಂ ಪೊಲೀಸ್ ಅಧಿಕಾರಿಗಳು ಎಂದು ಹೇಳಿಕೊಂಡು ವಾಟ್ಸ್ಆ್ಯಪ್ ಕರೆ ಮೂಲಕ ನಿವೃತ್ತ ಅಧಿಕಾರಿಯನ್ನು ಸಂಪರ್ಕಿಸಿ, ಮತ್ತೆ ಬೆದರಿಸಿದ್ದರು. ಆತಂಕಗೊಂಡ ನಿವೃತ್ತ ಎಂಜಿನಿಯರ್, ತನ್ನ ಬ್ಯಾಂಕ್ ಖಾತೆಯಿಂದ ಆರೋಪಿಗಳು ಹೇಳಿದ ಖಾತೆಗಳಿಗೆ ಒಟ್ಟು ₹2,21,40,000ವನ್ನು ಆರ್.ಟಿ.ಜಿ.ಎಸ್ ಮೂಲಕ ವರ್ಗಾವಣೆ ಮಾಡಿದ್ದರು. ಇಷ್ಟಕ್ಕೆ ಸುಮ್ಮನಾಗದ ವಂಚಕರು ಕೆಲ ದಿನಗಳ ಬಳಿಕ ಮತ್ತೆ ಕರೆ ಮಾಡಿ, ಇತರೆ ಬ್ಯಾಂಕ್ ಖಾತೆಗಳ ವಿವರಗಳನ್ನು ನೀಡಿ ಹಣ ವರ್ಗಾಯಿಸುವಂತೆ ಬೆದರಿಸಿದ್ದರು.
ಇದರಿಂದ ಸಂಶಯಗೊಂಡ ನಿವೃತ್ತ ಅಧಿಕಾರಿ, ಕೊಡಗಿನ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನು ಸಿಐಡಿ ಸೈಬರ್ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಸಿಐಡಿ ಪೊಲೀಸರು, ಹಣ ವರ್ಗಾವಣೆಯಾದ ಖಾತೆಗಳ ವಿವರಗಳ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಭಾರತೀಯ ಬ್ಯಾಂಕ್ ಖಾತೆಗಳನ್ನು ಬಳಸಿರುವುದು ಹಾಗೂ ವಂಚನೆಯ ಹಣ ಸುಮಾರು 26 ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿರುವುದು ಗೊತ್ತಾಗಿದೆ. ತಲೆಮರೆಸಿಕೊಂಡಿರುವ ಇನ್ನೂ ಮೂವರು ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ ಎಂದು ಸಿಐಡಿ
ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.