ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹8 ಸಾವಿರ ಕೋಟಿ ಮೌಲ್ಯದ ಜಾಬ್ ಕೋಡ್ ರದ್ದು

ಬಿಬಿಎಂಪಿಯಲ್ಲಿ ಟೆಂಡರ್ ಆಗದ 40 ಸಾವಿರಕ್ಕೂ ಹೆಚ್ಚು ಜಾಬ್ ಕೋಡ್ ವಜಾ
Last Updated 14 ಜನವರಿ 2023, 19:50 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯಲ್ಲಿ ಟೆಂಡರ್ ಆಗದ 40 ಸಾವಿರಕ್ಕೂ ಹೆಚ್ಚು ಜಾಬ್ ಕೋಡ್‌ಗಳನ್ನು ರದ್ದುಪಡಿಸಿದ್ದು, ₹7,931 ಕೋಟಿ ದುರುಪಯೋಗ ಆಗುವುದನ್ನು ತಡೆ ಹಿಡಿದಿದೆ.

11 ವರ್ಷಗಳ ಅವಧಿಯಲ್ಲಿ ರಸ್ತೆ, ಚರಂಡಿ ಸೇರಿ ವಿವಿಧ ಕಾಮಗಾರಿಗಳಿಗೆ ಬಿಬಿಎಂಪಿ ಬಜೆಟ್ ಅನ್ವಯ ಜಾಬ್ ಕೋಡ್‌ಗಳನ್ನು ನೀಡಲಾಗಿತ್ತು. ಈ ಜಾಬ್ ಕೋಡ್‌ಗಳು ಬಿಬಿಎಂಪಿ ಅಧಿಕಾರಿಗಳು, ಮಾಜಿ ಕಾರ್ಪೊರೇಟರ್ ಅವರಲ್ಲಿಯೇ ಉಳಿದುಕೊಂಡಿವೆ. ಅವನ್ನು ಅವರಿಗೆ ಅನುಕೂಲವಾಗುವ ಸಂದರ್ಭದಲ್ಲಿ ಬಳಸಿಕೊಂಡು, ಟೆಂಡರ್ ಕರೆದುಕೊಳ್ಳುತ್ತಿದ್ದರು.

ಕೆಲವರು ಈ ಜಾಬ್ ಕೋಡ್‌ಗಳನ್ನು ಬೇರೆಯವರಿಗೆ ಮಾರಿಕೊಂಡು ಹಣ ಮಾಡಿಕೊಂಡಿದ್ದಾರೆ. ಆಗಾಗ ಈ ಜಾಬ್ ಕೋಡ್‌ಗಳನ್ನು ಬಳಸಿಕೊಂಡು ಟೆಂಡರ್ ಕರೆಯಲಾಗುತ್ತಿತ್ತು. ಆದರೆ ಇದೀಗ, 2010 ರಿಂದ 2021 ರವರೆಗೆ ನೀಡಲಾಗಿರುವ ಎಲ್ಲ ಕಾಮಗಾರಿಗಳ ಜಾಬ್ ಕೋಡ್‌ಗಳಿಗೆ ಕಾರ್ಯಾದೇಶ ನೀಡದಂತೆ ಐಎಫ್ಎಂಎಸ್ ತಂತ್ರಾಂಶದಲ್ಲಿ ರದ್ದು ಮಾಡಲಾಗಿದೆ. ಈ ಅವಧಿಯಲ್ಲಿ 960 ಕಾಮಗಾರಿಗಳಿಗೆ ಟೆಂಡರ್ ಕರೆದು ಕಾಮಗಾರಿ ಪೂರ್ಣಗೊಳಿಸಲಾಗಿದ್ದು, ಅದಕ್ಕೆ ಸಮ್ಮತಿ ನೀಡಲಾಗಿದೆ.

ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯಪುರ ಅವರು 2010 ರಿಂದ ನೀಡಲಾಗಿರುವ ಎಲ್ಲ ಜಾಬ್ ಕೋಡ್‌ಗಳನ್ನು ಪರಿಶೀಲನೆ ನಡೆಸಿ, 45,781 ಜಾಬ್ ಕೋಡ್‌ಗಳನ್ನು ರದ್ದು ಮಾಡಿದ್ದಾರೆ.

2011 ರಲ್ಲಿ ಗಾಂಧಿನಗರ, ರಾಜರಾಜೇಶ್ವರಿ ನಗರ, ಮಲ್ಲೇಶ್ವರ ವಿಭಾಗಗಳಲ್ಲಿ ಕೆಲಸವಾಗದ ಕಾಮಗಾರಿಗಳಿಗೆ ವರ್ಕ್ ಕೋಡ್, ನಕಲಿ ಬಿಲ್ ನೀಡಿದ್ದ ₹1539 ಕೋಟಿ ಮೌಲ್ಯದ ಹಗರಣ ಬಹಿರಂಗವಾದಾಗ ಅಂದಿನ ಆಯುಕ್ತ ಸಿದ್ದಯ್ಯ ಪ್ರಕರಣವನ್ನು ಸಿಐಡಿಗೆ ವಹಿಸಲು ನಿರ್ಧರಿಸಿದ್ದರು. ಆಗ ಅವರ ವರ್ಗಾವಣೆ ಆಗಿತ್ತು.

ಬಜೆಟ್‌‌ನಲ್ಲೇ ಜಾಬ್ ಕೋಡ್
2021ರವರೆಗೆ ಬಿಬಿಎಂಪಿ ಬಜೆಟ್‌ನಲ್ಲಿ ಸೇರಿಸಿದ ಕಾಮಗಾರಿಗಳಿಗೆ ಜಾಬ್ ಕೋಡ್ ನೀಡಲಾಗುತ್ತಿತ್ತು. ಸ್ಟ್ಯಾಂಪ್ ಪೇಪರ್ ರೀತಿಯಲ್ಲಿ ಕೊಡುತ್ತಿದ್ದರು. ಇವುಗಳನ್ನು ಕೆಲವರು ತಮ್ಮಲ್ಲೇ ಉಳಿಸಿಕೊಂಡಿದ್ದರು. ಅವರ ಅಗತ್ಯಕ್ಕೆ ಅನುಸಾರ ಟೆಂಡರ್ ಕರೆದು ಕಾಮಗಾರಿ ಮಾಡುತ್ತಿದ್ದರು.

‘ಈ ಜಾಬ್ ಕೋಡ್‌ಗಳಿಗೆ ಗರಿಷ್ಠ ಅವಧಿ ಇರಲಿಲ್ಲ. ಈಗಲೂ ಟೆಂಡರ್ ಕರೆಯಬಹುದಾಗಿತ್ತು. ಕೆಲಸ ಆಗಿದೆ ಎಂದು ಎಲ್ಲರ ಬಳಿ ಸಹಿ ಹಾಕಿಸಿಕೊಂಡು ಬಂದರೆ ನಾವು ಹಣ ಬಿಡುಗಡೆ ಮಾಡಬೇಕಿತ್ತು. 2021 ಏಪ್ರಿಲ್ ನಿಂದ ಇ–ಪ್ರೊಕ್ಯುರ್‌ನಿಂದ ಎಲ್ಲ ಕಾಮಗಾರಿ ನಡೆಯುತ್ತಿವೆ. ಟೆಂಡರ್ ಆದಮೇಲೆ ಈಗ ಜಾಬ್ ಕೋಡ್ ನೀಡಲಾಗುತ್ತಿದೆ. ಹೀಗಾಗಿ ಹಿಂದಿನ ಎಲ್ಲ ಜಾಬ್ ಕೋಡ್‌ಗಳನ್ನು ಪರಿಶೀಲಿಸಲಾಯಿತು. ವೈಯಕ್ತಿಕ ಮನೆ ನಿರ್ಮಾಣ ಕಾಮಗಾರಿಗಳನ್ನು ಹೊರತು ಡಿಸಿ ಎಲ್ಲ ಕಾಮಗಾರಿಗಳ ಜಾಬ್ ಕೋಡ್ ರದ್ದು ಮಾಡಲಾಗಿದೆ. ಆ ಕಾಮಗಾರಿಗಳನ್ನು ಮಾಡಿದರೂ ಹಣ ನೀಡಲು ಸಾಧ್ಯ ಇಲ್ಲ. ಹೀಗಾಗಿ ಮುಂದೆ ಬಿಲ್‌ಗಾಗಿ ಬರಬಹುದಾಗಿದ್ದ ಸುಮಾರು ₹8 ಸಾವಿರ ಕೋಟಿಯಷ್ಟು ಹಣವನ್ನು ಉಳಿಸಲಾಗಿದೆ’ ಎಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯಪುರ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT