ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ವಹಿವಾಟು ತೋರಿಸಿ ಟೆಂಡರ್‌: ದೂರು

Last Updated 10 ಜನವರಿ 2020, 19:44 IST
ಅಕ್ಷರ ಗಾತ್ರ

ಬೆಂಗಳೂರು: ವಾಸ್ತವ ವಹಿವಾಟು ಮರೆಮಾಚಿ ಹೊರ ಗುತ್ತಿಗೆ ಟೆಂಡರ್‌ ಪಡೆಯುವ ಮೂಲಕ ಸರ್ಕಾರವನ್ನು ವಂಚಿಸಲಾಗಿದೆ ಎಂದು ಆರೋಪಿಸಿ ಕಂಪನಿಯೊಂದರ ವಿರುದ್ಧ ಇಲ್ಲಿನ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನರ್ಸ್‌ಗಳು, ದಾದಿಯರು, ಸೆಕ್ಯುರಿಟಿ ಗಾರ್ಡ್‌ಗಳು, ಡೇಟಾ ಎಂಟ್ರಿ ಆಪರೇಟರ್‌ ಸೇರಿದಂತೆ ಹಲವು ಸಿಬ್ಬಂದಿಯನ್ನು ಹೊರ ಗುತ್ತಿಗೆ ಆಧಾರದಲ್ಲಿ ಪಡೆಯಲು ಟೆಂಡರ್‌ ಕರೆಯಲಾಗಿತ್ತು. ಈ ಟೆಂಡರ್‌ ಅನ್ನು ಅತ್ಯಂತ ಕಡಿಮೆ ಬಿಡ್‌ ಮಾಡಿದ್ದ ಚಂದ್ರಾ ಲೇಔಟ್‌ನ ಕಂಪನಿಯೊಂದಕ್ಕೆ ಮಂಜೂರು ಮಾಡಲಾಗಿದೆ.

ಡಿಸೆಂಬರ್‌ 28, 2018ರಂದು ಟೆಂಡರ್‌ ಕರೆದಿದ್ದು, ಮೇ 25ರಂದು ಟೆಂಡರ್‌ ಮಂಜೂರು ಮಾಡಲಾಗಿದೆ. ಅನೇಕ ಕಂಪನಿಗಳು ಇ– ಟೆಂಡರ್‌ ಮೂಲಕ ಅರ್ಜಿ ಸಲ್ಲಿಸಿದ್ದವು. ಅಂತಿಮವಾಗಿ ಇದು ಚಂದ್ರಾ ಲೇಔಟ್‌ನ ಕಂಪನಿಗೆ ಮಂಜೂರಾಯಿತು.

ಈ ಕಂಪನಿ ಷೇರುದಾರರು ಟೆಂಡರ್‌ ದಾಖಲೆಗಳನ್ನು ಸಲ್ಲಿಸುವ ಸಂದರ್ಭದಲ್ಲಿ 2016–17ನೇ ಸಾಲಿನಲ್ಲಿ ತಮ್ಮ ವಹಿವಾಟು ₹ 10.50 ಕೋಟಿ ಹಾಗೂ 2017–19ರಲ್ಲಿ ₹ 2.76 ಕೋಟಿ ಎಂದು ಹೇಳಿದ್ದಾರೆ. ಆದರೆ, ಇದೇ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ತೋಟಗಾರಿಕೆ ಇಲಾಖೆಯಲ್ಲಿ ಗುತ್ತಿಗೆಗೆ ಅರ್ಜಿ ಸಲ್ಲಿಸುವಾದ ಸಲ್ಲಿಸಿದ ದಾಖಲೆಗಳಲ್ಲಿ 2016–17 ವಹಿವಾಟು ₹ 19.75ಲಕ್ಷ ಮತ್ತು ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮಕ್ಕೆ ಅರ್ಜಿ ಸಲ್ಲಿಸುವಾಗ ₹ 16.44 ಲಕ್ಷ ಎಂದಿದ್ದಾರೆ. 2016–17 ಮತ್ತು 2017–18 ರ ಆದಾಯವನ್ನು ಕ್ರಮವಾಗಿ ₹ 1.58 ಲಕ್ಷ ಹಾಗೂ ₹ 1.59 ಲಕ್ಷ ಎಂದು ಘೋಷಿಸಿಕೊಂಡಿದ್ದಾರೆ.

ರಾಜ್ಯ ಸರ್ಕಾರವನ್ನು ವಂಚಿಸಿ, ಅಕ್ರಮವಾಗಿ ಟೆಂಡರ್ ಗುತ್ತಿಗೆ ಪಡೆಯಲಾಗಿದೆ. ದಾಖಲೆಗಳನ್ನು ತಿರುಚಲಾಗಿದ್ದು, ಕಂಪನಿಯ ಷೇರುದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋಲಾರದ ಕೆ.ಸಿ. ರಾಜಣ್ಣ ಎಂಬುವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕ ಡಾ. ಓಂಪ್ರಕಾಶ್‌ ಪಾಟೀಲ, ಟೆಂಡರ್‌ ಪ್ರಕ್ರಿಯೆಗಳನ್ನು ಜಿಲ್ಲಾ ಆರೋಗ್ಯ ಅಧಿಕಾರಿಗಳು ನಡೆಸಲಿದ್ದು, ಈ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು. ಕಂಪನಿ ಷೇರುದಾರರು ಪ್ರತಿಕ್ರಿಯೆಗೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT