ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಕ್ಕ ಸಿಕ್ಕವರ ಮೇಲೆ ಚಾಕು ಇರಿತ: ಒಬ್ಬ ಸಾವು

Last Updated 18 ಅಕ್ಟೋಬರ್ 2020, 19:46 IST
ಅಕ್ಷರ ಗಾತ್ರ

ಬೆಂಗಳೂರು: ಕಾಟನ್‌ಪೇಟೆ ಠಾಣೆ ವ್ಯಾಪ್ತಿಯಲ್ಲಿ ಎಂ. ಗಣೇಶ್ ಎಂಬಾತಸಿಕ್ಕ ಸಿಕ್ಕವರ ಮೇಲೆ ಚಾಕುವಿನಿಂದ ಇರಿದಿದ್ದು, ತೀವ್ರವಾಗಿ ಗಾಯಗೊಂಡಿದ್ದ ಮಾರಿ (30) ಎಂಬುವರು ಮೃತಪಟ್ಟಿದ್ದಾರೆ.

‘ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ತೀವ್ರವಾಗಿ ಗಾಯಗೊಂಡಿರುವ ಐವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃತ್ಯ ಎಸಗಿದ್ದ ಆರೋಪಿ ಗಣೇಶ್‌ನನ್ನು ಬಂಧಿಸಿ ಚಾಕು ಜಪ್ತಿ ಮಾಡಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ತಿಳಿಸಿದರು.

‘ಆಂಜನಪ್ಪ ಗಾರ್ಡನ್ ನಿವಾಸಿ ಗಣೇಶ್, ಕಾಟನ್‌ಪೇಟೆ ಮಂಡಿಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಬೆಳಿಗ್ಗೆ 8.30ರ ಸುಮಾರಿಗೆ ಕುರಿ ಮಾಂಸ ಖರೀದಿಸಲೆಂದು ಬಾಳೇಕಾಯಿ ಮಂಡಿ ಪ್ರದೇಶಕ್ಕೆ ಬಂದಿದ್ದ. ಅಲ್ಲಿ ಅಂಗಡಿಯೊಂದರಲ್ಲಿ ಚಾಕು ತೆಗೆದುಕೊಂಡು ಓಡಲಾರಂಭಿಸಿದ್ದ. ಅಂಗಡಿ ಕೆಲಸಗಾರರು ಆತನನ್ನು ಬೆನ್ನಟ್ಟಿದ್ದರು. ಚಾಕು ಹಿಡಿದುಕೊಂಡೇ ಆರೋಪಿ, ಅಂಜನಪ್ಪ ಗಾರ್ಡನ್, ಚಲವಾದಿ ಪಾಳ್ಯ ಹಾಗೂ ಭಕ್ಷಿ ಗಾರ್ಡನ್‌ನಲ್ಲಿ ಓಡಾಡಿದ್ದ.’

‘ಕೂಲಿ ಕೆಲಸ ಮಾಡುತ್ತಿದ್ದ ಸ್ಥಳೀಯ ನಿವಾಸಿ ಮಾರಿ, ರಸ್ತೆಯಲ್ಲಿ ಹೊರಟಿದ್ದರು. ಅವರನ್ನು ತಡೆದಿದ್ದ ಆರೋಪಿ, ಚಾಕುವಿನಿಂದ ದೇಹದ ಹಲವೆಡೆ ಇರಿದಿದ್ದ. ನಂತರ, ದಾರಿಯಲ್ಲಿ ಹೋಗುತ್ತಿದ್ದ ಐವರ ಮೇಲೂ ದಾಳಿ ಮಾಡಿ ಚಾಕು ಚುಚ್ಚಿದ್ದ. ತೀವ್ರ ರಕ್ತಸ್ರಾವದಿಂದ ರಸ್ತೆಯಲ್ಲೇ ಕುಸಿದು ಬಿದ್ದಿದ್ದ ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು’ ಎಂದು ಹೇಳಿದರು.

‘ಗಾಯಾಳು ಮಾರಿ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಅಸುನೀಗಿದರು. ಇನ್ನೊಬ್ಬ ಗಾಯಾಳು ವೇಲಾಯದನ್ ಎಂಬುವರಿಗೆ ತೀವ್ರ ನಿಗಾ ಘಟಕದಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಉಳಿದವರು ಸಾಮಾನ್ಯ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದರು.

ಆರೋಪಿ ಹಿಡಿದ ಗಸ್ತು ಸಿಬ್ಬಂದಿ: ‘ಆರೋಪಿ ಕೃತ್ಯದ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಗಸ್ತಿನಲ್ಲಿದ್ದ ಪಿಎಸ್‌ಐ ಮೂರ್ತಿ, ಕಾನ್‌ಸ್ಟೆಬಲ್ ಶಿವಮೂರ್ತಿ ನಾಯಕ್ ಸ್ಥಳಕ್ಕೆ ಹೋಗಿದ್ದರು. ಆರೋಪಿಯನ್ನು ಬಂಧಿಸಿ ಚಾಕು ಜಪ್ತಿ ಮಾಡಿದ್ದಾರೆ’

‘ಆರೋಪಿ ವಿರುದ್ಧ ಕಾಟನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ‘ನನ್ನ ಮಗ ಗಣೇಶ್, ಮಾನಸಿಕ ರೋಗಿ. ಎರಡು ವರ್ಷಗಳ ಹಿಂದೆ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು’ ಎಂಬುದಾಗಿ ತಾಯಿ ಹೇಳುತ್ತಿದ್ದಾರೆ. ಆ ಬಗ್ಗೆ ಪರಿಶೀಲನೆ ನಡೆಯುತ್ತಿದೆ’ ಎಂದೂ ಡಿಸಿಪಿ ಹೇಳಿದರು.

ಬಾರ್‌ ಮಾಲೀಕನ ಹತ್ಯೆ ಪ್ರಕರಣ: ಸುಪಾರಿ ನೀಡಿದ್ದು ಭೂಗತ ಪಾತಕಿ ವಿಕ್ಕಿ ಶೆಟ್ಟಿ?

ಬ್ರಿಗೇಡ್ ರಸ್ತೆಗೆ ಹೊಂದಿಕೊಂಡಿರುವ ‘ಡ್ಯುಯೆಟ್’ ಬಾರ್‌ ಮಾಲೀಕ ಮನೀಶ್ ಶೆಟ್ಟಿ (45) ಹತ್ಯೆಗೆ ಭೂಗತ ಪಾತಕಿ ವಿಕ್ಕಿ ಶೆಟ್ಟಿ ಸುಪಾರಿ ನೀಡಿರುವ ಮಾಹಿತಿ ಕೇಂದ್ರ ವಿಭಾಗದ ಪೊಲೀಸರಿಗೆ ಸಿಕ್ಕಿದೆ.

ಅ.15ರಂದು ರಾತ್ರಿ ನಡೆದಿದ್ದ ಹತ್ಯೆ ಸಂಬಂಧ ಶನಿವಾರವಷ್ಟೇ ನಾಲ್ವರನ್ನು ಬಂಧಿಸಿದ್ದ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿ ಒಂದು ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದರು. ಹತ್ಯೆ ಹಿಂದಿರುವ ಹಲವರ ಹೆಸರುಗಳನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆಂದು ಗೊತ್ತಾಗಿದೆ.

‘ಮನೀಶ್‌ ಶೆಟ್ಟಿಯನ್ನು ಹತ್ಯೆ ಮಾಡಲು ವಿಕ್ಕಿ ಶೆಟ್ಟಿ ಸುಪಾರಿ ನೀಡಿದ್ದ. ಹೇಗೆ? ಎಲ್ಲಿ? ಹತ್ಯೆ ಮಾಡಬೇಕೆಂಬುದನ್ನು ಆತನೇ ತಿಳಿಸಿದ್ದ. ನಾಲ್ಕು ತಿಂಗಳಿನಿಂದ ಸಂಚು ರೂಪಿಸಿ ಮನೀಶ್‌ನನ್ನು ಹತ್ಯೆ ಮಾಡಲಾಗಿದೆ’ ಎಂದು ಆರೋಪಿಗಳು ಹೇಳಿಕೆ ನೀಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

‘ಹಲವು ದಂಧೆಗಳನ್ನು ನಡೆಸುವ ಸಂಬಂಧ ಮನೀಶ್ ಹಾಗೂ ಮಂಗಳೂರಿನ ಕಿಶೋರ್ ಎಂಬಾತನ ನಡುವೆ ವೈಮನಸ್ಸು ಇತ್ತು. ಮಧ್ಯಪ್ರವೇಶಿಸಿದ್ದ ವಿಕ್ಕಿ ಶೆಟ್ಟಿ ಸಂಧಾನ ಮಾಡಿಸಿದ್ದ. ಅದಾಗಿ ಕೆಲವೇ ದಿನಗಳಲ್ಲಿ ಕಿಶೋರ್ ಕೊಲೆಯಾಗಿತ್ತು. ಅದರಲ್ಲಿ ಮನೀಶ್ ಹೆಸರು ಕೇಳಿಬಂದಿತ್ತು. ವಿಕ್ಕಿ ಶೆಟ್ಟಿ ಕಡೆಯ ಯುವಕರಿಗೂ ಮನೀಶ್ ಬೆದರಿಕೆ ಹಾಕಲಾರಂಭಿಸಿದ್ದ. ಇದೇ ಕಾರಣಕ್ಕೆ ಶೆಟ್ಟಿ, ಸುಪಾರಿ ನೀಡಿ ಈ ಕೊಲೆ ಮಾಡಿಸಿರುವುದಾಗಿ ಆರೋಪಿಗಳು ಹೇಳಿದ್ದಾರೆ’ ಎಂದು ಮೂಲಗಳು ಮಾಹಿತಿ ನೀಡಿವೆ.

ಆಸ್ಟ್ರೇಲಿಯಾ ವಿಮಾನದಲ್ಲಿದ್ದ ₹ 13 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ಬಳೆ, ಫೋಟೊ ಆಲ್ಬಮ್ ಸೇರಿದಂತೆ ವಿವಿಧ ವಸ್ತುಗಳಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ ₹ 13 ಕೋಟಿ ಮೌಲ್ಯದ ಮಾದಕ ವಸ್ತುವನ್ನು (ಡ್ರಗ್ಸ್) ಕೇಂದ್ರ ಕಂದಾಯ ಗುಪ್ತಚರ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಆಸ್ಟ್ರೇಲಿಯಾಗೆ ಕಾರ್ಗೊ ಬಾಕ್ಸ್‌ಗಳಲ್ಲಿ ಡ್ರಗ್ಸ್ ಕಳುಹಿಸಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ್ದ ಅಧಿಕಾರಿಗಳು, ಚುರುಕಿನ ಕಾರ್ಯಾಚರಣೆ ನಡೆಸಿ ಆಸ್ಟ್ರೇಲಿಯಾಗೆ ಹೋಗಿದ್ದ ಬಾಕ್ಸ್‌ಗಳನ್ನು ವಾಪಸು ತರಿಸುವಲ್ಲಿ ಯಶಸ್ವಿಯಾಗಿದ್ದಾರೆ.

‘ಡ್ರಗ್ಸ್ ತುಂಬಿದ್ದ ಬಾಕ್ಸ್‌ಗಳನ್ನು ಆಸ್ಟೇಲಿಯಾಗೆ ಕಳುಹಿಸಲು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬುಕ್ಕಿಂಗ್ ಮಾಡಲಾಗಿತ್ತು. ಬಾಕ್ಸ್‌ಗಳನ್ನು ಹೊತ್ತ ವಿಮಾನ, ಬೆಂಗಳೂರು ನಿಲ್ದಾಣ ಮಾರ್ಗವಾಗಿ ಆಸ್ಟ್ರೇಲಿಯಾಗೆ ಹೋಗಿತ್ತು. ಅಲ್ಲಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಬಾಕ್ಸ್‌ಗಳನ್ನು ವಾಪಸು ಬೆಂಗಳೂರಿಗೆ ತರಿಸಿಕೊಂಡು ತಪಾಸಣೆ ನಡೆಸಿದಾಗ ಡ್ರಗ್ಸ್ ಪತ್ತೆಯಾಯಿತು’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಬಾಕ್ಸ್‌ಗಳು ಯಾರಿಗೆ ಸೇರಿದ್ದು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ’ ಎಂದೂ ತಿಳಿಸಿದರು.

ಆಹ್ವಾನದ ಸೋಗಿನಲ್ಲಿ ಕಳ್ಳತನ: ಬಂಧನ

ಗೃಹ ಪ್ರವೇಶದ ಆಹ್ವಾನ ಪತ್ರಿಕೆ ನೀಡುವ ಸೋಗಿನಲ್ಲಿ ವೃದ್ಧ ದಂಪತಿ ಮನೆಗೆ ಹೋಗಿ ಚಿನ್ನಾಭರಣ ಕದ್ದಿದ್ದ ಆರೋಪಿ ಅಕ್ಷಯ್ (27) ಎಂಬಾತನನ್ನು ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸಿದ್ದಾರೆ.

‘ನಂದಿನಿ ಲೇಔಟ್ ನಿವಾಸಿ ಅಕ್ಷಯ್, ಇದೇ 1ರಂದು ಕೃತ್ಯ ಎಸಗಿದ್ದ. ಆತನಿಂದ 24 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ರಾಜಾಜಿನಗರದ ಡಿ-ಬ್ಲಾಕ್‌ನಲ್ಲಿ ಸೀತಾಪತಿ ಮತ್ತು ಸರೋಜಾ ದಂಪತಿ ನೆಲೆಸಿದ್ದಾರೆ. ಸಂಬಂಧಿ ಎಂದು ಹೇಳಿಕೊಂಡು ಅವರ ಮನೆಗೆ ಹೋಗಿದ್ದ ಆರೋಪಿ, ಆಹ್ವಾನ ಪತ್ರಿಕೆ ಜೊತೆ ನಕಲಿ ಬೆಳ್ಳಿ ನಾಣ್ಯ ನೀಡಿದ್ದ. ಗೃಹಪ್ರವೇಶಕ್ಕೆ ಬಂದರೆ ಚಿನ್ನದ ಸರ ನೀಡುವುದಾಗಿ ಹೇಳಿದ್ದ. ನಂತರ ಸರೋಜಾ ಅವರ ಚಿನ್ನದ ಸರ ಕದ್ದು ಪರಾರಿಯಾಗಿದ್ದ. ಸಿಸಿಟಿವಿ ಕ್ಯಾಮೆರಾ ದೃಶ್ಯ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT