ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲ್ ಬಾಕಿ; ಪೂಜಾ ಗಾಂಧಿ ವಿರುದ್ಧ ದೂರು

ಪೊಲೀಸ್ ಠಾಣೆ ಮೆಟ್ಟಿಲೇರಿದ ಹೋಟೆಲ್ ವ್ಯವಸ್ಥಾಪಕ
Last Updated 19 ಮಾರ್ಚ್ 2019, 19:51 IST
ಅಕ್ಷರ ಗಾತ್ರ

ಬೆಂಗಳೂರು: ‘ಚಿತ್ರನಟಿ ಪೂಜಾ ಗಾಂಧಿ ಹಾಗೂ ಗದಗ ಜಿಲ್ಲೆಯ ಬಿಜೆಪಿ ಮುಖಂಡ ಅನಿಲ್ ಪಿ.ಮೆಣಸಿನಕಾಯಿ ಅವರು ರೂಮ್‌ ಬಾಡಿಗೆ ಕಟ್ಟದೆ ವಂಚಿಸಿದ್ದಾರೆ’ ಎಂದು ಆರೋಪಿಸಿ ಲಲಿತ್ ಅಶೋಕ್ ಹೋಟೆಲ್‌ನ ವ್ಯವಸ್ಥಾಪಕರು ಹೈಗ್ರೌಂಡ್ಸ್ ಠಾಣೆಗೆ ದೂರು ಕೊಟ್ಟಿದ್ದಾರೆ.

‘ಪೂಜಾ ಗಾಂಧಿ, ಅನಿಲ್ ಹಾಗೂ ಇವರ ಸಹಚರರು 2016ರ ಏಪ್ರಿಲ್‌ನಿಂದ 2017ರ ಮಾರ್ಚ್‌ವರೆಗೆ ಹೋಟೆಲ್‌ನಲ್ಲಿ ರೂಮ್‌ ಬುಕ್ ಮಾಡಿದ್ದರು. ಊಟ, ತಿಂಡಿ ಇನ್ನಿತರೆ ಆತಿಥ್ಯಗಳೆಲ್ಲ ಸೇರಿ ₹26.22 ಲಕ್ಷ ಶುಲ್ಕವಾಗಿತ್ತು.₹22.83 ಲಕ್ಷ ಪಾವತಿಸಿದ್ದ ಅವರು, ಇನ್ನೂ ₹3.53 ಲಕ್ಷ ಬಾಕಿ ಉಳಿಸಿಕೊಂಡಿದ್ದಾರೆ’ ಎಂದು ಹೋಟೆಲ್‌ನ ಭದ್ರತಾ ವ್ಯವಸ್ಥಾಪಕ ಸಿ.ಸಿ.ಮುತ್ತಣ್ಣ ಮಾರ್ಚ್ 11ರಂದು ದೂರು ಸಲ್ಲಿಸಿದ್ದಾರೆ. ‘ಬಾಕಿ ಕೇಳಲು ಕರೆ ಮಾಡಿದರೆ ಅನಿಲ್ ಸಂಪರ್ಕಕ್ಕೇ ಸಿಗುತ್ತಿಲ್ಲ. ಪೂಜಾ ಗಾಂಧಿ ಅವರನ್ನು ವಿಚಾರಿಸಿದರೆ, ‘ನನಗೂ ಅದಕ್ಕೂ ಸಂಬಂಧವಿಲ್ಲ. ಅನಿಲ್ ಬಳಿಯೇ ಮಾತನಾಡಿಕೊಳ್ಳಿ’ ಎನ್ನುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಸಾಮಾನ್ಯ ಪ್ರಕರಣ (ಎನ್‌ಸಿಆರ್) ದಾಖಲಿಸಿಕೊಂಡು ಪೂಜಾ ಗಾಂಧಿ ಹಾಗೂ ಅನಿಲ್‌ಗೆ ವಿಚಾರಣೆಗೆ ಕರೆದಿದ್ದೆವು. ಆ ನಂತರ ಅವರ ಪರವಾಗಿ ರಾಮ್‌ಪ್ರಸಾದ್ ಎಂಬುವರು ಮಾರ್ಚ್ 12ರಂದು ಹೋಟೆಲ್‌ಗೆ ತೆರಳಿ ₹2.25 ಲಕ್ಷ ಶುಲ್ಕ ಕಟ್ಟಿದ್ದರು. ಉಳಿದ ₹1.28 ಲಕ್ಷ ಕಟ್ಟಲು ಕಾಲಾವಕಾಶ ಕೇಳಿದ್ದರು. ಆ ಶುಲ್ಕವೂ ಮಂಗಳವಾರ ಪಾವತಿಯಾಗಿದೆ. ಹೀಗಾಗಿ, ತನಿಖೆ ಅಂತ್ಯಗೊಳಿಸಲಾಗುವುದು’ ಎಂದು ಹೈಗ್ರೌಂಡ್ಸ್ ಪೊಲೀಸರು ತಿಳಿಸಿದರು.

‘2016ರಲ್ಲಿ ‘ಫಿಲ್ಮ್ ಫ್ಯಾಕ್ಟರಿ’ ಸಿನಿಮಾ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದೆ. ಆಗ ಚೆನ್ನೈ, ಮುಂಬೈ ಹಾಗೂ ಹೈದರಾಬಾದ್‌ನಿಂದ ಕರೆಸಿಕೊಂಡಿದ್ದ ಕಲಾವಿದರಿಗಾಗಿ ಹೋಟೆಲ್‌ನಲ್ಲಿ ರೂಮ್‌ ಬುಕ್ ಮಾಡಿದ್ದೆ’ ಎಂದು ಪೂಜಾ ಹೇಳಿದರು. ‘ಹೋಟೆಲ್‌ನವರು ಯಾಕೆ ಅಂಥ ಆರೋಪ ಮಾಡಿದ್ದಾರೋ ಗೊತ್ತಿಲ್ಲ. ನಾನು ಬಾಕಿ ಉಳಿಸಿಕೊಂಡಿಲ್ಲ. ಅನಿಲ್ ನನ್ನ ಅಣ್ಣನ ಸಮಾನ. ಇಲ್ಲಿ ಅವರ ಹೆಸರು ಏಕೆ ಬಂತೋ ತಿಳಿಯುತ್ತಿಲ್ಲ’ ಎಂದರು.

‘ಪೂಜಾ ಗಾಂಧಿ ರಾಜಕೀಯದಿಂದ ಹಿಂದೆ ಸರಿದ ನಂತರ ನಾನು ಅವರ ಸಂಪರ್ಕದಲ್ಲಿಲ್ಲ. ಯಾವುದೋ ದುರುದ್ದೇಶದಿಂದ ಈ ಪ್ರಕರಣದಲ್ಲಿ ನನ್ನ ಹೆಸರನ್ನು ತಳುಕು ಹಾಕಲಾಗಿದೆ’ ಎಂದು ಅನಿಲ್ ದೂರಿದರು.

‘ಡೀಲ್ ಎಂದು ಅಪಪ್ರಚಾರ’

‘ಕೆಲವು ಕಡತಗಳಿಗೆ ಬಿಡಿಎ ಅಧಿಕಾರಿಗಳ ಸಹಿ ಬೇಕಿತ್ತು. ಈ ಸಂಬಂಧ ಡೀಲ್ ನಡೆಸಲು ಹೋಟೆಲ್ ರೂಮ್‌ ಬುಕ್ ಮಾಡಲಾಗಿತ್ತು ಎಂದು ಕೆಲವರು ಅಪಪ್ರಚಾರ ಮಾಡಿದ್ದಾರೆ. ನನ್ನ ಹೆಸರಿನಲ್ಲಿ ಅಂತಹ ಯಾವ ಕಡತವೂ ಅಲ್ಲಿಲ್ಲ. ಈ ಸಂಬಂಧ ನಾನೂ ‍ಪೊಲೀಸರಿಗೆ ದೂರು ನೀಡುತ್ತೇನೆ’ ಎಂದು ಅನಿಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT