ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ವಿವಾದ: ಸುಪ್ರೀಂ ತೀರ್ಪು ತಿರಸ್ಕಾರಕ್ಕೆ ಆಗ್ರಹ

Published 21 ಸೆಪ್ಟೆಂಬರ್ 2023, 16:54 IST
Last Updated 21 ಸೆಪ್ಟೆಂಬರ್ 2023, 16:54 IST
ಅಕ್ಷರ ಗಾತ್ರ

ಬೆಂಗಳೂರು: ಕಾವೇರಿ ನೀರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ತಿರಸ್ಕರಿಸಬೇಕು ಎಂದು ಕನ್ನಡ ಗೆಳೆಯರ ಬಳಗ ಹಾಗೂ ಕರ್ನಾಟಕ ವಿಕಾಸ ರಂಗ ಜಂಟಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿವೆ.

‘ರಾಜ್ಯದಲ್ಲಿ ಜೂನ್‌ನಿಂದ ಆಗಸ್ಟ್‌ವರೆಗೆ ಕಾವೇರಿ ಕೊಳ್ಳದಲ್ಲಿ ವಾಡಿಕೆಗಿಂತ ಶೇ 44 ರಷ್ಟು ಮಳೆ ಕಡಿಮೆಯಾಗಿದೆ. ಇಲ್ಲಿನ ಜಲಾಶಯಗಳಲ್ಲಿರುವ ನೀರು ಕುಡಿಯಲೂ ಸಾಕಾಗುವುದಿಲ್ಲ ಎಂಬುದನ್ನು ಅಂಕಿ-ಅಂಶಗಳು ಸಾರುತ್ತವೆ. ಇಷ್ಟಾಗಿಯೂ ‌ಕಾವೇರಿ ನದಿ ನೀರು ನಿರ್ವಹಣಾ ಸಮಿತಿಯು ತಮಿಳುನಾಡಿಗೆ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ ನೀಡಿದೆ. ಇದನ್ನೇ ಸುಪ್ರೀಂ ಕೋರ್ಟ್ ಪುನರುಚ್ಛರಿಸಿರುವುದು. ಇದರಿಂದ ರಾಜ್ಯದ ಜನರಿಗೆ ಕುಡಿಯುವ ನೀರಿನ ಹಕ್ಕನ್ನು ಕಿತ್ತುಕೊಂಡಂತಾಗಿದೆ. ರೈತರ ಹಿತವನ್ನೂ ಕಡೆಗಣಿಸಿದಂತಾಗಿದೆ’ ಎಂದು ವಿಕಾಸರಂಗದ ಅಧ್ಯಕ್ಷ ವ.ಚ. ಚನ್ನೇಗೌಡ ಹಾಗೂ ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

‘ದೇಶದಲ್ಲಿರುವ ಜಲ ಹಂಚಿಕೆಯ ಕಾನೂನುಗಳು ನದಿ ಪಾತ್ರದ ಕೆಳ ರಾಜ್ಯದ ಪರವಾಗಿದ್ದು, ನ್ಯಾಯಾಲಯದಿಂದ ಹಾಗೂ ಕೇಂದ್ರ ಸರ್ಕಾರದಿಂದ ನದಿಯ ಮೇಲಿನ ರಾಜ್ಯವಾದ ಕರ್ನಾಟಕಕ್ಕೆ ನ್ಯಾಯ ಸಿಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಕನ್ನಡಿಗರ ಹಕ್ಕು ಮತ್ತು ಸ್ವಾಭಿಮಾನವನ್ನು ಕಾಪಾಡಲು ಸುಪ್ರೀಂ ಕೋರ್ಟ್ ಆದೇಶವನ್ನು ತಿರಸ್ಕರಿಸುವುದೇ ರಾಜ್ಯ ಸರ್ಕಾರಕ್ಕೆ ಉಳಿದಿರುವ ಏಕೈಕ ಮಾರ್ಗ’ ಎಂದು ಹೇಳಿದ್ದಾರೆ. 

‘ಕನ್ನಡಿಗರ ಹಿತ ರಕ್ಷಣೆಗೆ ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾದರೆ ಎಲ್ಲಾ ರಾಜಕೀಯ ಪಕ್ಷಗಳು, ರೈತ ಸಂಘಟನೆಗಳು, ಕನ್ನಡ ಸಂಘಟನೆಗಳು ಮತ್ತು ನಾಯಕರು ಪಕ್ಷಬೇಧ, ಭಿನ್ನಾಭಿಪ್ರಾಯಗಳನ್ನು ಮರೆತು ಸರ್ಕಾರದ ಜೊತೆ ದೃಢವಾಗಿ ನಿಲ್ಲಬೇಕು’ ಎಂದು ಆಗ್ರಹಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT