ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರ‍್ಯಾನ್ಸಮ್ ವೇರ್‌’ ಅಸ್ತ್ರ ಬಳಸಿ ಹ್ಯಾಕ್‌ ಮಾಡುತ್ತಿದ್ದ ಶ್ರೀಕೃಷ್ಣ

Last Updated 20 ನವೆಂಬರ್ 2020, 3:07 IST
ಅಕ್ಷರ ಗಾತ್ರ

ಬೆಂಗಳೂರು: ‘ರ‍್ಯಾನ್ಸಮ್ ವೇರ್’ ಅಸ್ತ್ರ ಬಳಸಿಕೊಂಡು ಜಾಲತಾಣ ಹ್ಯಾಕ್‌ ಮಾಡಿ ಬಿಟ್‌ ಕಾಯಿನ್‌ಗಳಿಗೆ ಬೇಡಿಕೆ ಇಡುತ್ತಿದ್ದ ಕೃತ್ಯದಲ್ಲಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (25) ಭಾಗಿಯಾಗಿರುವ ಮಾಹಿತಿ ಸಿಸಿಬಿಗೆ ಲಭ್ಯವಾಗಿದೆ.

‘ಕೆಂಪೇಗೌಡ ನಗರ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಶ್ರೀಕೃಷ್ಣ, ಅಂತರರಾಷ್ಟ್ರೀಯ ಹ್ಯಾಕರ್. ಕಂಪ್ಯೂಟರ್‌ ಪ್ರೋಗ್ರಾಮಿಂಗ್ ಹಾಗೂ ಕೋಡಿಂಗ್‌ನಲ್ಲಿ ಪರಿಣಿತ. ತನ್ನದೇ ಆದ ರೀತಿಯಲ್ಲಿ ಜಾಲತಾಣಗಳಲ್ಲಿ ಸುಲಭವಾಗಿ ಹ್ಯಾಕ್ ಮಾಡುವ ಕಲೆ ಇವರಲ್ಲಿದೆ. ಅದನ್ನು ಬಳಸಿಕೊಂಡೇ ಆರೋಪಿ, ಕೋಟ್ಯಂತರ ರೂಪಾಯಿ ಗಳಿಸಿದ್ದಾರೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

‘ಭಾರತ ಹಾಗೂ ವಿದೇಶದ ಪ್ರತಿಷ್ಠಿತ ಕಂಪನಿಗಳ ಜಾಲತಾಣಗಳಲ್ಲಿ ‘ರ‍್ಯಾನ್ಸಮ್ ವೇರ್’ ಮೂಲಕ ಶ್ರೀಕೃಷ್ಣ ಹ್ಯಾಕ್ ಮಾಡಿದ್ದಾರೆ. ಜಾಲತಾಣದ ಮೂಲಕ ಕಂಪನಿ ದತ್ತಾಂಶವನ್ನೆಲ್ಲ ಕದ್ದು, ತನ್ನ ಬಳಿ ಇಟ್ಟುಕೊಂಡಿದ್ದರು. ಬಿಟ್‌ ಕಾಯಿನ್ ರೂಪದಲ್ಲಿ ಹಣ ನೀಡಿದರೆ ಮಾತ್ರ ದತ್ತಾಂಶ ವಾಪಸು ನೀಡುವುದಾಗಿ ಅವರು ಬೆದರಿಸುತ್ತಿದ್ದರು. ದತ್ತಾಂಶ ಅಗತ್ಯವಿರುವವರು ಅವರು ಕೇಳಿದಷ್ಟು ಹಣ ಕೊಟ್ಟಿದ್ದಾರೆ. ಈ ಸಂಗತಿ ಆರೋಪಿ ವಿಚಾರಣೆಯಿಂದ ಗೊತ್ತಾಗಿದೆ’ ಎಂದೂ ಮೂಲಗಳು ಹೇಳಿವೆ.

‘ನೆದರ್‌ಲೆಂಡ್‌ನಲ್ಲಿ ಬಿ.ಎಸ್ಸಿ (ಕಂಪ್ಯೂಟರ್‌ ಸೈನ್ಸ್) ಮುಗಿಸಿದ್ದ ಶ್ರೀಕೃಷ್ಣ, ಬೆಂಗಳೂರಿಗೆ ಬಂದು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ರಾಜಕಾರಣಿ, ಉದ್ಯಮಿಗಳು ಹಾಗೂ ಗಣ್ಯರ ಮಕ್ಕಳ ಪರಿಚಯ ಅವರಿಗೆ ಆಗಿತ್ತು. ಐಷಾ
ರಾಮಿ ಜೀವನಕ್ಕೆ ಅಗತ್ಯವಾದ ಹಣ ಗಳಿಸಲು ಕೃತ್ಯ ಎಸಗಲಾರಂಭಿಸಿದ್ದರು.’

‘ಆರಂಭದಲ್ಲಿ ಗೇಮ್‌ಗೆ ಸಂಬಂಧಪಟ್ಟ ಜಾಲತಾಣವನ್ನು ಆರೋಪಿ, ಹ್ಯಾಕ್ ಮಾಡಿದ್ದರು. ಎದುರಾಳಿ ಸ್ಪರ್ಧಿಗಳ ಮಾಹಿತಿ ಕದ್ದು, ಆಟದಲ್ಲಿ ಜಯಿಸಿ ಹಣ ಗಳಿಕೆ ಮಾಡಿದ್ದರು. ನಂತರ, ದೇಶ– ವಿದೇಶಗಳ ಹಲವು ಜಾಲತಾಣಗಳಲ್ಲಿ ಸುಲಭವಾಗಿ ಹ್ಯಾಕ್ ಮಾಡಿ ಹಣ ಸಂಪಾದಿಸಿದ್ದಾರೆ. ಹಣ ಎಲ್ಲಿದೆ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದೂ ಸಿಸಿಬಿ ಮೂಲಗಳು ತಿಳಿಸಿವೆ.

ದರ್ಶನ್‌ ಲಮಾಣಿ ಆಪ್ತ ಸ್ನೇಹಿತ: ‘ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲಾಗಿರುವ ಕಾಂಗ್ರೆಸ್‌ ಮುಖಂಡರೂ ಆದ ಹಾವೇರಿಯ ರುದ್ರಪ್ಪ ಲಮಾಣಿ ಪುತ್ರ ದರ್ಶನ್‌ ಹಾಗೂ ಇತರರು, ಶ್ರೀಕೃಷ್ಣ ಅವರ ಆಪ್ತ ಸ್ನೇಹಿತರು. ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ಜಾಲತಾಣಗಳನ್ನು ಶ್ರೀಕೃಷ್ಣ ಮೂಲಕ ಹ್ಯಾಕ್ ಮಾಡಿಸಿ ಹಣ ಸುಲಿಗೆ ಮಾಡುತ್ತಿದ್ದರು. ಡ್ರಗ್ಸ್ ಪ್ರಕರಣದ ಆರೋಪಿಗಳಾದ ಎಂ.ಸುಜಯ್, ಪ್ರಸಿದ್ ಶೆಟ್ಟಿ, ಸುನೀಷ್ ಹೆಗ್ಡೆ ಹಾಗೂ ಹೇಮಂತ್ ಮುದ್ದಪ್ಪ ಜೊತೆಯೂ ಶ್ರೀಕೃಷ್ಣ ಒಡನಾಟ ಹೊಂದಿ
ದ್ದರು. ಸುಲಿಗೆಯಿಂದ ಬಂದ ಬಿಟ್‌ ಕಾಯಿನ್‌ಗಳನ್ನೇ, ಡಾರ್ಕ್‌ನೆಟ್‌ನಲ್ಲಿ ಡ್ರಗ್ಸ್ ಖರೀದಿಸಲು ಬಳಸು
ತ್ತಿದ್ದರು. ವಿದೇಶಿ ಹಣ ವರ್ಗಾವಣೆಗೂ ಆರೋಪಿಗಳು ಬಿಟ್‌ ಕಾಯಿನ್ ಉಪಯೋಗಿಸಿದ್ದಾರೆ’ ಎಂದೂ ತಿಳಿಸಿವೆ.

ಪೊಲೀಸರ ಸಹಕಾರ: ‘ಹಲವು ಅಪರಾಧ ಕೃತ್ಯಗಳಲ್ಲಿ ಶ್ರೀಕೃಷ್ಣನ ಹೆಸರಿತ್ತು. ಆದರೆ, ಆವರು ಪೊಲೀಸರಿಗೆ ಸಿಕ್ಕಿಬಿದ್ದಿರಲಿಲ್ಲ. ಕೆಲ ಪೊಲೀಸರು ಅವರಿಗೆ ಸಹಕಾರ ನೀಡುತ್ತಿದ್ದರು. ಅದರಿಂದಲೇ ತಲೆಮರೆಸಿಕೊಂಡು ಓಡಾಡುತ್ತಿದ್ದರೆಂಬ ಮಾಹಿತಿ ಇದೆ. ಅಂಥ ಪೊಲೀಸರು ಯಾರೆಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದೂ ಸಿಸಿಬಿ ಮೂಲಗಳು ತಿಳಿಸಿವೆ.

ಐಎಎಸ್, ಐಪಿಎಸ್, ರಾಜಕಾರಣಿಗಳ ಒತ್ತಡ?

ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಪ್ರಭಾವಿಗಳ ಮಕ್ಕಳ ಪರವಾಗಿ ಕೆಲ ಐಎಎಸ್, ಐಪಿಎಸ್ ಅಧಿಕಾರಿಗಳು ಹಾಗೂ ಕೆಲ ರಾಜಕಾರಣಿಗಳು, ಸಿಸಿಬಿ ಪೊಲೀಸರಿಗೆ ಕರೆ ಮಾಡುತ್ತಿದ್ದಾರೆ. ಪ್ರಕರಣದಿಂದ ಅವರನ್ನು ಮುಕ್ತಗೊಳಿಸುವಂತೆ ಒತ್ತಡ ಹೇರುತ್ತಿದ್ದಾರೆಂದು ಗೊತ್ತಾಗಿದೆ.

ಪ್ರಸಿದ್ ಶೆಟ್ಟಿ ಸದಾಶಿವನಗರದ ಹೆಸರಾಂತ ವೈದ್ಯರ ಪುತ್ರ. ದರ್ಶನ್‌ ಲಮಾಣಿ, ಮಾಜಿ ಸಚಿವರ ಮಗ. ಉಳಿದ ಆರೋಪಿಗಳ ಪೋಷಕರು ಸಹ ಉದ್ಯಮಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT