ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಡಬ್ಲ್ಯು ಕಾರು, ಐಷಾರಾಮಿ ಕೊಠಡಿ: ನಕಲಿ ರಶೀದಿ ವಂಚನೆ

Published 4 ಏಪ್ರಿಲ್ 2024, 16:19 IST
Last Updated 4 ಏಪ್ರಿಲ್ 2024, 16:19 IST
ಅಕ್ಷರ ಗಾತ್ರ

ಬೆಂಗಳೂರು: ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ಹಣ ಪಾವತಿಯ ನಕಲಿ ರಶೀದಿ ತೋರಿಸಿ ನಗರದ ಪಂಚತಾರಾ ಹೋಟೆಲ್‌ವೊಂದರ ಸಿಬ್ಬಂದಿಯನ್ನು ವಂಚಿಸಿದ ಆರೋಪಿ ಬೋರಾಡ ಸುನೀಲ್‌ (24) ಎಂಬುವವರನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಆಂಧ್ರಪ್ರದೇಶ ವಿಶಾಖಪಟ್ಟಣದ ಸುಧೀರ್ ವಿರುದ್ಧ ಹೋಟೆಲ್‌ ವ್ಯವಸ್ಥಾಪಕ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂದು ಆರೋಪಿಯನ್ನು ಬಂಧಿಸಲಾಗಿದೆ. ಸೇನೆ ಅಧಿಕಾರಿ, ಸರ್ಕಾರಿ ಅಧಿಕಾರಿ ಹಾಗೂ ಇತರೆ ಸೋಗಿನಲ್ಲಿ ಆರೋಪಿ ಹಲವರನ್ನು ವಂಚಿಸಿರುವ ಮಾಹಿತಿ ಇದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಬಿಎಂಡಬ್ಲ್ಯು ಕಾರಿನಲ್ಲಿ ಬಂದಿದ್ದ: ‘ಆನ್‌ಲೈನ್ ಮೂಲಕ ಪಂಚತಾರಾ ಹೋಟೆಲ್‌ನ ಕೊಠಡಿಯನ್ನು ಮಾರ್ಚ್ 31ರಂದು ಆರೋಪಿ ಕಾಯ್ದಿರಿಸಿದ್ದ. ಹೋಟೆಲ್‌ಗೆ ಕರೆ ಮಾಡಿ, ‘ವಿಮಾನ ನಿಲ್ದಾಣದಿಂದ ಹೋಟೆಲ್‌ಗೆ ಬರಲು ಬಿಎಂಡಬ್ಲ್ಯು ಕಾರು ಬೇಕು’ ಎಂದಿದ್ದ. ಅದಕ್ಕೆ ಒಪ್ಪಿದ್ದ ಸಿಬ್ಬಂದಿ, ನಿಲ್ದಾಣಕ್ಕೆ ಕಾರು ಕಳುಹಿಸಿದ್ದರು. ಅದರಲ್ಲೇ ಆರೋಪಿ, ಹೋಟೆಲ್‌ಗೆ ಬಂದಿದ್ದ’ ಎಂದು ಪೊಲೀಸರು ಹೇಳಿದರು.

‘ಕೊಠಡಿ ನೀಡುವ ಮುನ್ನ ಹಣ ಪಾವತಿ ಮಾಡುವಂತೆ ಹೋಟೆಲ್ ಸಿಬ್ಬಂದಿ ಹೇಳಿದ್ದರು. ಯುಪಿಐ ಕ್ಯೂಆರ್‌ ಕೋಡ್ ಸ್ಕ್ಯಾನ್ ಮಾಡಿದ್ದ ಆರೋಪಿ, ₹17,346 ‍ಪಾವತಿ ಮಾಡಿದ್ದಾಗಿ ನಕಲಿ ರಶೀದಿ ತೋರಿಸಿದ್ದ. ಆದರೆ, ಹಣ ಬಂದಿಲ್ಲವೆಂದು ಸಿಬ್ಬಂದಿ ಹೇಳಿದ್ದರು. ತಾಂತ್ರಿಕ ಸಮಸ್ಯೆ ಇರಬಹುದೆಂದು ಆರೋಪಿ ತಿಳಿಸಿದ್ದ. ಅದು ನಿಜವಿರಬಹುದೆಂದು ತಿಳಿದು ಸಿಬ್ಬಂದಿ ಕೊಠಡಿ ನೀಡಿದ್ದರು. ನಂತರ, ಆರೋಪಿ ಕೊಠಡಿಗೆ ಹೋಗಿದ್ದ.’

‘ಕೆಲ ಹೊತ್ತಿನ ನಂತರ ಸಿಬ್ಬಂದಿ ಬಳಿ ಹೋಗಿದ್ದ ಆರೋಪಿ, ‘ನಗರದಲ್ಲಿ ಸಂಚರಿಸಲು ಬಿಎಂಡಬ್ಲ್ಯು ಕಾರು ಬೇಕು’ ಎಂದಿದ್ದ. ಸಿಬ್ಬಂದಿ ಕಾರಿನ ವ್ಯವಸ್ಥೆ ಮಾಡಿದ್ದರು. ಅದೇ ಕಾರಿನಲ್ಲಿ ಆರೋಪಿ, ಮತ್ತೊಂದು ಹೋಟೆಲ್‌ಗೆ ಹೋಗಿದ್ದ. ನಂತರ, ವಿಮಾನ ನಿಲ್ದಾಣಕ್ಕೆ ಕರೆದೊಯ್ಯುವಂತೆ ಕಾರಿನ ಚಾಲಕನಿಗೆ ತಿಳಿಸಿದ್ದ. ಅದಕ್ಕೆ ಒಪ್ಪದ ಚಾಲಕ, ಆರೋಪಿಯನ್ನು ಹೋಟೆಲ್‌ಗೆ ಕರೆದುಕೊಂಡು ಬಂದಿದ್ದ’ ಎಂದು ಪೊಲೀಸರು ತಿಳಿಸಿದರು.

‘ಹೋಟೆಲ್‌ ಸಿಬ್ಬಂದಿ, ಕೊಠಡಿ ಹಾಗೂ ಕಾರು ಬಳಕೆಗಾಗಿ ₹ 80 ಸಾವಿರ ಪಾವತಿಸುವಂತೆ ಹೇಳಿದ್ದರು. ಆರೋಪಿ ತನ್ನ ಕ್ರೆಡಿಟ್ ಕಾರ್ಡ್ ಕೊಟ್ಟಿದ್ದ. ಆದರೆ, ಅದರಲ್ಲಿ ಹಣವಿರಲಿಲ್ಲ. ಇದೇ ಸಂದರ್ಭದಲ್ಲಿ ಆರೋಪಿಯ ಮೊಬೈಲ್‌ಗೆ ಹಲವು ಕರೆಗಳು ಬರುತ್ತಿದ್ದವು. ಇದರಿಂದ ಅನುಮಾನಗೊಂಡ ಸಿಬ್ಬಂದಿ, ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿ ವಿಚಾರಿಸಿದಾಗ, ಆರೋಪಿಯ ವಂಚನೆ ಕೃತ್ಯ ಗಮನಕ್ಕೆ ಬಂತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT