ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋನ್‌ ಕರೆಗಳ ಕದ್ದಾಲಿಕೆ l ಅಲೋಕ್‌ ಕುಮಾರ್‌ ಸುದೀರ್ಘ ವಿಚಾರಣೆ

ಸಿಬಿಐನಿಂದ ಸತತ 7ಗಂಟೆ ತನಿಖೆ
Last Updated 28 ಸೆಪ್ಟೆಂಬರ್ 2019, 1:28 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿರುವ ಫೋನ್‌ ಕರೆಗಳ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಸ್‌ಆರ್‌ಪಿಯ ಎಡಿಜಿಪಿ ಅಲೋಕ್‌ ಕುಮಾರ್‌ ಅವರನ್ನು ಸಿಬಿಐ ಅಧಿಕಾರಿಗಳು ಶುಕ್ರವಾರ ವಿಚಾರಣೆ ನಡೆಸಿದರು.

ಗುರುವಾರ ಸಿಬಿಐ ಅಧಿಕಾರಿಗಳು ಅಲೋಕ್‌ ಕುಮಾರ್‌ ಮನೆ ಹಾಗೂ ಕಚೇರಿಯನ್ನು ಶೋಧಿಸಿದ್ದರ ಹಿಂದೆಯೇ ಅವರನ್ನು ಸುದೀರ್ಘವಾಗಿ ಪ್ರಶ್ನಿಸಲಾಯಿತು.

ಶುಕ್ರವಾರ ಬೆಳಿಗ್ಗೆ 11ಕ್ಕೆ ಸಿವಿಲ್‌ ಡ್ರೆಸ್‌ನಲ್ಲಿ ಇಲ್ಲಿನ ಕುಮಾರ ಕೃಪ ಅತಿಥಿ ಗೃಹಕ್ಕೆ ಧಾವಿಸಿದ ಹಿರಿಯ ಐಪಿಎಸ್‌ ಅಧಿಕಾರಿ ಸಿಬಿಐ ಎಸ್‌ಪಿ ಕಿರಣ್‌ ಕುಮಾರ್‌ ಅವರ ನೇತೃತ್ವದ ತನಿಖಾ ತಂಡದ ಮುಂದೆ ಹಾಜರಾದರು. ಸಂಜೆ ಏಳು ಗಂಟೆವರೆಗೂ ವಿಚಾರಣೆ ನಡೆಯಿತು.

2018ರ ಆಗಸ್ಟ್‌ 1ರಿಂದ 2019ರ ಅಗಸ್ಟ್ 19ರವರೆಗೆ ಯಾವ್ಯಾವ ದೂರವಾಣಿ ಸಂಖ್ಯೆಗಳ (ಒಳಬರುವ– ಹೊರಹೋಗುವ) ಕರೆಗಳನ್ನು ಕದ್ದಾಲಿಸಲಾಗಿದೆ ಎಂಬ ಬಗ್ಗೆ ಸಿಬಿಐ ತನಿಖೆ ನಡೆಯುತ್ತಿದೆ. ‘ಆಡಳಿತ ಪಕ್ಷ ಮತ್ತು ವಿರೋಧಪಕ್ಷಗಳ ನಾಯಕರು, ಅವರ ಸಂಬಂಧಿಕರು, ಆ‍ಪ್ತರು, ಅಧಿಕಾರಿಗಳ ಫೋನ್‌ ಕರೆಗಳನ್ನು ಕಾನೂನು ಬಾಹಿರವಾಗಿ, ಅನಧಿಕೃತವಾಗಿ, ಅನಗತ್ಯವಾಗಿ ಕದ್ದಾಲಿಸಲಾಗಿದೆ’ ಎಂದು ದೂರಲಾಗಿದೆ.

ಯಾವ ಫೋನ್‌ ಸಂಖ್ಯೆಗಳ ಕರೆಗಳನ್ನು ಕದ್ದಾಲಿಸಲಾಗಿದೆ; ಯಾವ ಅಪರಾಧ ಪ್ರಕರಣಗಳಲ್ಲಿ ಕದ್ದಾಲಿಸಲಾಗಿದೆ ಎಂಬ ಮಾಹಿತಿ ಇಟ್ಟುಕೊಂಡಿರುವ ತನಿಖಾಧಿಕಾರಿಗಳು, ಪ್ರತಿಯೊಂದು ದೂರವಾಣಿ ಸಂಖ್ಯೆಗಳ ಬಗ್ಗೆಯೂ ಪ್ರಶ್ನೆ ಕೇಳುತ್ತಿದ್ದಾರೆ. ನೂರಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ನೂರಾರು ದೂರವಾಣಿ ಸಂಖ್ಯೆಗಳಿಗೆ ಸಂಬಂಧಿಸಿದ ಕರೆಗಳನ್ನು ಕದ್ದಾಲಿಸಿರುವ ಆರೋಪ ಪೊಲೀಸರ ಮೇಲಿದೆ.

ಪ್ರಕರಣದಲ್ಲಿ ಈಗಾಗಲೇ ಸೈಬರ್‌ ಕ್ರೈಂ ತಾಂತ್ರಿಕ ವಿಭಾಗದ ಇನ್‌ಸ್ಪೆಕ್ಟರ್‌ಗಳಾದ ಮಿರ್ಜಾ ಅಲಿ, ಮಾಲತೇಶ್‌, ಸಿಸಿಬಿ ಎಸಿಪಿ ವೇಣುಗೋಪಾಲ್‌ ಒಳಗೊಂಡಂತೆ ಅನೇಕ ಪೊಲೀಸ್‌ ಅಧಿಕಾರಿಗಳನ್ನು ಪ್ರಶ್ನಿಸಲಾಗಿದ್ದು, ಎಲ್ಲರೂ, ‘ಹಿರಿಯ ಅಧಿಕಾರಿಯ ಸೂಚನೆ ಮೇಲೆ ಫೋನ್‌ ಕರೆಗಳ ಕದ್ದಾಲಿಕೆ ಮಾಡಿದ್ದಾಗಿ ಹೇಳಿದ್ದಾರೆ’ ಎನ್ನಲಾಗಿದೆ.

ಫೋನ್‌ ಕರೆಗಳ ಕದ್ದಾಲಿಕೆ ಪ್ರಕರಣ ನಡೆದಿದ್ದ ಸಮಯದಲ್ಲಿ ಅಲೋಕ್‌ ಕುಮಾರ್‌ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಹೆಚ್ಚುವರಿ ಪೊಲೀಸ್‌ ಕಮಿಷನರ್ ಆಗಿದ್ದರು. ಆನಂತರ, ಅವರು ಪೊಲೀಸ್‌ ಕಮಿಷನರ್‌ ಆಗಿಯೂ ಕೆಲಸ ಮಾಡಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಅಲೋಕ್‌ ಕುಮಾರ್‌ ಅವರನ್ನು ಬದಲಾಯಿಸಿ, ಅವರ ಉತ್ತರಾಧಿಕಾರಿಯಾಗಿ ಭಾಸ್ಕರ್‌ ರಾವ್‌ ಅವರನ್ನು ನೇಮಿಸಿತು.

ಹೊಸ ಕಮಿಷನರ್‌ ನೇಮಕವಾಗುತ್ತಿದ್ದಂತೆ, ಕಾಂಗ್ರೆಸ್‌ ಹೈಕಮಾಂಡ್‌ ನಾಯಕರಿಗೆ ಆಪ್ತನೆಂದು ಹೇಳಿಕೊಂಡಿದ್ದ ಫರಾಜ್‌ ಅಹಮದ್‌ ಎಂಬಾತನ ಜತೆ ಭಾಸ್ಕರರಾವ್‌ ನಡೆಸಿದ್ದರು ಎನ್ನಲಾದ ದೂರವಾಣಿ ಸಂಭಾಷಣೆ ಆಡಿಯೋ ಬಹಿರಂಗವಾಯಿತು.

98803 00007!?

ಫೋನ್‌ ಕದ್ದಾಲಿಕೆ ಪ್ರಕರಣ ಬಹಿರಂಗಕ್ಕೆ ಬರಲು ಈ ಫೋನ್‌ ನಂಬರ್‌ ಕಾರಣವಾಯಿತು. ವಿಲ್ಸನ್‌ ಗಾರ್ಡನ್‌ ಠಾಣೆಯಲ್ಲಿ ದಾಖಲಾದ 157/ 2018 ಅಪರಾಧ ಪ್ರಕರಣದ ಆರೋಪಿಯೊಬ್ಬರು ಇದನ್ನು ಬಳಸುತ್ತಿದ್ದರು.

ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಇಂಜಾಜ್‌ ಇಂಟರ್‌ನ್ಯಾಷನಲ್‌ ಕಂಪನಿ ಮಾಲೀಕ ಮಿಸ್ಬಾವುದ್ದೀನ್‌ ಎಂಬಾತನ ಚಲನವಲನದ ಮೇಲೆ ನಿಗಾ ಇಡಲು ಪೊಲೀಸರು ಆತನ ಮೊಬೈಲ್‌ ಕರೆಗಳನ್ನು ಕದ್ದಾಲಿಸುತ್ತಿದ್ದರು. ಅದೇ ಸಮಯದಲ್ಲಿ ಈ ಸಂಖ್ಯೆ ಮೇಲೂ ಕಣ್ಣಿಡಲಾಗಿತ್ತು. ಈ ನಂಬರ್‌ಗೆ ಕರೆ ಮಾಡಿದರೆ ‘ಎಫ್‌ಎ’ ಎಂಬ ಹೆಸರು ಬರುತ್ತದೆ.

ಎಫ್‌ಎ ಎಂದರೆ ಫರಾಜ್‌ ಅಹಮದ್‌ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಮಿಸ್ಬಾ ಜತೆ ಈತ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಈ ನಂಬರ್‌ಗೆ ಬರುವ ಕರೆಗಳನ್ನು ಪೊಲೀಸರು ಕದ್ದಾಲಿಸುತ್ತಿದ್ದರು.

ರೆಕಾರ್ಡ್‌ ಮಾಡಿದ್ದ ಸಂಭಾಷಣೆಯನ್ನು ಪೆನ್‌ಡ್ರೈವ್‌ಗೆ ಡೌನ್‌ಲೋಡ್‌ ಮಾಡಿ ಆಗಸ್ಟ್ 2ರಂದು ಟಿ.ವಿ ಮಾಧ್ಯಮಗಳಿಗೆ ತಲುಪಿಸಲಾಗಿತ್ತು. ‘ಅಂದಿನ ಪೊಲೀಸ್‌ ಕಮಿಷನರ್‌ ಸೂಚನೆ ಮೇಲೆ ಇದನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ’ ಎಂದು ರಾಜ್ಯ ಸರ್ಕಾರ ಸಿಬಿಐಗೆ ಕಳುಹಿಸಿರುವ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದೆ.

‘ಸ್ವಾಮೀಜಿಯವರ ಕ್ಷಮೆ ಕೇಳುತ್ತೇವೆ’

‘ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿಯವರ ಫೋನ್‌ ಕದ್ದಾಲಿಕೆ ನಾಚಿಕೆಗೇಡಿನ ಸಂಗತಿ’ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದರು.

‘ಯಾವುದೇ ಸರ್ಕಾರ ಈ ನೀಚ ಕೆಲಸವನ್ನು ಮಾಡಿದ್ದರೂ ತಪ್ಪು. ಈಗ ಅಧಿಕಾರದಲ್ಲಿರುವ ನಾವು ಸ್ವಾಮೀಜಿಯವರ ಕ್ಷಮೆ ಕೇಳುತ್ತೇವೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT