ಬುಧವಾರ, ಏಪ್ರಿಲ್ 21, 2021
31 °C
ಸಿಐಡಿ ಸೈಬರ್‌ ಪೊಲೀಸರ ಕಾರ್ಯಾಚರಣೆ

ವೈವಾಹಿಕ ಜಾಲತಾಣಗಳ ಮೂಲಕ ವಂಚನೆ; ದಂಪತಿ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಧಿತ ದಂಪತಿ

ಬೆಂಗಳೂರು: ವೈವಾಹಿಕ ಜಾಲತಾಣಗಳ ಮೂಲಕ ಸಾಫ್ಟ್‌ವೇರ್‌ ಎಂಜಿನಿಯರ್‌ಗಳನ್ನು ಪರಿಚಯ ಮಾಡಿಕೊಂಡು, ಅವರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸುತ್ತಿದ್ದ ಆರೋಪದಡಿ ಕೋಲ್ಕತ್ತದ ದಂಪತಿಯನ್ನು ಸಿಐಡಿ ಸೈಬರ್ ವಿಭಾಗದ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.

ರೂಪಾಲಿ ಮಜುಂದಾರ್ (36) ಹಾಗೂ ಆಕೆಯ ಪತಿ ಕುಶನ್ ಬಂಧಿತರು. ಅವರಿಬ್ಬರಿಂದ ₹44 ಸಾವಿರ ನಗದು, ಎರಡು ಮೊಬೈಲ್ ಜಪ್ತಿ ಮಾಡಲಾಗಿದೆ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದರು.

ಆರೋಪಿ ರೂಪಾಲಿ, ಬಿ.ಕಾಂ ಪದವೀಧರೆ. ಕುಶನ್‌, ಎಂಜಿನಿಯರಿಂಗ್‌ ಪದವೀಧರ. ಹಲವು ಬ್ಯಾಂಕ್‌ಗಳ ಮಾರುಕಟ್ಟೆ ವಿಭಾಗದಲ್ಲಿ ಆತ ಕೆಲಸ ಮಾಡಿದ್ದ. ಐದು ವರ್ಷಗಳ ಹಿಂದೆ ಕೆಲಸ ಬಿಟ್ಟು ಬಂಗಾಳಿ ಧಾರಾವಾಹಿಗಳಲ್ಲಿ ನಟಿಸಲಾರಂಭಿಸಿದ್ದ. ‘ಸತ್ಪಾಕ್ ಬಾದ್’, ‘ಕುರುಕ್ಷೇತ್ರ’, ‘ಪಾಲಾ ಬಾದಲಿನ್’, ‘ಮೊಚಕ್‌’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಆತ ನಟಿಸಿದ್ದ. ಮಾಧ್ಯಮದಲ್ಲಿಯೂ ಅರೆಕಾಲಿಕ ಕೆಲಸ ಮಾಡುತ್ತಿದ್ದ ಎಂದರು.  

‘ಮಿಂಗಲ್‌2 ಡಾಟ್ ಕಾಮ್‌’ ಸೇರಿದಂತೆ ಹಲವು ವೈವಾಹಿಕ ಜಾಲತಾಣಗಳಲ್ಲಿ ರೂಪಾಲಿ ನಕಲಿ ಖಾತೆ ತೆರೆದಿದ್ದಳು. ಮಾಡೆಲ್‌ಗಳ ಫೋಟೊಗಳನ್ನು ತನ್ನದೆಂದು ಅಪ್‌ಲೋಡ್‌ ಮಾಡಿದ್ದಳು. ಆ ಖಾತೆ ಮೂಲಕ ಸಾಫ್ಟ್‌ವೇರ್‌ ಎಂಜಿನಿಯರ್‌ಗಳನ್ನು ಪರಿಚಯ ಮಾಡಿಕೊಂಡು ವಂಚಿಸುತ್ತಿದ್ದಳು. ಆಕೆಯ ಕೃತ್ಯಕ್ಕೆ ಪತಿಯು ಸಹಕಾರ ನೀಡುತ್ತಿದ್ದ ಎಂದು ವಿವರಿಸಿದರು.

ಶಿಕ್ಷಕಿ ಎಂದು ಹೇಳಿ ₹62 ಲಕ್ಷ ವಂಚನೆ: ಬೆಂಗಳೂರಿನ ಸಾಫ್ಟ್‌ವೇರ್‌ ಎಂಜಿನಿಯರೊಬ್ಬರನ್ನು ಪರಿಚಯ ಮಾಡಿಕೊಂಡಿದ್ದ ರೂಪಾಲಿ, ತನ್ನ ಹೆಸರು ಅರ್ಪಿತಾ ಎಂದಿದ್ದಳು. ‘ನಾನು ಶಿಕ್ಷಕಿ. ಉತ್ತಮ ಸಂಬಳವಿದೆ. ನಮ್ಮದು ಶ್ರೀಮಂತ ಕುಟುಂಬ’ ಎಂದು ಹೇಳಿಕೊಂಡಿದ್ದಳು. ಆಕೆಯ ಮಾತು ನಂಬಿದ್ದ ಎಂಜಿನಿಯರ್‌, ತಮ್ಮ ಮೊಬೈಲ್ ನಂಬರ್ ಕೊಟ್ಟಿದ್ದರು. ನಂತರ, ಅವರಿಬ್ಬರು ಚಾಟಿಂಗ್‌ ಮಾಡಲಾರಂಭಿಸಿದ್ದರು ಎಂದು ಅಧಿಕಾರಿ ಹೇಳಿದರು.

ಕೆಲ ದಿನಗಳ ನಂತರ ರೂಪಾಲಿ, ‘ನನ್ನ ತಂದೆಗೆ ಹುಷಾರಿಲ್ಲ. ಟಾಟಾ ಬಿರ್ಲಾ ಹಾರ್ಟ್ ಸೆಂಟರ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.  ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಬೇಕು. ಸಹಾಯ ಮಾಡಿ’ ಎಂದು ಕೇಳಿದ್ದಳು. ಅದನ್ನು ನಂಬಿದ್ದ ಎಂಜಿನಿಯರ್, ಆರೋಪಿಯ ಖಾತೆಗೆ ₹62 ಲಕ್ಷ ಜಮೆ ಮಾಡಿದ್ದರು. ಕೆಲವೇ ಗಂಟೆಗಳಲ್ಲಿ ಆರೋಪಿಯು ಮೊಬೈಲ್ ಸ್ವಿಚ್ಡ್‌ ಆಫ್‌ ಮಾಡಿದ್ದರು ಎಂದು ಅಧಿಕಾರಿ ವಿವರಿಸಿದರು.

ದೂರು ದಾಖಲಾಗುತ್ತಿದ್ದಂತೆ ಆರೋಪಿಯ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಕೋಲ್ಕತ್ತಗೆ ಹೋಗಿದ್ದ ತಂಡದ ಸಿಬ್ಬಂದಿ, ಆರೋಪಿಗಳನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ ಎಂದ ಅಧಿಕಾರಿ, ‘ದೂರುದಾರರಿಂದ ಪಡೆದುಕೊಂಡಿದ್ದ ಹಣದಲ್ಲಿ ₹47 ಲಕ್ಷ ಹಣವನ್ನು ರೂಪಾಲಿ, ತನ್ನ ಪತಿ ಖಾತೆಗೆ ವರ್ಗಾವಣೆ ಮಾಡಿದ್ದು ದಾಖಲೆಯಿಂದ ಗೊತ್ತಾಗಿದೆ’ ಎಂದು ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು