ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾ ಜಾತ್ರೆಗೆ ಬಿರುಸಿನ ತಯಾರಿ

ಹಳ್ಳಿಯ ಸೊಗಡು, ಕೃಷಿ ಬದುಕಿನ ಸೊಬಗು
Last Updated 2 ಜನವರಿ 2020, 23:00 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್‌ನ 17ನೇ ವರ್ಷದ ಚಿತ್ರಸಂತೆ ಇದೇ 5ರಂದು ಕುಮಾರಕೃಪಾ ರಸ್ತೆ ಮತ್ತು ಪರಿಷತ್‌ನ ಆವರಣದಲ್ಲಿ ನಡೆಯಲಿದ್ದು, 4 ಲಕ್ಷ ಮಂದಿ ಭೇಟಿ ನೀಡುವ ನಿರೀಕ್ಷೆ ಇದೆ.

‘ಸುಮಾರು 1,500ರಷ್ಟು ಕಲಾವಿದರು, 20 ಸಾವಿರದಷ್ಟು ಕಲಾಕೃತಿಗಳನ್ನು ಒಂದೇ ಕಡೆ ನೋಡುವ ಅವಕಾಶ ಇಲ್ಲಿ ಸಿಗಲಿದ್ದು, ಈ ಬಾರಿಯ ಚಿತ್ರಸಂತೆಯನ್ನು ನೇಗಿಲಯೋಗಿ ರೈತರಿಗೆ ಸಮರ್ಪಿಸಲಾಗಿದೆ. ಗ್ರಾಮೀಣ ಜನರ ಜೀವನ ಶೈಲಿಯನ್ನು ಬಿಂಬಿಸುವ ‘ಗ್ರಾಮ ಸ್ವರಾಜ್ಯ’ ವಸ್ತುಪ್ರದರ್ಶನವೂ ಇರಲಿದೆ’ ಎಂದು ಪರಿಷತ್‌ನ ಅಧ್ಯಕ್ಷ ಬಿ.ಎಲ್‌.ಶಂಕರ್‌ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಿರಿಯ ಕಲಾವಿದ ರುಮಾಲೆ ಚೆನ್ನಬಸವಯ್ಯನವರ ಹೆಸರಿನಲ್ಲಿ ಬೆಂಗಳೂರಿನ ಪ್ರಕೃತಿ ದೃಶ್ಯ ಚಿತ್ರಣ (ಲ್ಯಾಂಡ್‌ಸ್ಕೇಪ್‌) ಚಿತ್ರಗಳನ್ನು ಗ್ಯಾಲರಿಯಲ್ಲಿ ಪ್ರದರ್ಶಿಸಲಾಗುವುದು, ರಾಜ್ಯದ ಐತಿಹಾಸಿಕ ಸ್ಥಳಗಳಲ್ಲಿ ಖ್ಯಾತ ಕಲಾವಿದರಿಂದ ಲ್ಯಾಂಡ್‌ಸ್ಕೇಪ್‌ ಕಲಾಕೃತಿಗಳನ್ನು ತಯಾರಿಸಿ ಪ್ರದರ್ಶನಕ್ಕೆ ಇಡಲಾಗುವುದು, ಸಿರಿಧಾನ್ಯಗಳ ಸಹಿತ ಆಹಾರ ಮಳಿಗೆಗಳೂ ಇರಲಿವೆ ಎಂದರು.

‘ಚಿತ್ರಸಂತೆಯಲ್ಲಿ ಪರಿಷತ್‌ ಕೇವಲ ಮಧ್ಯವರ್ತಿಯಂತೆ ಮಾತ್ರ ಕೆಲಸ ಮಾಡುತ್ತದೆ. ಮಾರಾಟವಾಗುವ ಕಲಾಕೃತಿಗಳಿಗೆ ಯಾವುದೇ ಕಮಿಷನ್‌ ಪಡೆಯುವುದಿಲ್ಲ’ ಎಂದರು.

‘ಈ ಬಾರಿಯೂ ಶಿವಾನಂದ ಸರ್ಕಲ್‌ನಿಂದ ವಿಂಡ್ಸರ್‌ ಮ್ಯಾನರ್‌ ಹಾಗೂ ಕ್ರೆಸೆಂಟ್ ರಸ್ತೆ, ಗಾಂಧಿ ಭವನ ರಸ್ತೆಯ ಕೆಲವು ಭಾಗಗಳಲ್ಲಿ ಕಲಾಕೃತಿಗಳ ಪ್ರದರ್ಶನವಿರುತ್ತದೆ. ಭಾರತ ಸೇವಾದಳದ ಆವರಣ, ಕ್ರೆಸೆಂಟ್‌ ಮತ್ತು ರೇಸ್‌ಕೋರ್ಸ್‌ ರಸ್ತೆಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಭಾರತ ಕಲಾ ಉತ್ಸವ: ‘ಇದೇ ಪ್ರಥಮ ಬಾರಿಗೆ ಏಪ್ರಿಲ್‌ 24ರಿಂದ 26ರವರೆಗೆ ಭಾರತ ಕಲಾ ಉತ್ಸವ (ಇಂಡಿಯಾ ಆರ್ಟ್‌ ಫೇರ್‌) ಪರಿಷತ್‌ನ ಆವರಣದಲ್ಲಿನಡೆಯಲಿದೆ. ಖ್ಯಾತ ಕಲಾವಿದ ರಾಜೇಂದ್ರ ಪ್ರಸಾದ್ ಅವರು ಮುಂದಿನ ಮೂರು ವರ್ಷವೂ ಇಲ್ಲಿ ಈ ಉತ್ಸವ ಹಮ್ಮಿಕೊಳ್ಳಲು ಒಪ್ಪಂದ ಆಗಿದೆ. ದೇಶದ ಪ್ರಸಿದ್ಧ ಕಲಾವಿದರ ಕಲಾಕೃತಿಗಳ ಪ್ರದರ್ಶನ, ಮಾರಾಟ, ಕಾರ್ಯಾಗಾರಗಳು ನಡಯಲಿವೆ’ ಎಂದು ಶಂಕರ್‌ ಹೇಳಿದರು.

ಭಾರತದಲ್ಲಿ ಜಲವರ್ಣ: ‘ಅಕ್ಟೋಬರ್‌ ತಿಂಗಳ ಕೊನೆಯಲ್ಲಿ ಸುಮಾರು 75 ದೇಶಗಳ ಕಲಾವಿದರು ಪಾಲ್ಗೊಳ್ಳುವ ‘ವರ್ಲ್ಡ್‌ ವಾಟರ್‌ ಕಲರ್‌ ಇನ್‌ ಇಂಡಿಯಾ’ ಎಂಬ ಹೆಸರಿನ ಜಲವರ್ಣದಲ್ಲಿ ಚಿತ್ರ ಬಿಡಿಸುವ ವಿಶಿಷ್ಟ ಕಲಾ ಶಿಬಿರ ನಡೆಯಲಿದೆ. ಸುಮಾರು 500ರಷ್ಟು ಕಲಾಕೃತಿಗಳು ಸಿದ್ಧವಾಗಲಿವೆ’ ಎಂದರು.

ದೇಶ, ವಿದೇಶದ ಗಮನ
ಚಿತ್ರಸಂತೆಗೆ ವಿದೇಶಿಯರು ಬರುತ್ತಿರುವುದು ಹಳೆಯ ಸಂಗತಿ, ಇನ್ನು ಮುಂದೆ ದೊಡ್ಡ ದೊಡ್ಡ ಅಂತರರಾಷ್ಟ್ರೀಯ ಕಲಾ ಮೇಳಗಳು, ಕಲಾ ಶಿಬಿರಗಳಿಗೆ ಚಿತ್ರಕಲಾ ಪರಿಷತ್‌ ವೇದಿಕೆಯಾಗಲಿದೆ. ರಾಜರಾಜೇಶ್ವರಿನಗರದಲ್ಲಿರುವ ಚಿತ್ರಕಲಾ ಕಾಲೇಜಿನಲ್ಲೂ ವಿಶೇಷ ಕಲಾಕೃತಿಗಳ ಪ್ರದರ್ಶನ ನಡೆಯಲಿದೆ.

ನಾಲ್ವರಿಗೆ ಚಿತ್ರಕಲಾ ಸನ್ಮಾನ
ವಾರ್ಷಿಕ ‘ಚಿತ್ರಕಲಾ ಸಮ್ಮಾನ್‌’ಗೆ ನಾಲ್ವರು ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಎಚ್‌.ಕೆ.ಕೇಜ್ರಿವಾಲ್‌ ಪ್ರಶಸ್ತಿಗೆ ಎಚ್‌.ಎನ್‌.ಸುರೇಶ್‌, ಎಂ.ರಾಮಮೂರ್ತಿ ಪ್ರಶಸ್ರಿಗೆ ಎಸ್‌.ಕೃಷ್ಣಪ್ಪ, ಡಿ.ದೇವರಾಜ ಅರಸು ಪ್ರಶಸ್ತಿಗೆ ಗಣೇಶ್‌ ಸೋಮಯಾಜಿ ಹಾಗೂ ವೈ.ಸುಬ್ರಹ್ಮಣ್ಯರಾಜು ಪ್ರಶಸ್ತಿಗೆ ವಿಜಯ ಹಾಗರಗುಂಡಗಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ತಲಾ ₹ 50 ಸಾವಿರ ನಗದು ಒಳಗೊಂಡಿದೆ.

ಚಿತ್ರಕಲಾ ಪರಿಷತ್‌ನ ಸ್ಥಾಪಕ ಪ್ರಧಾನ ಕಾರ್ಯದರ್ಶಿ ಪ್ರೊ.ಎಂ.ಎಸ್‌.ನಂಜುಂಡರಾವ್‌ ಹೆಸರಲ್ಲಿ ಹಿರಿಯ ಕಲಾವಿದ ಆರ್‌.ಬಿ.ಭಾಸ್ಕರನ್‌ ಅವರಿಗೆ ಪ್ರಶಸ್ತಿ ನೀಡಲಾಗುವುದು. ಅದು ₹ 1 ಲಕ್ಷ ನಗದು ಒಳಗೊಂಡಿದೆ. ಜ.4ರಂದು ಸಂಜೆ 5 ಗಂಟೆಗೆ ಪರಿಷತ್‌ನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಅಂಕಿ –ಅಂಶಗಳು
₹ 3 ಕೋಟಿ –ಕಳೆದ ವರ್ಷ ಚಿತ್ರಸಂತೆಯಲ್ಲಿ ನಡೆದಿದ್ದ ವಹಿವಾಟು
20 ಸಾವಿರ – ಕಲಾಕೃತಿಗಳ ಪ್ರದರ್ಶನ
400 – ಹೊರರಾಜ್ಯಗಳ ಕಲಾವಿದರಿಗೆ ಊಟ, ವಸತಿ ವ್ಯವಸ್ಥ
4 –ಚಿತ್ರ ಖರೀದಿಗಾಗಿ ಎಟಿಎಂ ಕೇಂದ್ರಗಳು

*
ಬೆಂಗಳೂರಿನ ಚಿತ್ರಸಂತೆಯಷ್ಟು ವ್ಯವಸ್ಥಿತ ಕಲಾ ಪ್ರದರ್ಶನ ದೇಶದ ಬೇರೆಲ್ಲೂ ನಡೆಯುವುದಿಲ್ಲ. ನಗರದ ಖ್ಯಾತಿಗೆ ಇದೂ ಒಂದು ಹೆಗ್ಗುರುತು.
-ಬಿ.ಎಲ್‌.ಶಂಕರ್‌, ಅಧ್ಯಕ್ಷ, ಚಿತ್ರಕಲಾ ಪರಿಷತ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT