ಗುರುವಾರ , ನವೆಂಬರ್ 26, 2020
20 °C

ಸಂಪತ್‌ ರಾಜ್ ಪರಾರಿ; ವಿಶೇಷ ತಂಡಗಳಿಂದ ಹುಡುಕಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿರುವ ಕಾಂಗ್ರೆಸ್ ಮುಖಂಡ ಆರ್. ಸಂಪತ್‌ ರಾಜ್ ಪತ್ತೆಗಾಗಿ ಸಿಸಿಬಿಯ ವಿಶೇಷ ತಂಡಗಳು ಹುಡುಕಾಟ ನಡೆಸಿದ್ದು, ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.

ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ್ದ ಪ್ರಕರಣದ ಆರೋಪಿಯಾಗಿರುವ ಸಂಪತ್‌ ರಾಜ್, ಕೊರೊನಾ ಸೋಂಕು ತಗುಲಿದ ನೆಪವೊಡ್ಡಿ ಆಸ್ಪತ್ರೆಗೆ ದಾಖಲಾಗಿದ್ದರು. ಅ. 30ರಂದು ಬೆಳಿಗ್ಗೆ ಆಸ್ಪತ್ರೆಯಿಂದ ಬಿಡುಗಡೆ ಆಗಿ ಪರಾರಿಯಾಗಿದ್ದಾರೆ.

‘ಪ್ರಕರಣದ ಪ್ರಮುಖ ಆರೋಪಿ ಆಗಿರುವ ಸಂಪತ್‌ರಾಜ್ ವಿರುದ್ಧ ನ್ಯಾಯಾಲಯಕ್ಕೆ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಕೊರೊನಾ ಸೋಂಕು ತಗುಲಿದ ಕಾರಣ ನೀಡಿದ್ದಕ್ಕಾಗಿ, ಅವರನ್ನ ಬಂಧಿಸಿರಲಿಲ್ಲ. ಆದರೆ, ಅವರು ಏಕಾಏಕಿ ಆಸ್ಪತ್ರೆಯಿಂದ ಪರಾರಿಯಾಗಿದ್ದನ್ನು ಗಂಭೀರವಾಗಿ ಪರಿಗಣಿಸಲಾಗಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

‘ಆಸ್ಪತ್ರೆ ಆಡಳಿತ ಮಂಡಳಿಗೂ ನೋಟಿಸ್ ನೀಡಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪರಾರಿಯಾಗಿರುವ ಸಂಪತ್‌ರಾಜ್, ಸಂಬಂಧಿಕರು ಹಾಗೂ ಸ್ನೇಹಿತರ ಜೊತೆ ಸಂಪರ್ಕದಲ್ಲಿರುವ ಮಾಹಿತಿ ಇದೆ. ಆ ಬಗ್ಗೆಯೂ ಪ್ರತ್ಯೇಕ ತಂಡವೊಂದು ತನಿಖೆ ಮುಂದುವರಿಸಿದೆ’ ಎಂದೂ ತಿಳಿಸಿದರು.

ಹೊಸ ಸಿಮ್‌ಕಾರ್ಡ್‌ ಬಳಕೆ ಶಂಕೆ: ‘ಆರೋಪಿ ಸಂಪತ್‌ರಾಜ್, ಹೊಸ ಸಿಮ್‌ ಕಾರ್ಡ್‌ ಬಳಕೆ ಮಾಡುತ್ತಿರುವ ಶಂಕೆ ಇದೆ. ಆ ಸಂಖ್ಯೆ ಯಾವುದು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಅಧಿಕಾರಿ ಹೇಳಿದರು.

‘ಬೆಂಗಳೂರು ಅಥವಾ ನೆರೆ ಜಿಲ್ಲೆಗಳಲ್ಲಿ ಸಂಪತ್‌ರಾಜ್ ತಲೆಮರೆಸಿಕೊಂಡಿರುವ ಮಾಹಿತಿ ಇದೆ. ಹೀಗಾಗಿ, ವಿಶೇಷ ತಂಡಗಳು ಹಲವೆಡೆ ಸಂಚರಿಸುತ್ತಿದ್ದು, ಸದ್ಯದಲ್ಲೇ ಸಂಪತ್‌ ರಾಜ್ ಅವರನ್ನು ಬಂಧಿಸಲಾಗುವುದು’ ಎಂದೂ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು