ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿಪರ ಕೋರ್ಸುಗಳಿಗೆ ಸಿಇಟಿ: ಏಪ್ರಿಲ್‌ 20, 21ರಂದು ಪರೀಕ್ಷೆ

ಜ.10ರಿಂದ ಅರ್ಜಿ ಸಲ್ಲಿಕೆ ಆರಂಭ
Published 22 ಡಿಸೆಂಬರ್ 2023, 16:23 IST
Last Updated 22 ಡಿಸೆಂಬರ್ 2023, 16:23 IST
ಅಕ್ಷರ ಗಾತ್ರ

ಬೆಂಗಳೂರು: ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳಿಗೆ 2024ರ ಏಪ್ರಿಲ್‌ 20 ಮತ್ತು 21ರಂದು ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ನಡೆಯಲಿದೆ.

ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ,  ಆಸಕ್ತ ಅಭ್ಯರ್ಥಿಗಳು ಜನವರಿ 10ರಿಂದ ನಿಗದಿತ ಶುಲ್ಕದೊಂದಿಗೆ ಆನ್‌ಲೈನ್‌ ಅರ್ಜಿ ಸಲ್ಲಿಸಬಹುದು ಎಂದಿದ್ದಾರೆ.

ಏ.20ರ ಬೆಳಿಗ್ಗೆ 10.30ರಿಂದ ಜೀವ ವಿಜ್ಞಾನ, ಮಧ್ಯಾಹ್ನ 2.30ರಿಂದ ಗಣಿತ, 21ರಂದು ಬೆಳಿಗ್ಗೆ ಭೌತ ವಿಜ್ಞಾನ ಮತ್ತು ಮಧ್ಯಾಹ್ನ ರಸಾಯನ ವಿಜ್ಞಾನ ಪರೀಕ್ಷೆ ತಲಾ 60 ಅಂಕಗಳಿಗೆ ನಡೆಯಲಿದೆ. ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಏ.19ರಂದು ಬೆಂಗಳೂರು, ಬೀದರ್‌, ಬೆಳಗಾವಿ, ಬಳ್ಳಾರಿ, ವಿಜಯಪುರ ಮತ್ತು ಮಂಗಳೂರು ಕೇಂದ್ರಗಳಲ್ಲಿ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ನ್ಯಾಚುರೋಪಥಿ ಮತ್ತು ಯೋಗ, ಬಿ.ಫಾರ್ಮಾ, ಫಾರ್ಮಾ-ಡಿ, ದ್ವಿತೀಯ ವರ್ಷದ ಬಿ.ಫಾರ್ಮಾ, ಕೃಷಿ ಕೋರ್ಸುಗಳು, ಪಶು ಸಂಗೋಪನೆ, ಬಿ.ಎಸ್‌ಸಿ (ನರ್ಸಿಂಗ್), ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್‌ ‌ ಕೋರ್ಸುಗಳಿಗೆ ಪ್ರವೇಶ ಬಯಸುವ ಅಭ್ಯರ್ಥಿಗಳಿಗೂ ಈ ಸೂಚನೆ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಸರಿಯಾದ ಆರ್‌.ಡಿ. ಸಂಖ್ಯೆ, ಜಾತಿ/ಆದಾಯ ಪ್ರಮಾಣಪತ್ರ ಮತ್ತು ಕಲ್ಯಾಣ ಕರ್ನಾಟಕ (371ಜೆ) ಪ್ರಮಾಣಪತ್ರಕ್ಕೆ ಸಂಬಂಧಿಸಿದ ಅಗತ್ಯ ವಿವರಗಳನ್ನು ದಾಖಲಿಸಬೇಕು. ತಪ್ಪಿದಲ್ಲಿ, ಇಂಥವರು ಅರ್ಜಿ ಸಲ್ಲಿಕೆ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಿ.ಇ.ಗೆ ನೇರ ಪ್ರವೇಶ: ಏ.18ರಂದು ಸಿಇಟಿ

ಎಂಜಿನಿಯರಿಂಗ್‌ನ 3ನೇ ಸೆಮಿಸ್ಟರ್‌ಗೆ ನೇರ ಪ್ರವೇಶಾತಿ ಬಯಸುವ ಅರ್ಹ ಅಭ್ಯರ್ಥಿಗಳಿಗೆ ಏ.18ರಂದು ಸಿಇಟಿ ನಡೆಸಲಾಗುವುದು. ಅರ್ಜಿ ತುಂಬಲು ಸದ್ಯ ದಲ್ಲೇ ಪೋರ್ಟಲ್‌ ತೆರೆಯಲಾಗುವುದು. ಎಂಬಿಎ, ಎಂಸಿಎ, ಎಂ.ಇ, ಎಂ.ಟೆಕ್‌, ಎಂ.ಆರ್ಕ್‌ ಕೋರ್ಸುಗಳಿಗೆ ಪ್ರವೇಶ ಬಯಸುವ ಅರ್ಹ ಅಭ್ಯರ್ಥಿಗಳಿಗೆ ಏ.18 ಮತ್ತು 19ರಂದು ಪಿಜಿಸಿಇಟಿ ನಡೆಸಲಾಗುವುದು. ಇವರಿಗೂ ಅರ್ಜಿ ಸಲ್ಲಿಕೆಗೆ ಶೀಘ್ರದಲ್ಲೇ ಪೋರ್ಟಲ್‌ ತೆರೆಯಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ.

ಸರಿಯಾದ ಬ್ಯಾಂಕ್‌ ವಿವರ ನೀಡಿ: 2023ರಲ್ಲಿ ವಿವಿಧ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಬಯಸಿ ನಂತರ ಸೀಟು ರದ್ದುಪಡಿಸಿಕೊಂಡಿರುವ ಅಥವಾ ಹೆಚ್ಚುವರಿ ಶುಲ್ಕ ಪಾವತಿಸಿರುವ ಅಭ್ಯರ್ಥಿಗಳಿಗೆ ಪ್ರಾಧಿಕಾರವು ಆ ಮೊತ್ತವನ್ನು ಹಿಂದಿರುಗಿಸುತ್ತಿದೆ. ಕೆಲವರ ಅರ್ಜಿಗಳಲ್ಲಿ ಬ್ಯಾಂಕ್‌ ವಿವರಗಳು ತಪ್ಪಾಗಿದ್ದು, ಡಿ.31ರೊಳಗೆ ಸರಿಯಾದ ವಿವರ ನಮೂದಿಸಲು ಪ್ರಾಧಿಕಾರ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT