ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಲವಾದಿ, ಮಡಿವಾಳ ಸಮುದಾಯದ ಪ್ರಮುಖರ ‘ಕೈ’ ಸೇರ್ಪಡೆ

Published 8 ಏಪ್ರಿಲ್ 2024, 14:48 IST
Last Updated 8 ಏಪ್ರಿಲ್ 2024, 14:48 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ನಾಯಕ, ನಿವೃತ್ತ ಐಎಎಸ್‌ ಅಧಿಕಾರಿ ದಿವಂಗತ ಕೆ.ಶಿವರಾಂ ಅವರ ಪತ್ನಿ ವಾಣಿ ಶಿವರಾಂ, ಪಾಲಿಕೆ ಮಾಜಿ ಸದಸ್ಯೆ, ಆರ್.ಆರ್. ನಗರದ ರೂಪಾ ಲಿಂಗೇಶ್, ಮಡಿವಾಳ ಸಮುದಾಯದ ಮುಖಂಡ ಗೋಪಿಕೃಷ್ಣ ಅವರು ಸೋಮವಾರ ಕಾಂಗ್ರೆಸ್‌ ಪಕ್ಷ ಸೇರಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಎಲ್ಲರಿಗೂ ಕಾಂಗ್ರೆಸ್ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು

ಶಿವಕುಮಾರ್‌ ಮಾತನಾಡಿ, ‘ನಿಧನರಾಗುವ ಕೆಲವು ದಿನಗಳ ಮೊದಲೇ ಶಿವರಾಂ ಅವರು ಕಾಂಗ್ರೆಸ್ ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದ್ದರು. ಅವರ ಕುಟುಂಬದವರು ಮತ್ತು ಹಾಗೂ ಅನುಯಾಯಿಗಳು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಜೊತೆಗೆ, ಛಲವಾದಿ ಮಹಾಸಭಾದ ಪ್ರಮುಖ ನಾಯಕರೂ ಪಕ್ಷ ಸೇರಿದ್ದರಿಂದ ಶಕ್ತಿ ಬಂದಂತಾಗಿದೆ’ ಎಂದರು.

ಮತ್ತೆ ಕೇರಳಕ್ಕೆ: ‌‘ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಇದೇ ‌16ರಂದು ಕೇರಳ ಪ್ರವಾಸ ಮಾಡಲಿದ್ದೇನೆ. ನಂತರ ನಮ್ಮ ರಾಜ್ಯದ ಚುನಾವಣೆ ಮುಗಿದ ಬಳಿಕ ತೆಲಂಗಾಣ ಮತ್ತು ಆಂಧ್ರ ಪ್ರದೇಶಕ್ಕೆ ತೆರಳುತ್ತಿದ್ದೇನೆ. ಮುಖ್ಯಮಂತ್ರಿ ಜತೆಯಲ್ಲಿ ಉತ್ತರ ಪ್ರದೇಶಕ್ಕೆ ತೆರಳುವಂತೆ ಪಕ್ಷದ ನಾಯಕರು ಸೂಚನೆ ನೀಡಿದ್ದಾರೆ’ ಎಂದರು. 

ಪ್ರಚಾರಕ್ಕೆ ರಾಹುಲ್‌, ಪ್ರಿಯಾಂಕಾ: ‘ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಒಂದೆರಡು ದಿನ ರಾಜ್ಯದಲ್ಲಿ ಪ್ರಚಾರ ಮಾಡುವಂತೆ ದಿನಾಂಕಗಳನ್ನು ನೀಡಿದ್ದೇವೆ. ಪ್ರಚಾರಕ್ಕೆ ಬರುವಂತೆ ಮಲ್ಲಿಕಾರ್ಜುನ ಖರ್ಗೆಯವರಿಗೂ ಮನವಿ ಮಾಡಿದ್ದೇವೆ. ಉತ್ತರ ಭಾರತದಲ್ಲಿ ಖರ್ಗೆ ಅವರಿಗೆ ಬಹಳ ಬೇಡಿಕೆ ಇದೆ’ ಎಂದರು.

‘ಗ್ಯಾರಂಟಿ ನೋಡಿ ಮತ ಹಾಕಿದರೆ ಕುಕ್ಕರ್ ಬ್ಲಾಸ್ಟ್ ಸಂಭವಿಸಲಿದೆ’ ಎಂಬ ಸಿ.ಟಿ. ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಗ್ಯಾರಂಟಿ ಬಗ್ಗೆ ಮಾತನಾಡಿ ಅವರೂ ಬ್ಲಾಸ್ಟ್ ಆಗಿದ್ದಾರೆ. ಶೋಭಕ್ಕನಿಗೆ ಗೋಬ್ಯಾಕ್ ಎಂದು ಸದಾನಂದ ಗೌಡರನ್ನು ಅವರು ಬ್ಲಾಸ್ಟ್ ಮಾಡಿದ್ದಾರೆ. ಸಿ.ಟಿ. ರವಿಯನ್ನು ನಮ್ಮ ತಮ್ಮಣ್ಣ ಬ್ಲಾಸ್ಟ್ ಮಾಡಿದ್ದಾರೆ’ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌ ಸೇರ್ಪಡೆ: ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಕೆ. ರವಿಚಂದ್ರ, ಸರ್ವಜ್ಞನಗರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಮೊಹಮದ್ ಮುಸ್ತಾಫ, ಆನೇಕಲ್‌ನ ಬಿಜೆಪಿ ನಾಯಕರಾದ ಮಂಜು, ವಿಜಯ್ ಕುಮಾರ್, ಚಾಮರಾಜನಗರದ ಛಲವಾದಿ ಮಹಾಸಭಾದ ಉಪಾಧ್ಯಕ್ಷ ಬಸವರಾಜ್, ಜೆಡಿಎಸ್ ಮುಖಂಡ, ಬಿಡದಿಯ ಕೃಷ್ಣಪ್ಪ, ಎಚ್.ಡಿ. ಕೋಟೆಯಿಂದ ಪರಮಶಿವಮೂರ್ತಿ, ಛಲವಾದಿ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಶಿವಕುಮಾರ್, ರೈತ ಸಂಘದಿಂದ ವೀರಭದ್ರಸ್ವಾಮಿ, ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಸಿ.ಎಸ್. ಪ್ರಕಾಶ್ ಅವರು ಕಾಂಗ್ರೆಸ್‌ ಸೇರಿದರು. 

ಕಾಂಗ್ರೆಸ್ ವಕ್ತಾರರಾಗಿ ತೇಜಸ್ವಿನಿ ಗೌಡ

ಇತ್ತೀಚೆಗೆ ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ ಸೇರಿರುವ ವಿಧಾನ ಪರಿಷತ್ ಮಾಜಿ ಸದಸ್ಯೆ ತೇಜಸ್ವಿನಿ ಗೌಡ ಅವರನ್ನು ಕಾಂಗ್ರೆಸ್‌ ವಕ್ತಾರರಾಗಿ ನೇಮಿಸಲಾಗಿದೆ. ‘ತೇಜಸ್ವಿನಿಯವರು ಕಾಂಗ್ರೆಸ್ ಮೂಲದವರು. ಹಿಂದೆ ಕಾಂಗ್ರೆಸ್‌ನಿಂದ ಸಂಸದರಾಗಿದ್ದರು. ಕಾಂಗ್ರೆಸ್ ಪಕ್ಷದಿಂದ ಮಾತ್ರ ಈ ದೇಶಕ್ಕೆ ಒಳ್ಳೆಯದಾಗಲಿದೆ ಎಂದು ಪಕ್ಷಕ್ಕೆಮರಳಿದ್ದಾರೆ. ಸೋಮವಾರದಿಂದ ಅವರು ಪಕ್ಷದ ಅಧಿಕೃತ ವಕ್ತಾರರಾಗಿರುತ್ತಾರೆ’ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT