ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಕಾಮಗಾರಿ: ಸಿಐಡಿ ತನಿಖೆಗೆ ಒತ್ತಾಯ

ಚರ್ಚ್‌ ಸ್ಟ್ರೀಟ್‌ ಕಳಪೆ ಕಾಮಗಾರಿ
Last Updated 21 ಅಕ್ಟೋಬರ್ 2022, 20:52 IST
ಅಕ್ಷರ ಗಾತ್ರ

ಬೆಂಗಳೂರು: ‘ಚರ್ಚ್‌ ಸ್ಟ್ರೀಟ್‌ ಅನ್ನು ಟೆಂಡರ್‌ಶ್ಯೂರ್‌ ಯೋಜನೆಯಲ್ಲಿ ಅಭಿವೃದ್ಧಿಪಡಿಸಲು ₹18 ಕೋಟಿ ವೆಚ್ಚ ಮಾಡಲಾಗಿದ್ದು, ಈ ಕಾಮಗಾರಿ ಕಳಪೆಯಾಗಿದೆ. ಹೀಗಾಗಿ ಆಗಾಗ್ಗೆ ಹಾಳಾಗುತ್ತಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ರಮೇಶ್ ಎನ್.ಆರ್ ಆರೋಪಿಸಿದ್ದಾರೆ.

ಈ ಬಗ್ಗೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಹಾಗೂ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರಿಗೆ ಪತ್ರ ಬರೆದಿದ್ದು, ‘ನಾಲ್ಕು ವರ್ಷಗಳ ಹಿಂದೆ ಪದ್ಮನಾಭನಗರ ವಿಧಾನಸಭೆ ಕ್ಷೇತ್ರದ ಯಡಿಯೂರು ವಾರ್ಡ್‌ನಲ್ಲಿ ಇದೇ ಟೆಂಡರ್‌ಶ್ಯೂರ್‌ ಯೋಜನೆಯಡಿ ಐದು ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗಿದೆ. ಆ ರಸ್ತೆಗಳು ಈಗಲೂ ಸುಸ್ಥಿತಿಯಲ್ಲಿದೆ. ಆದರೆ, 700 ಮೀಟರ್‌ ಉದ್ದ ಚರ್ಚ್‌ ಸ್ಟ್ರೀಟ್‌ ಅಭಿವೃದ್ಧಿಗೆ ₹18 ಕೋಟಿ ವೆಚ್ಚ ಮಾಡಲಾಗಿದೆ. ಈ ರಸ್ತೆ ಆಗಾಗ್ಗೆ ಹಾಳಾಗುತ್ತಲೇ ಇದೆ’ ಎಂದಿದ್ದಾರೆ.

‘ಚರ್ಚ್‌ ಸ್ಟ್ರೀಟ್‌ ರಸ್ತೆ ನಿರ್ಮಿಸಿದ ಒಂದೇ ತಿಂಗಳಲ್ಲಿ ಸುರಿದ ಬಾರಿ ಮಳೆಗೆ ಸಂಪೂರ್ಣ ರಸ್ತೆ ಜಲಾವೃತವಾಗಿತ್ತು. ಆರೇಳು ತಿಂಗಳಿಂದ ಈ ರಸ್ತೆಯಲ್ಲಿ ಅಳವಡಿಸಿರುವ ಕಲ್ಲುಗಳು ಹಾಳಾಗಿವೆ ಎಂದು ವರದಿಯಾಗಿದೆ. ಗುಣಮಟ್ಟದ ರಸ್ತೆ ನಿರ್ಮಿಸದಿರುವುದು ಇದಕ್ಕೆಲ್ಲ ಕಾರಣ. ಅಲ್ಲದೆ, ವಾರ್ಷಿಕವಾಗಿ ₹4.8 ಕೋಟಿ ನಿರ್ವಹಣೆಯ ಗುತ್ತಿಗೆಯನ್ನು ನೀಡಲಾಗಿದೆ’ ಎಂದು ಅವರು ದೂರಿದ್ದಾರೆ.

‘ಈ ಯೋಜನೆಯ ಕಾಮಗಾರಿ ಬಗ್ಗೆ ಸಿಐಡಿ ಅಥವಾ ಲೋಕಾಯುಕ್ತದಿಂದ ತನಿಖೆ ನಡೆಸುವಂತೆ ಮುಖ್ಯಮಂತ್ರಿಯವರಿಗೆ ತಾವು ಪತ್ರ ಬರೆಯಬೇಕು’ ಎಂದು ವಿನಂತಿಸಿದ್ದಾರೆ.

ನಿರ್ವಹಣೆ ಗುತ್ತಿಗೆ ನೀಡಿಲ್ಲ: ‘ಚರ್ಚ್‌ ಸ್ಟ್ರೀಟ್‌ನಲ್ಲಿ ವಾಹನ ಸಂಚಾರ ಅತಿ ಹೆಚ್ಚಾಗಿದ್ದು, ವಾಣಿಜ್ಯ ಚಟುವಟಿಕೆಯೂ ಅತಿಯಾಗಿದೆ. ಹೀಗಾಗಿ ಕೆಲವು ಕಲ್ಲುಗಳು ಹೊರಬಂದಿವೆ. ಅವುಗಳನ್ನು ದುರಸ್ತಿ ಮಾಡಲಾಗುತ್ತಿದೆ. ರಸ್ತೆ ಅಭಿವೃದ್ಧಿಯಾಗಿ ಎರಡೂವರೆ ವರ್ಷವಾಗಿದ್ದು ಗುತ್ತಿಗೆದಾರರೇ ನಿರ್ವಹಣೆ ಮಾಡುತ್ತಿದ್ದಾರೆ. ಯಾವುದೇ ರೀತಿಯ ನಿರ್ವಹಣೆ ಗುತ್ತಿಗೆಯನ್ನು ನೀಡಿಲ್ಲ’ ಎಂದು ಬಿಬಿಎಂಪಿ ಯೋಜನೆ ವಿಭಾಗದ ಮುಖ್ಯ ಎಂಜಿನಿಯರ್‌ ಲೋಕೇಶ್‌ ಹೇಳಿದರು.

‘ಟೆಂಡರ್‌ಶ್ಯೂರ್‌ ಯೋಜನೆಯಡಿ 12 ರಸ್ತೆಗಳಲ್ಲಿ 13.41 ಕಿ.ಮೀ ಅಭಿವೃದ್ಧಿಪಡಿಸಲಾಗಿದೆ. ಈ ಎಲ್ಲ ರಸ್ತೆಗಳಿಗೆ ನಿರ್ವಹಣೆ ಗುತ್ತಿಗೆಯನ್ನು ₹4.3 ಕೋಟಿಗೆ ನೀಡಲು ಯೋಜಿಸಲಾಗಿತ್ತು. ಆದರೆ, ಅದು ಅನುಷ್ಠಾನವಾಗಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT