ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯೋಗಾಲಯದಲ್ಲಿ ಬೆಂಕಿ ಅವಘಡ: ಬಿಬಿಎಂಪಿ ಕಟ್ಟಡಗಳ ಸಾಮರ್ಥ್ಯ ಪರಿಶೀಲನೆ

Published 2 ಸೆಪ್ಟೆಂಬರ್ 2023, 23:48 IST
Last Updated 2 ಸೆಪ್ಟೆಂಬರ್ 2023, 23:48 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಸ್ವತ್ತುಗಳಲ್ಲಿ ನಿರ್ಮಿಸಿರುವ ಕಟ್ಟಡಗಳ ಸಾಮರ್ಥ್ಯ, ಸ್ಥಿರತೆಯ ಮಟ್ಟವನ್ನು ಪರಿಶೀಲಿಸಲು ನಿರ್ಧರಿಸಲಾಗಿದೆ. ಜೊತೆಗೆ ಎಲ್ಲ ಕಟ್ಟಡಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಸೂಚಿಸಲಾಗಿದೆ.

ಬಿಬಿಎಂಪಿ ತನ್ನ ಸ್ವತ್ತುಗಳಲ್ಲಿ ಕಟ್ಟಡಗಳನ್ನು ನಿರ್ಮಿಸುವ ಸಂದರ್ಭದಲ್ಲಿ ಸಾಮಾನ್ಯ ನಾಗರಿಕರು ಅಥವಾ ವಾಣಿಜ್ಯ ಸಂಕೀರ್ಣಗಳು ಪಾಲಿಸುವ ನಿಯಮಗಳನ್ನು ಅನುಸರಿಸುತ್ತಿಲ್ಲ. ನಕ್ಷೆ ಅನುಮೋದನೆಯಿಂದ ಹಿಡಿದು, ಸೆಟ್‌ಬ್ಯಾಕ್, ಒಳಚರಂಡಿ ವ್ಯವಸ್ಥೆ, ಅಗ್ನಿ ಸುರಕ್ಷತಾ ಕ್ರಮಗಳನ್ನು ಬಹುತೇಕ ಅಳವಡಿಸಿಕೊಂಡಿಲ್ಲ.

ಯುಟಿಲಿಟಿ, ಯೂನಿಟಿ ಕಟ್ಟಡ, ಕೇಂದ್ರ ಕಚೇರಿಯಲ್ಲಿರುವ ಅನೆಕ್ಸ್‌ ಕಟ್ಟಡಗಳು, ಕೌನ್ಸಿಲ್‌ ಕಟ್ಟಡಗಳು, ಜಯನಗರದಲ್ಲಿರುವ ಶಾಪಿಂಗ್ಸ್‌ ಕಾಂಪ್ಲೆಕ್ಸ್‌ ಸೇರಿದಂತೆ ಹಲವು ಬೃಹತ್‌ ಕಟ್ಟಡಗಳಿವೆ. ಇವುಗಳಲ್ಲಿ ಎಲ್ಲ ರೀತಿಯ ಸುರಕ್ಷತೆ ಕ್ರಮಗಳನ್ನು ಅಳವಡಿಸಲಾಗಿಲ್ಲ ಎಂಬುದು ಬಿಬಿಎಂಪಿ ಅಧಿಕಾರಿಗಳ ಅರಿವಿಗಿದೆ.

ಇತ್ತೀಚಿನ ದಿನಗಳಲ್ಲಿ ಕೆಲವೊಂದು ಅವಘಡಗಳು ಸಂಭವಿಸಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಕಟ್ಟಡಗಳಲ್ಲೇ ನಿಯಮ ಅನುಸರಿಸದಿರುವ ಹಾಗೂ ಸುರಕ್ಷತಾ ಕ್ರಮಗಳಿಲ್ಲದ ಬಗ್ಗೆ ದೂರುಗಳು ಬಂದಿವೆ.

ಎಂಟು ವಲಯಗಳ ವ್ಯಾಪ್ತಿಯಲ್ಲಿ ಸುಮಾರು 15 ಬೃಹತ್‌ ಕಟ್ಟಡಗಳನ್ನು ಬಿಬಿಎಂಪಿ ನಿರ್ಮಿಸಿದೆ. ಅಲ್ಲದೆ, ಹಳೆಯ ಕಟ್ಟಡಗಳೂ ಇವೆ. ಇವೆಲ್ಲ ಕಟ್ಟಡಗಳ ಬಗ್ಗೆ ಕೂಲಂಕಷವಾದ ವರದಿ ತಯಾರಿಸಲು ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

‘ಹಲವು ದಶಕಗಳ ಹಿಂದೆ ಹಲವು ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಆಗ ಹೆಚ್ಚು ನಿಯಮಗಳನ್ನು ಪಾಲಿಸಲಾಗಿಲ್ಲ. ಆದರೆ ಇದೀಗ ಕಟ್ಟಡಗಳ ಸುರಕ್ಷತೆ ಅತ್ಯಂತ ಪ್ರಮುಖವಾಗಿದ್ದು, ಅವುಗಳ ಬಗ್ಗೆ ಪರಿಶೀಲಿಸಿ ವರದಿ ತಯಾರಾಗಬೇಕಿದೆ. ಹೀಗಾಗಿ ಎಲ್ಲ ಕಟ್ಟಡಗಳ ಸಂಪೂರ್ಣ ಪರಿಶೀಲನೆ ನಡೆಸಿ, ‘ಸ್ಟ್ರಕ್ಚರಲ್‌ ಆಡಿಟ್‌ ರಿಪೋಟ್‌’ ಜೊತೆಗೆ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡಿರುವ ಬಗೆಗಿನ ಮಾಹಿತಿಯನ್ನೂ 15 ದಿನಗಳಲ್ಲಿ ಒದಗಿಸುವಂತೆ ಎಂಟೂ ವಲಯಗಳ ಮುಖ್ಯ ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ. ವಲಯವಾರು ಕಟ್ಟಡಗಳ ಮಾಹಿತಿ ಸದ್ಯವೇ ಸಿದ್ದವಾಗಲಿದೆ’ ಎಂದು ಪ್ರಹ್ಲಾದ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಬಿಎಂಪಿ ಕಟ್ಟಡಗಳಿಗೂ ನಕ್ಷೆ ಅನುಮೋದನೆ ಕಡ್ಡಾಯ. ನಮ್ಮ ಎಂಜಿನಿಯರ್‌ಗಳೇ ಅದನ್ನೆಲ್ಲ ರಚಿಸಿಕೊಂಡು, ನಗರ ಯೋಜನೆ ವಿಭಾಗದಿಂದ ಅನುಮತಿ ಪಡೆದುಕೊಳ್ಳಬೇಕು. ವಾಣಿಜ್ಯ ಕಟ್ಟಡಗಳಿಗೆ ಅನ್ವಯಿಸುವ ಎಲ್ಲ ರೀತಿಯ ನಿಯಮಗಳನ್ನು ಪಾಲಿಸಬೇಕು. ಎಲ್ಲ ಅನುಮತಿಗಳನ್ನೂ ಪಡೆದುಕೊಳ್ಳಬೇಕು’ ಎಂದು ಮಾಹಿತಿ ನೀಡಿದರು.

ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ 6 ಅಂತಸ್ತಿನ ‘ಅನೆಕ್ಸ್‌–3’ ಕಟ್ಟಡ
ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ 6 ಅಂತಸ್ತಿನ ‘ಅನೆಕ್ಸ್‌–3’ ಕಟ್ಟಡ
₹5 ಕೋಟಿ ವೆಚ್ಚದಲ್ಲಿ ಲಿಫ್ಟ್‌!
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ಗುಣಮಟ್ಟ ಖಾತರಿ ಪ್ರಯೋಗಾಲಯದಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದ 9 ಮಂದಿ ಗಾಯಗೊಂಡು ಮುಖ್ಯ ಎಂಜಿನಿಯರ್‌ ಮೃತಪಟ್ಟಿದ್ದರು. ಇದಾದ ಮೇಲೆ ಇದೇ ಆವರಣದಲ್ಲಿರುವ ಆರು ಅಂತಸ್ತಿನ ‘ಅನೆಕ್ಸ್‌–3’ ಕಟ್ಟಡದ ಸುರಕ್ಷತೆ ಬಗ್ಗೆ ಅನುಮಾನಗಳು ಮೂಡಿದ್ದವು. 10 ವರ್ಷಗಳ ಹಿಂದೆ ನಿರ್ಮಿಸಲಾಗಿರುವ ‘ಅನೆಕ್ಸ್‌–3’ ಆರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಸುರಕ್ಷತೆಯ ನಿಯಮಗಳನ್ನು ಪಾಲಿಸಲಾಗಿಲ್ಲ. ಅಗ್ನಿಶಾಮಕ ದಳ ಕಚೇರಿಯಿಂದ ಸಾಕಷ್ಟು ಬಾರಿ ಪತ್ರ ಬರೆದು ಪರ್ಯಾಯ ಲಿಫ್ಟ್‌ ಅಥವಾ ಮೆಟ್ಟಿಲುಗಳನ್ನು ಅಳವಡಿಸಲು ಸೂಚಿಸಲಾಗಿತ್ತು. ಆದರೆ ಈ ಬಗ್ಗೆ ಕ್ರಮ ಕೈಗೊಂಡಿರಲಿಲ್ಲ. ‘ಪ್ರಯೋಗಾಲಯದಲ್ಲಿ ಬೆಂಕಿ ಅವಘಡದ ನಂತರ ಈ ಬಗ್ಗೆಯೂ ಗಮನ ಹರಿಸಲಾಗಿದ್ದು ಅನೆಕ್ಸ್‌–3 ಕಟ್ಟಡದಲ್ಲಿ ₹5 ಕೋಟಿ ವೆಚ್ಚದಲ್ಲಿ ಹೊರಭಾಗದಲ್ಲಿ ಲಿಫ್ಟ್‌ ಅಳವಡಿಸುವ ಯೋಜನೆ ರೂಪಿಸಲಾಗಿದೆ. ಈ ಯೋಜನೆಯನ್ನು ಮೂಲಸೌಕರ್ಯ ವಿಭಾಗದಿಂದ ನಿರ್ವಹಿಸಲಾಗುತ್ತದೆ. ಕೂಡಲೇ ಕಾಮಗಾರಿ ಆರಂಭಿಸಲಾಗುತ್ತದೆ. ಎಲ್ಲ ರೀತಿಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ’ ಎಂದು ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಹುದ್ದೆಯನ್ನೂ ಹೊಂದಿರುವ ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT