ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ‌ದ ಮೇಲೆ ಸಿಸಿಬಿ ದಾಳಿ

Last Updated 30 ನವೆಂಬರ್ 2021, 21:00 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಚಟುವಟಿಕೆ ನಡೆಯುತ್ತಿದ್ದ ಮಾಹಿತಿ ಮೇರೆಗೆ ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ಮಂಗಳವಾರ ಬೆಳಿಗ್ಗೆ ದಿಢೀರ್ ದಾಳಿ ಮಾಡಿದರು.

ಸಿಸಿಬಿಯ ಇಬ್ಬರು ಡಿಸಿಪಿಗಳ ನೇತೃತ್ವದಲ್ಲಿ ಮೂವರು ಎಸಿಪಿಗಳು ಹಾಗೂ 15 ಇನ್‌ಸ್ಪೆಕ್ಟರ್‌ಗಳು ಏಕಕಾಲದಲ್ಲಿ ಜೈಲಿಗೆ ಪ್ರವೇಶಿಸಿದರು. ಪ್ರತಿಯೊಂದು ಬ್ಯಾರಕ್‌ ಹಾಗೂ ಕೊಠಡಿಗಳಲ್ಲಿ ತಪಾಸಣೆ ನಡೆಸಿದರು. ಅನುಮಾನ ಬಂದ ಕೈದಿಗಳನ್ನು ವಿಚಾರಣೆ ನಡೆಸಿ, ಮಾಹಿತಿ ಪಡೆದುಕೊಂಡರು.

‘ಶಿಕ್ಷೆಗೆ ಗುರಿಯಾಗಿರುವ ಕೈದಿಗಳು ಹಾಗೂ ವಿಚಾರಣಾಧೀನ ಕೈದಿಗಳು ಜೈಲಿನಲ್ಲೇ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದ ಮಾಹಿತಿ ಇತ್ತು. ಮೊಬೈಲ್ ಬಳಕೆ ಹಾಗೂ ಡ್ರಗ್ಸ್ ಸೇವಿಸುತ್ತಿರುವ ಶಂಕೆಯೂ ಇತ್ತು. ಜೈಲು ಸಿಬ್ಬಂದಿಗೂ ಕೆಲ ಕೈದಿಗಳು ಬೆದರಿಕೆಯೊಡುತ್ತಿದ್ದರು. ಕಾರಾಗೃಹ ಅಧಿಕಾರಿಗಳ ನೆರವು ಪಡೆದು ಜೈಲಿನ ಮೇಲೆ ದಾಳಿ ಮಾಡಲಾಯಿತು’ ಎಂದು ಸಿಸಿಬಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಗಾಂಜಾ ಪೊಟ್ಟಣ ಹಾಗೂ ಗಾಂಜಾ ಸೇದಲು ಬಳಸುವ ಚಿಲುಮೆ ಬ್ಯಾರಕ್‌ನಲ್ಲಿ ಪತ್ತೆಯಾಗಿವೆ. ಒಂದು ಬ್ಯಾರಕ್‌ನಲ್ಲಿ 30ಕ್ಕೂ ಹೆಚ್ಚು ಜನರಿದ್ದಾರೆ. ಅದರಲ್ಲಿ ಯಾರು ಗಾಂಜಾ ಸೇದುತ್ತಿದ್ದರೆಂಬುದು ಗೊತ್ತಾಗಿಲ್ಲ. ಈ ಬಗ್ಗೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದೂ ತಿಳಿಸಿದರು.

‘ಕಾರಾಗೃಹದಲ್ಲಿ ನಡೆಯುತ್ತಿದ್ದ ಅಕ್ರಮದ ಬಗ್ಗೆ ಹಲವರು ಮಾಹಿತಿ ನೀಡಿದ್ದರು. ಹೀಗಾಗಿ, ದಾಳಿಯ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ದಾಳಿ ಬಗ್ಗೆ ವರದಿ ಸಿದ್ಧಪಡಿಸಿ ಕ್ರಮ ಜರುಗಿಸಲಾಗುವುದು. ಮುಂದಿನ ದಿನಗಳಲ್ಲೂ ಅನಿರೀಕ್ಷಿತ ದಾಳಿಗಳನ್ನು ನಡೆಸಲಾಗುವುದು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT