ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲಿನ್ಯ ನಿಯಂತ್ರಣ ಮಂಡಳಿ–ಸರ್ಕಾರದ ಮಧ್ಯೆ ಸಂಘರ್ಷ

ಅಧ್ಯಕ್ಷ– ಸದಸ್ಯ ಕಾರ್ಯದರ್ಶಿ ಮಧ್ಯೆ ಜಟಾಪಟಿ: ಸೂರಿ ಪಾಯಲ್‌ಗೆ ಯಾರ ಬಲ?
Published 16 ಜುಲೈ 2023, 15:48 IST
Last Updated 17 ಜುಲೈ 2023, 15:49 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಅಧ್ಯಕ್ಷ ಹಾಗೂ ಜುಲೈ 15ರಂದು ಹುದ್ದೆ ಕಳೆದುಕೊಂಡ ಸದಸ್ಯ ಕಾರ್ಯದರ್ಶಿಯ ವೈಯಕ್ತಿಕ ಪ್ರತಿಷ್ಠೆ ಮತ್ತು ಆಡಳಿತವನ್ನು ಕೈವಶ ಮಾಡಿಕೊಳ್ಳಲು ಶುರುವಾದ ಪೈಪೋಟಿ ಸಂಘರ್ಷಕ್ಕೆ ತಿರುಗಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ, ಮಂಡಳಿಯ ಸದಸ್ಯ ಕಾರ್ಯದರ್ಶಿಯಾಗಿದ್ದವರನ್ನು ವರ್ಗಾವಣೆ ಮಾಡಲಾಯಿತು. ಐಎಫ್‌ಎಸ್‌ ಅಧಿಕಾರಿಯಲ್ಲದೇ ಇದ್ದರೂ  ಮಂಡಳಿಯ ಮಾಹಿತಿ ತಂತ್ರಜ್ಞಾನ ವಿಭಾಗದ ಅಧಿಕಾರಿಯನ್ನು ಪ್ರಭಾರ ಹುದ್ದೆಯಲ್ಲಿರಿಸಲಾಯಿತು. ಇಬ್ಬರು ಅಧಿಕಾರಸ್ಥರ ಮಧ್ಯದ ಪೈಪೋಟಿ ಈಗ ಮಂಡಳಿಯ ಆಡಳಿತದ ಮೇಲೆ ಪರಿಣಾಮ ಬೀರಿದೆ ಎಂದು ಅಲ್ಲಿನ ಅಧಿಕಾರಿಗಳೇ ಹೇಳುತ್ತಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ, ನಿಗದಿತ ಅರ್ಹತೆ ಇಲ್ಲದೇ ಇದ್ದರೂ ಡಾ. ಶಾಂತ್ ತಿಮ್ಮಯ್ಯ ಅವರನ್ನು ಮಂಡಳಿಯ ಅಧ್ಯಕ್ಷ ಹುದ್ದೆಗೆ ನಾಮನಿರ್ದೇಶನ ಮಾಡಲಾಗಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು. ಆಗ ಐಎಫ್‌ಎಸ್ ಅಧಿಕಾರಿ ಎಚ್‌.ಸಿ. ಗಿರೀಶ್ ಅವರನ್ನು ಸದಸ್ಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜೂನ್ 7ರಂದು ಗಿರೀಶ್ ಅವರನ್ನು ಕಿಯೋನಿಕ್ಸ್‌ಗೆ ವರ್ಗ ಮಾಡಲಾಯಿತು. ಈ ಹುದ್ದೆಗೆ ಐಎಫ್‌ಎಸ್‌ ಹಿರಿಯ ಶ್ರೇಣಿಯ ಅಧಿಕಾರಿಯನ್ನೇ ನೇಮಕ ಮಾಡಬೇಕು ಎಂದು ನಿಯಮಗಳಲ್ಲಿದೆ. ಹಾಗಿದ್ದರೂ ಮಂಡಳಿಯ ಮಾಹಿತಿ ತಂತ್ರಜ್ಞಾನ (ಐ.ಟಿ) ವಿಭಾಗದ ವ್ಯವಸ್ಥಾಪಕ ಸೂರಿ ಪಾಯಲ್ ಅವರಿಗೆ ಅದೇ ದಿನ ಹೆಚ್ಚುವರಿಯಾಗಿ ಸದಸ್ಯ ಕಾರ್ಯದರ್ಶಿ ಹುದ್ದೆಯ ಪ್ರಭಾರವನ್ನು ನೀಡಲಾಯಿತು.

ಸೂರಿ ಪಾಯಲ್‌ ಅವರು ಮಂಡಳಿಯ ಎಲ್ಲ ಅಧಿಕಾರವನ್ನು ತಮ್ಮದೇ ಆದೇಶದ ಮೂಲಕ ಕೈವಶ ಮಾಡಿಕೊಳ್ಳಲು ಮುಂದಾದರು. ಪ್ರತಿಯೊಂದು ಕಡತವೂ ತಮ್ಮ ಗಮನಕ್ಕೆ ಬರದೇ ಹೋಗಕೂಡದು ಎಂದು ಜೂನ್‌ 21ರಂದು ಸುತ್ತೋಲೆ ಹೊರಡಿಸಿದರು. 

ಇದನ್ನು ಸಹಿಸದ ಅಧ್ಯಕ್ಷ ಶಾಂತ್ ತಿಮ್ಮಯ್ಯ, ಜುಲೈ 3ರಂದು ಆದೇಶವೊಂದನ್ನು ಹೊರಡಿಸಿ, ಸದಸ್ಯ ಕಾರ್ಯದರ್ಶಿ ಹೊರಡಿಸಿದ ಎಲ್ಲ ಆದೇಶಗಳನ್ನೂ ವಾಪಸ್ ಪಡೆಯಲಾಗಿದೆ ಎಂದು ಸೂಚಿಸಿದರು. ಇದು ಸಂಘರ್ಷದ ವಾತಾವರಣವನ್ನು ಸೃಷ್ಟಿಸಿತು. ಈ ಬೆನ್ನಲ್ಲೇ, ‘ಅಧ್ಯಕ್ಷರು ಅಕ್ರಮ ಎಸಗಿದ್ದಾರೆ’ ಎಂದು ಸದಸ್ಯ ಕಾರ್ಯದರ್ಶಿ, ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ದೂರು ನೀಡಿದರು. ಜುಲೈ 15ರಂದು ಆದೇಶ ಹೊರಡಿಸಿದ ಅಧ್ಯಕ್ಷ ಶಾಂತ್ ತಿಮ್ಯಯ್ಯ, ಸೂರಿ ಪಾಯಲ್‌ಗೆ ನೀಡಿದ್ದ ಸದಸ್ಯ ಕಾರ್ಯದರ್ಶಿ ಹುದ್ದೆಯ ಪ್ರಭಾರ ಅಧಿಕಾರವನ್ನು ವಾಪಸ್ ಪಡೆದಿದ್ದಾರೆ.

ಸೂರಿ ಪಾಯಲ್‌ ಅಧಿಕಾರವನ್ನು ಹಿಂಪಡೆದ ಬೆನ್ನಲ್ಲೇ ಅರಣ್ಯ ಇಲಾಖೆಯು ಶಾಂತ್‌ ತಿಮ್ಮಯ್ಯ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಜುಲೈ 15ರಂದು ನೋಟಿಸ್‌ ನೀಡಿರುವ ಇಲಾಖೆ, 20 ವರ್ಷ ಬಳಿಕ, 2003ರಲ್ಲಿ ವಲಯ ವಿಂಗಡಿಸಿ, ಜಲಾನಯನ ಪ್ರದೇಶವನ್ನು ಸಂರಕ್ಷಿಸಲು ಕ್ರಮಕೈಗೊಳ್ಳಲು ವಿಫಲವಾಗಿದ್ದಕ್ಕೆ ಕಾರಣ ಕೇಳಿದೆ.

₹17.85 ಕೋಟಿ  ಅಕ್ರಮ ಆರೋಪ

ಮಂಡಳಿಯ ಅಧ್ಯಕ್ಷ ಶಾಂತ್ ತಿಮ್ಮಯ್ಯ ನೇತೃತ್ವದ ‘ಸಿಂಗಲ್ ಸೋರ್ಸ್ ಕಮಿಟಿ’ ಜನವರಿ 30ರಂದು ನಡೆಸಿದ ಸಭೆಯಲ್ಲಿ ₹17.85 ಕೋಟಿ ಮೌಲ್ಯದ ಜಾಗೃತಿ ಕಾರ್ಯಕ್ರಮದ ಪ್ರಚಾರಕ್ಕಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ  ಪಾರದರ್ಶಕ ಕಾಯ್ದೆ -1999 ಅನ್ನು (ಕೆಟಿಪಿಪಿ) ಉಲ್ಲಂಘಿಸಿ, ಏಜೆನ್ಸಿಗಳಿಗೆ ನೇರವಾಗಿ ನೀಡಿದೆ ಎಂಬುದು ಪ್ರಮುಖ ಆರೋಪ.

ಟೆಂಡರ್ ಕರೆಯದೇ ತಮಗೆ ಬೇಕಾದ ನಾಲ್ಕು ಸಂಸ್ಥೆಗಳಿಗೆ ಕಾರ್ಯಾದೇಶ ನೀಡಲಾಗಿದ್ದು, ಇದರಲ್ಲಿ ಭಾರಿ ಅಕ್ರಮ ನಡೆದಿದೆ. ಈ ಬಗ್ಗೆ ವಿಚಾರಣೆ ನಡೆಸಿ ಕ್ರಮ ಜರುಗಿಸಬೇಕು ಎಂದು ಜುಲೈ 3ರಂದು ಅಂದು ಸದಸ್ಯ ಕಾರ್ಯದರ್ಶಿಯಾಗಿದ್ದ ಸೂರಿ ಪಾಯಲ್ ಪತ್ರ ಬರೆದಿದ್ದರು. ಅಲ್ಲದೇ, ಸಂಬಂಧಿಸಿದ ದಾಖಲೆಗಳನ್ನೂ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT