ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಧ ಕಿ.ಮೀವರೆಗೂ ಕಸದ ರಾಶಿ

ಭದ್ರಪ್ಪ ಬಡಾವಣೆ: ಸಮರ್ಪಕವಾಗಿ ಕಸ ತೆರವು ಮಾಡದ ಪಾಲಿಕೆ
Last Updated 3 ಸೆಪ್ಟೆಂಬರ್ 2019, 19:49 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹೆಬ್ಬಾಳದಿಂದ ತುಮಕೂರು ರಸ್ತೆ ಕಡೆಗೆ ಸಾಗುವ ಹೊರವರ್ತುಲ ರಸ್ತೆಯ ಭದ್ರಪ್ಪ ಬಡಾವಣೆ ಬಸ್‌ ನಿಲ್ದಾಣದ ಬಳಿ ಸುಮಾರು ಅರ್ಧ ಕಿ.ಮೀ.ವರೆಗೆ ರಸ್ತೆಬದಿಯಲ್ಲೇ ಕಸದ ರಾಶಿ ಬಿದ್ದಿದೆ. ಇದರಿಂದ ಪಾದಚಾರಿ ಮಾರ್ಗವೂ ಹಾಳಾಗಿದ್ದು ಸಾರ್ವಜನಿಕರಿಗೆನಡೆದಾಡಲು ತೊಂದರೆಯಾಗಿದೆ.

ಇದರ ಪಕ್ಕದಲ್ಲೇ ರೈಲ್ವೆ ಹಳಿ ಹಾದು ಹೋಗಿದೆ. ಭದ್ರಪ್ಪ ಬಡಾವಣೆ ಬಸ್‌ ನಿಲ್ದಾಣದಲ್ಲಿ ನಿಲ್ಲುವ ಪ್ರಯಾಣಿಕರು ಕಸದ ದುರ್ಗಂಧಕ್ಕೆ ಮೂಗುಮುಚ್ಚಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಮುಖ್ಯರಸ್ತೆಯಲ್ಲೇ ಇಷ್ಟು ಪ್ರಮಾಣದ ಕಸ ಬಿದ್ದಿರುವುದಕ್ಕೆ ಸಾರ್ವಜನಿಕರು ಪಾಲಿಕೆ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ಇತ್ತ ಸ್ಥಳೀಯ ನಿವಾಸಿಗಳು ತಮ್ಮ ಮನೆಯಲ್ಲಿ ಸಂಗ್ರಹವಾಗಿರುವ ಕಸವನ್ನು ತಂದು ಇಲ್ಲಿ ಬಿಸಾಡುತ್ತಾರೆ. ತರಕಾರಿ ಅಂಗಡಿಗಳಿಂದ ಕೊಳೆತ ತರಕಾರಿಗಳನ್ನು ತಂದು ಇಲ್ಲೇ ಸುರಿಯುತ್ತಾರೆ. ಮಾಂಸದ ಅಂಗಡಿಗಳಲ್ಲಿ ಸಂಗ್ರಹವಾಗುವ ಮಾಂಸದ ತ್ಯಾಜ್ಯವನ್ನು ರಾತ್ತಿ ವೇಳೆ ತಂದು ಮಾಲೀಕರು ಬಿಸಾಡುತ್ತಾರೆ. ಇತ್ತ ಸಂಗ್ರಹವಾದ ಕಸ ತೆರವು ಮಾಡದೇ ಪಾಲಿಕೆ ನಿರ್ಲಕ್ಷ್ಯ ತೋರಿದೆ ಎಂದು ಸಾರ್ವಜನಿಕರು ದೂರುತ್ತಾರೆ.

‘ನಿತ್ಯಬಸ್‌ಗಾಗಿ ಇದೇ ಬಸ್‌ ನಿಲ್ದಾಣದಲ್ಲಿ ನಿಲ್ಲುತ್ತೇವೆ. ಪ್ರಯಾಣಿಕರು ಈ ವೇಳೆ ಕಸದಿಂದ ಬರುವ ದುರ್ಗಂಧ ತಡೆಯಲಾರದೆ ಮೂಗುಮುಚ್ಚಿಕೊಂಡೇ ನಿಲ್ಲುತ್ತಾರೆ. ಇದರಿಂದ ತಪ್ಪಿಸಿಕೊಳ್ಳಲು ಬಸ್‌ ಬಂದರೆ ಸಾಕು ಎಂದು ಅಸಹಾಯಕರಂತೆ ನಿಂತಿರುತ್ತಾರೆ’ ಎಂದು ಭದ್ರಪ್ಪ ಬಡಾವಣೆ ನಿವಾಸಿ ಮನಸ್ವಿ ಬೇಸರ ವ್ಯಕ್ತಪಡಿಸಿದರು.

‘ಮಳೆ ಬಂದರಂತೂ ಈ ನಿಲ್ದಾಣದತ್ತ ಪ್ರಯಾಣಿಕರು ಸುಳಿಯುವುದಿಲ್ಲ. ಪಾದಚಾರಿ ಮಾರ್ಗದ ಮೇಲೆಲ್ಲಾ ಕಸ ತುಂಬಿಕೊಂಡಿದ್ದು, ಯಾರೂ ಈ ರಸ್ತೆಯಲ್ಲಿ ನಡೆದಾಡುವುದಿಲ್ಲ. ಪಾಲಿಕೆ ಆಗಾಗ ಇಲ್ಲಿ ಕಸ ತೆರವು ಮಾಡುತ್ತದೆ. ಪುನಃ ಕಸ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುತ್ತಲೇ ಇರುತ್ತದೆ. ಇಲ್ಲಿನ ಸುತ್ತಮುತ್ತಲ ನಿವಾಸಿಗಳಿಗೆ ಕಸ ಹಾಕದಂತೆ ಎಚ್ಚರಿಕೆ ನೀಡಬೇಕು. ಖುದ್ದು ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಇಲ್ಲಿ ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

‘ಬೆಳಗಿನ ವೇಳೆ ನಿವಾಸಿಗಳು ಕಸ ಬಿಸಾಡುತ್ತಾರೆ. ರಾತ್ರಿಯ ವೇಳೆ ಮಾಂಸದಂಗಡಿ ಮಾಲೀಕರು ತ್ಯಾಜ್ಯ ಬಿಸಾಡುತ್ತಾರೆ. ಕಸ ಹಾಕುವವರನ್ನು ತಡೆಯಲು ಪಾಲಿಕೆ ಸಿಬ್ಬಂದಿ ಗಸ್ತು ತಿರುಗಬೇಕು. ಇಲ್ಲದಿದ್ದರೆ ಮತ್ತೊಂದು ಕಸದ ಕ್ವಾರಿ ನಗರದಲ್ಲೇ ನಿರ್ಮಾಣವಾಗಲಿದೆ’ ಎಂದು ಸ್ಥಳೀಯ ನಿವಾಸಿ ನಂಜಪ್ಪ ಭೀತಿ ವ್ಯಕ್ತಪಡಿಸಿದರು.

‘ಮಳೆ ಬಂದಾಗ ರಸ್ತೆಬದಿಯ ಕಸದಲ್ಲೇ ನೀರು ಸಂಗ್ರಹವಾಗುತ್ತದೆ. ಇದರಿಂದ ರೋಗ ಹರಡುವ ಸಾಧ್ಯತೆಗಳಿದ್ದು, ಆರೋಗ್ಯದ ಮೇಲೂ ಪರಿಣಾಮ ಬೀಳಲಿದೆ’ ಎಂದರು. ಈ ಬಗ್ಗೆ ಮಾಹಿತಿ ಪಡೆಯಲು ಪಾಲಿಕೆ ಅಧಿಕಾರಿಗಳಿಗೆ ಕರೆ ಮಾಡಿದಾಗ ಈ ಮುಖ್ಯರಸ್ತೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು
ಪ್ರತಿಕ್ರಿಯಿಸಿದರು.

***

ಕಾಲೇಜಿಗೆ ತೆರಳಲು ಪ್ರತಿದಿನ ಇದೇ ಬಸ್‌ ನಿಲ್ದಾಣದಲ್ಲಿ ನಿಲ್ಲುತ್ತೇನೆ. ದುರ್ವಾಸನೆಯಿಂದಾಗಿ ಬಸ್‌ ನಿಲ್ದಾಣದಲ್ಲಿ ಒಂದು ನಿಮಿಷವೂ ನಿಲ್ಲಲು ಸಾಧ್ಯವಾಗದು.

- ಶಶಿಕಲಾ, ವಿದ್ಯಾರ್ಥಿ

***

ಇಲ್ಲಿ ಕಸ ಹಾಕದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಬೇಕು. ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಲು ರಸ್ತೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು.

- ಶ್ರುತಿ, ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT