ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಗಲೆಟ್ಟಿಯಲ್ಲಿ ಮಕ್ಕಳ ಹಕ್ಕುಗಳ ವೃತ್ತ

Last Updated 27 ಜನವರಿ 2021, 18:41 IST
ಅಕ್ಷರ ಗಾತ್ರ

ಬೆಂಗಳೂರು: ಮಕ್ಕಳ ಗ್ರಂಥಾಲಯದ ಸೇವೆಯನ್ನು ಗೌರವಿಸುವ ಸಲುವಾಗಿ ಬೆಂಗಳೂರು ಉತ್ತರ ತಾಲ್ಲೂಕಿನ ಮಾರೇನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಚಾಗಲೆಟ್ಟಿ ಗ್ರಾಮದಲ್ಲಿರುವ ವೃತ್ತಕ್ಕೆ ‘ಮಕ್ಕಳ ಹಕ್ಕುಗಳ ವೃತ್ತ’ (ಮಕ್ಕಳ ವೃತ್ತ) ಎಂದು ಹೆಸರಿಡಲಾಗಿದೆ.

ಚೈಲ್ಡ್ ರೈಟ್ಸ್ ಟ್ರಸ್ಟ್‌ನ ಸಹಕಾರದಿಂದ ಇದೇ ಗ್ರಾಮದಲ್ಲಿ 2006ರಲ್ಲಿ ಚಾಗಲೆಟ್ಟಿ ಮಕ್ಕಳ ಹಕ್ಕುಗಳ ಸಂಘ ಸ್ಥಾಪಿಸಲಾಗಿತ್ತು. ಆರು ಮಕ್ಕಳಿಂದ ಪ್ರಾರಂಭಗೊಂಡ ಸಂಘ ಈಗ 200ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ.

2010ರಲ್ಲಿ ಆರಂಭಗೊಂಡಿರುವ ಮಕ್ಕಳ ಗ್ರಂಥಾಲಯವನ್ನು ಮಕ್ಕಳೇ ಮುನ್ನಡೆಸುತ್ತಿದ್ದಾರೆ. ಗ್ರಂಥಾಲಯದಲ್ಲಿ ಐದು ಸಾವಿರಕ್ಕೂ ಹೆಚ್ಚು ಪುಸ್ತಕಗಳಿದ್ದು, 15ಕ್ಕೂ ಹೆಚ್ಚು ಗ್ರಾಮಗಳ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

ಚೈಲ್ಡ್ ರೈಟ್ಸ್ ಟ್ರಸ್ಟ್‌ನನಿರ್ದೇಶಕನಾಗಸಿಂಹ ಜಿ.ರಾವ್, ‘ಲಾಕ್‌ಡೌನ್‌ ಅವಧಿಯಿಂದ ಚಾಗಲೆಟ್ಟಿ ಗ್ರಾಮದ ಹೊರವಲಯದಲ್ಲಿ ಬೀಡುಬಿಟ್ಟಿರುವ ವಲಸೆ ಕುಟುಂಬಗಳ ಮಕ್ಕಳಿಗೆಶಿಕ್ಷಣದ ಹೊಣೆಯನ್ನು ಗ್ರಂಥಾಲಯದ ಮಕ್ಕಳು ಹೊತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಗಣಿತ ಹಾಗೂ ಕಥೆ ಹೇಳುವ ಮೂಲಕ ಕಲಿಕೆಗೆ ನೆರವಾಗಿದ್ದಾರೆ. ಇದನ್ನು ಮೆಚ್ಚಿದ ಗ್ರಾಮಸ್ಥರು ಗ್ರಂಥಾಲಯ ಇರುವ ವೃತ್ತಕ್ಕೆ ‘ಮಕ್ಕಳ ಹಕ್ಕುಗಳ ವೃತ್ತ’ವೆಂದು ಹೆಸರಿಡುವ ಮೂಲಕ ಅವರ ಪರಿಶ್ರಮವನ್ನು ಗೌರವಿಸಿದ್ದಾರೆ’ ಎಂದರು.

‘ಪಂಚಾಯಿತಿ ಸದಸ್ಯರು ಮಕ್ಕಳ ಬೆಂಬಲಕ್ಕೆ ನಿಂತಿದ್ದಾರೆ. ವೃತ್ತದಲ್ಲಿ ಮಕ್ಕಳ ಹಕ್ಕುಗಳು, ಮಕ್ಕಳ ಪರವಾದ ಕಾನೂನುಗಳ ಕುರಿತಾದ ಫಲಕಗಳನ್ನು ಅಳವಡಿಸುವ ಭರವಸೆ ನೀಡಿದ್ದಾರೆ.ಗ್ರಾಮಗಳನ್ನು ಬಾಲ್ಯವಿವಾಹ ಮುಕ್ತ, ಬಾಲಕಾರ್ಮಿಕ ಮುಕ್ತ, ಶಾಲೆಯಿಂದ ಹೊರಗುಳಿಯದ ಮಕ್ಕಳ ಗ್ರಾಮಗಳನ್ನಾಗಿ ಪರಿವರ್ತಿಸಲು ಮುಂದಾಗಿರುವುದು ಸಂತಸದ ಬೆಳವಣಿಗೆ’ ಎಂದು ಹೇಳಿದರು.

‘ಮಕ್ಕಳ ಹಕ್ಕುಗಳ ಒಪ್ಪಂದಕ್ಕೆ ಸಹಿ ಮಾಡಿರುವ ದೇಶವು ಮಕ್ಕಳ ಹಕ್ಕುಗಳಿಗೆ ವ್ಯಾಪಕ ಪ್ರಚಾರ ನೀಡಬೇಕು. ಒಪ್ಪಂದಕ್ಕೆ ಸಹಿ ಮಾಡಿ 28 ವರ್ಷಗಳು ಕಳೆದರೂ ಮಕ್ಕಳ ಹಕ್ಕುಗಳಿಗೆ ಸೂಕ್ತ ಪ್ರಚಾರ ಸಿಗುತ್ತಿಲ್ಲ. ಆದರೆ,ರಾಜ್ಯದ ಚಾಗಲೆಟ್ಟಿ ಗ್ರಾಮವು ಇಡೀ ವಿಶ್ವದಲ್ಲೇ ಮಕ್ಕಳ ಹಕ್ಕುಗಳ ಹೆಸರಿನಲ್ಲಿರುವ ಮೊದಲ ವೃತ್ತ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT