ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ಧ್ವನಿಯಾಗಿರುವ ಎಸ್‌ಯುಸಿಐ ಬೆಂಬಲಿಸಿ: ಕಮ್ಯುನಿಸ್ಟ್ ಅಭ್ಯರ್ಥಿಗಳು

Published 18 ಏಪ್ರಿಲ್ 2024, 16:57 IST
Last Updated 18 ಏಪ್ರಿಲ್ 2024, 16:57 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವಿವಿಧ ಭಾಗಗಳಲ್ಲಿ ಸೋಸಿಯಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ (ಕಮ್ಯುನಿಸ್ಟ್‌) ಪಕ್ಷದ ಅಭ್ಯರ್ಥಿಗಳು ಗುರುವಾರ ಪ್ರಚಾರ ನಡೆಸಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಿರ್ಮಲಾ ಎಚ್‌.ಎಲ್‌. ಅವರು ನಾಗಸಂದ್ರ, ಕೆಂಪಾಪುರ, ಕೃಷ್ಣಾನಂದ ನಗರದಲ್ಲಿ ಮತಯಾಚನೆ ಮಾಡಿದರು. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶಿವಪ್ರಕಾಶ್‌ ಎಚ್‌.ಪಿ., ಬೆಂಗಳೂರು ಗ್ರಾಮಾಂತರದ ಅಭ್ಯರ್ಥಿ ಹೇಮಾವತಿ ಕೆ., ಚಿಕ್ಕಬಳ್ಳಾಪುರದ ಅಭ್ಯರ್ಥಿ ಕಲಾವತಿ ಆಯಾ ಕ್ಷೇತ್ರದಲ್ಲಿ ಮತ ಯಾಚಿಸಿದರು.

‘ಶಿಕ್ಷಣ ಹಾಗೂ ಆರೋಗ್ಯ ಮಾರಾಟದ ವಸ್ತು ಆಗಿದೆ. ದುಡ್ಡಿದ್ದರೆ ಶಿಕ್ಷಣ ಮತ್ತು ಆರೋಗ್ಯ ಎನ್ನುವ ಈ ಬಂಡವಾಳಶಾಹಿ ವ್ಯವಸ್ಥೆಯನ್ನು ಕಿತ್ತೆಸೆದು ಕಾರ್ಮಿಕ ರಾಜ್ಯವನ್ನು ಸ್ಥಾಪಿಸುವ ಐತಿಹಾಸಿಕ ಜವಾಬ್ದಾರಿ ಇಂದಿನ ಕಾರ್ಮಿಕ ವರ್ಗದ ಮೇಲಿದೆ. ಕಾರ್ಮಿಕರ ಧ್ವನಿಯಾಗಿರುವ ನೈಜ ಕಮ್ಯುನಿಸ್ಟ್ ಪಕ್ಷವಾದ ಎಸ್‌ಯುಸಿಐ‌(ಸಿ) ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಬೇಕು’ ಎಂದು ನಿರ್ಮಲಾ ಎಚ್‌.ಎಲ್‌. ಮನವಿ ಮಾಡಿದರು.

’10 ವರ್ಷಗಳಿಂದ ದೇಶವನ್ನು ಆಳುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಜನರ ಬದುಕನ್ನು ಮೂರಾಬಟ್ಟೆ ಮಾಡಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೇಲೆ ಮರೆತು ಬಿಟ್ಟಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದರಿಂದ ಯುದ್ಧಪೀಡಿತ ದೇಶಗಳಿಗೆ ಯುವಜನರು ಹೋಗುವಂತಾಗಿದೆ. ಬೆಲೆ ಏರಿಕೆ ವಿಪರೀತವಾಗಿದೆ. ಇದನ್ನು ತಡೆಯುವ ಬದಲು ಕೋಮುವಾದದ ಮೂಲಕ ಮತ ದ್ರುವೀಕರಣಕ್ಕೆ ಹೊರಟಿದೆ‘ ಎಂದು ಆರೋಪಿಸಿದರು.

‘ಇನ್ನೊಂದು ಬಂಡವಾಳಶಾಹಿ ಪಕ್ಷ ಕಾಂಗ್ರೆಸ್‌ ವಿವಿಧ ಅವಕಾಶವಾದಿ ಪ್ರಾದೇಶಿಕ ಪಕ್ಷಗಳ ಕೂಟವಾದ ‘ಇಂಡಿಯಾ’ ನೈಜ ಧರ್ಮ ನಿರಪೇಕ್ಷ, ಪ್ರಜಾತಾಂತ್ರಿಕ ಪರ್ಯಾಯವನ್ನು ನೀಡಲು ಸಾಧ್ಯವಿಲ್ಲ. ಸಮಾಜವಾದವೇ ನೈಜ ಪರಿಹಾರವಾಗಿತ್ತು. ಕೆಲವೇ ಸೀಟಿಗಾಗಿ ಸಿಪಿಐ, ಸಿಪಿಐಎಂ ನಂತಹ ಎಡವಾದಿ ಪಕ್ಷಗಳು ‘ಇಂಡಿಯಾ’ ಮೈತ್ರಿಕೂಟವನ್ನು ಸೇರಿರುವುದು ವಿಪರ್ಯಾಸ. ಜನಪರ ಧ್ವನಿಯ ಸಮಾಜವಾದಿ ಸಿದ್ಧಾಂತದ ಎಸ್‌ಯುಸಿಐ (ಸಿ)ಯನ್ನು ಬೆಂಬಲಿಸಬೇಕು‘ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT