ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬಾಂಬ್ ಸ್ಫೋಟ ಪ್ರಕರಣ: ಇಬ್ಬರಿಗೆ ಜೀವಾವಧಿ ಶಿಕ್ಷೆ

ತೀರ್ಪು ಪರಿಶೀಲಿಸುವಂತೆ ನಿರ್ದೇಶಿಸಿದ್ದ ಹೈಕೋರ್ಟ್
Last Updated 25 ನವೆಂಬರ್ 2021, 13:51 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ 2010ರಲ್ಲಿ ನಡೆದಿದ್ದ ಬಾಂಬ್‌ ಸ್ಫೋಟ ಪ್ರಕರಣದ ಇಬ್ಬರು ಅಪರಾಧಿಗಳಿಗೆ ವಿಧಿಸಿದ್ದ 7 ವರ್ಷಗಳ ಶಿಕ್ಷೆಯನ್ನು ಪರಿಶೀಲಿಸಿರುವ ಇಲ್ಲಿನ ವಿಶೇಷ ನ್ಯಾಯಾಲಯ, ಇದೀಗ ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಇಂಡಿಯನ್‌ ಮುಜಾಹಿದ್ದೀನ್‌ ಸಂಘಟನೆ ಸದಸ್ಯರಾಗಿದ್ದ ಅಫ್ತಾಬ್‌ ಆಲಂ ಅಲಿಯಾಸ್‌ ಫಾರೂಕ್‌ ಹಾಗೂ ಅಹಮ್ಮದ್‌ ಜಮಾಲ್‌ ಎಂಬುವರನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಕೃತ್ಯ ಎಸಗಿದ್ದ ಬಗ್ಗೆ ಅಪರಾಧಿಗಳು ನ್ಯಾಯಾಲಯ ಎದುರು ತಪ್ಪೊಪ್ಪಿಕೊಂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಇಬ್ಬರಿಗೂ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆದೇಶವನ್ನು ಪ್ರಶ್ನಿಸಿದ್ದ ಸಿಸಿಬಿ ಪರ ವಕೀಲರು, ಕೃತ್ಯದ ಬಗ್ಗೆ ದಾಖಲಾಗಿರುವ ಪ್ರಕರಣಗಳನ್ನು ಆಧರಿಸಿ ಹೆಚ್ಚಿನ ಶಿಕ್ಷೆ ವಿಧಿಸಲು ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ್ದ ಹೈಕೋರ್ಟ್, ಪ್ರಕರಣದ ಶಿಕ್ಷೆ ಪ್ರಮಾಣವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ನಿರ್ದೇಶನ ನೀಡಿತ್ತು. ಅದರನ್ವಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ, ಇಬ್ಬರೂ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಗುರುವಾರ ಆದೇಶ ಹೊರಡಿಸಿದೆ.

ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ.ಎ. ರವೀಂದ್ರ ವಾದಿಸಿದ್ದರು.

ಪ್ರತ್ಯೇಕ ತಂಡಗಳಲ್ಲಿ ಬಂದು ಸ್ಫೋಟ: ‘ದೆಹಲಿಯ ಜಾಮಿಯಾನಗರದ ಮನೆಯೊಂದರಲ್ಲಿ ವಾಸವಿದ್ದ ಆರೋಪಿಗಳು, ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿ ಸಿದ್ಧತೆ ಮಾಡಿಕೊಂಡಿದ್ದರು. ಪ್ರತ್ಯೇಕ ತಂಡಗಳಾಗಿ ಬೆಂಗಳೂರಿಗೆ ಬಂದಿದ್ದ ಅಪರಾಧಿಗಳು, ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ನಾಲ್ಕು ಕಡೆ ಬಾಂಬ್‌ ಇಟ್ಟಿದ್ದರು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

‘ನಾಲ್ಕರ ಪೈಕಿ ಒಂದು ಬಾಂಬ್ ಸ್ಫೋಟಗೊಂಡಿತ್ತು. ಉಳಿದ ಮೂರು ಬಾಂಬ್‌ಗಳನ್ನು ಪೊಲೀಸರು ಪತ್ತೆ ಮಾಡಿ ನಿಷ್ಕ್ರಿಯಗೊಳಿಸಿದ್ದರು. ಇದೇ ಪ್ರಕರಣದಲ್ಲಿ ಯಾಸಿನ್ ಭಟ್ಕಳ್ ಸಹಚರ ಸೇರಿದಂತೆ ನಾಲ್ವರಿಗೆ 2018ರಲ್ಲಿ 7 ವರ್ಷಗಳ ಜೈಲು ಶಿಕ್ಷೆ ಸಹ ಆಗಿತ್ತು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT