ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಟರ್‌ ಬಡ್ಡಿ: ಫೈನಾನ್ಶಿಯರ್ ಮನೆ ಮೇಲೆ ದಾಳಿ, ಬಂಧನ

Last Updated 6 ಡಿಸೆಂಬರ್ 2020, 13:50 IST
ಅಕ್ಷರ ಗಾತ್ರ

ಬೆಂಗಳೂರು: ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಹಾಗೂ ಬಡ್ಡಿ ಪಾವತಿಸದ ಸಾರ್ವಜನಿಕರಿಗೆ ಜೀವ ಬೆದರಿಕೆಯೊಡ್ಡುತ್ತಿದ್ದ ಆರೋಪದಡಿ ನಾಗರಾಜ್ ಶೆಟ್ಟಿ (42) ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಮಲ್ಲೇಶ್ವರ ನಿವಾಸಿ ನಾಗರಾಜ್, ‘ಬಾಲಾಜಿ ಫೈನಾನ್ಸ್’ ಹೆಸರಿನಲ್ಲಿ ಕಚೇರಿ ಇಟ್ಟುಕೊಂಡಿದ್ದರು. ಮಲ್ಲೇಶ್ವರ ಹಾಗೂ ವೈಯಾಲಿಕಾವಲ್ ಸುತ್ತಮುತ್ತಲಿನ ವ್ಯಾಪಾರಿಗಳಿಗೆ ಬಡ್ಡಿಗೆ ಸಾಲ ಕೊಡುತ್ತಿದ್ದರು. ಶೆಟ್ಟಿ ವಿರುದ್ಧ ಇತ್ತೀಚೆಗೆ ದೂರು ಬಂದಿತ್ತು. ಅದರ ತನಿಖೆ ಕೈಗೊಂಡ ವಿಶೇಷ ತಂಡ, ಆರೋಪಿಯನ್ನು ಬಂಧಿಸಿದೆ’ ಎಂದು ಸಿಸಿಬಿ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ನ್ಯಾಯಾಲಯದ ಶೋಧನಾ ವಾರೆಂಟ್ ಪಡೆದು ನಾಗರಾಜ್ ಮನೆ ಮೇಲೂ ದಾಳಿ ಮಾಡಲಾಯಿತು. ₹ 22 ಲಕ್ಷ ನಗದು, 164 ಚೆಕ್‌ಗಳು, 84 ಡಿ.ಡಿ.ಗಳು ಹಾಗೂ ಲಕ್ಷಾಂತರ ಮೌಲ್ಯದ ಆಸ್ತಿ ಪತ್ರಗಳು ಪತ್ತೆಯಾಗಿವೆ’ ಎಂದೂ ತಿಳಿಸಿದರು.

‘ಹಲವು ವರ್ಷಗಳಿಂದ ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದ ನಾಗರಾಜ್, ಶ್ಯೂರಿಟಿ ಇಟ್ಟುಕೊಂಡು ಸಾಲ ಕೊಡುತ್ತಿದ್ದರು. ಸಾರ್ವಜನಿಕರಿಂದ ಶೇ 6ರಿಂದ ಶೇ 10ರಷ್ಟು ಬಡ್ಡಿ ವಸೂಲಿ ಮಾಡುತ್ತಿದ್ದರು. ಅಸಲು ಹಾಗೂ ನಿಗದಿತ ಬಡ್ಡಿ ಪಾವತಿ ಮಾಡಿದರೂ ಮತ್ತಷ್ಟು ಬಡ್ಡಿ ಪಾವತಿಸುವಂತೆ ಬೆದರಿಸುತ್ತಿದ್ದರು’ ಎಂದೂ ವಿವರಿಸಿದರು.

‘ಮಲ್ಲೇಶ್ವರ ಬಟ್ಟೆ ವ್ಯಾಪಾರಿ ಸುನೀಲ್‌ಕುಮಾರ್ ಎಂಬುವರು 2017ರಲ್ಲಿ ನಾಗರಾಜ್ ಶೆಟ್ಟಿ ಬಳಿ ₹ 5 ಲಕ್ಷ ಸಾಲ ಪಡೆದಿದ್ದರು. ನಿಗದಿತ ಸಮಯಕ್ಕೆ ಅದನ್ನು ಮರು ಪಾವತಿ ಮಾಡಿದ್ದರು. ಅಷ್ಟಾದರೂ ಆರೋಪಿ, ಮತ್ತಷ್ಟು ಹಣ ನೀಡುವಂತೆ ಪೀಡಿಸಲಾರಂಭಿಸಿದ್ದರು. ಬೇಸತ್ತ ಸುನೀಲ್‌, ವೈಯಾಲಿಕಾವಲ್ ಠಾಣೆಗೆ ದೂರು ನೀಡಿದ್ದರು. ಅದರ ತನಿಖೆಯನ್ನು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರು ಸಿಸಿಬಿಗೆ ವರ್ಗಾಯಿಸಿದ್ದರು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT