ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಮ್ಯೂಸಿಯಂ ಸ್ಥಾಪನೆ

ಪಾರಂಪರಿಕ ಕಟ್ಟಡದಲ್ಲಿ ನಿರ್ಮಾಣ: ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ
Last Updated 4 ಫೆಬ್ರುವರಿ 2020, 19:00 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವಿರ ಹಾಸಿಗೆಯ ಹೊಸ ಕಟ್ಟಡ ತಲೆಯೆತ್ತಿದ ಬಳಿಕ ಹಳೆಯ ಪಾರಂಪರಿಕ ಕಟ್ಟಡದಲ್ಲಿ ಆರೋಗ್ಯ ಆರೈಕೆ ಸಂಗ್ರಹಾಲಯ ನಿರ್ಮಿಸಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಮಂಗಳವಾರ ನಗರದ ವಿಕ್ಟೋರಿಯಾ ಆಸ್ಪತ್ರೆ ಹಾಗೂ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಭೇಟಿ ನೀಡಿ, ರೋಗಿಗಳ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಆರೋಗ್ಯ ಆರೈಕೆ ಸಂಗ್ರಹಾಲಯದಲ್ಲಿ ಇಡೀ ವೈದ್ಯಕೀಯ ಶಿಕ್ಷಣದ ವ್ಯವಸ್ಥೆಯ ಚಿತ್ರಣವನ್ನು ಕಟ್ಟಿಕೊಡಲಾಗುವುದು. ಈ ಹಿಂದಿನ ವೈದ್ಯಕೀಯ ತಂತ್ರಜ್ಞಾನ ಹಾಗೂ ಭವಿಷ್ಯದ ಆವಿಷ್ಕಾರಗಳ ಮಾಹಿತಿಯೂ ಇರಲಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಂಗ್ರಹಾಲಯದಲ್ಲಿ ಒಂದು ತಿಂಗಳ ತರಬೇತಿ ನೀಡಲಾಗುವುದು. ಪ್ರಾಯೋಗಿಕ ಕಲಿಕೆಗೆ ಇದು ಸಹಾಯಕವಾಗಲಿದೆ’ ಎಂದರು.

‘ವಿದ್ಯಾರ್ಥಿಗಳ ಕಲಿಕೆ ಹಾಗೂ ಪ್ರಯೋಗಕ್ಕೆ ಅನುಕೂಲವಾಗುವಂತೆ ಎಲ್ಲ 17 ವೈದ್ಯಕೀಯ ಕಾಲೇಜುಗಳಲ್ಲಿಯೂ ಕೌಶಲ ಪ್ರಯೋಗಾಲಯ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು

ಬಹುಮಹಡಿ ಪಾರ್ಕಿಂಗ್‌ ವ್ಯವಸ್ಥೆ: ‘ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಸುಧಾರಿಸಲು ಕ್ರಮ ಕೈಗೊಳ್ಳಲಾಗುವುದು.ವೈದ್ಯರು, ಸಚಿವರು, ಶಾಸಕರು ಸೇರಿದಂತೆ ಯಾರ ವಾಹನವೂ ಕ್ಯಾಂಪಸ್‌ ಒಳಗೆ ಬರಬಾರದು. ಅದಕ್ಕಾಗಿ ಆಸ್ಪತ್ರೆಯ ಪ್ರವೇಶದ್ವಾರದ ಬಳಿಯೇ ಬಹುಮಹಡಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲು ಸೂಚಿಸಿರುವೆ. ವಿಕ್ಟೋರಿಯಾ ಆಸ್ಪತ್ರೆ ಪ್ರವೇಶಿಸುವ ರಸ್ತೆಯ ದುರಸ್ತಿಗೊಳಿಸಲು ಬಿಬಿಎಂಪಿಗೆ ಆದೇಶಿಸುತ್ತೇನೆ’ ಎಂದು ತಿಳಿಸಿದರು.

ಆಸ್ಪತ್ರೆಯ ಬ್ಲಡ್‌ ಬ್ಯಾಂಕ್‌ಗೆ ಭೇಟಿ ನೀಡಿದ ಸಚಿವರು, ಅಲ್ಲಿನ ಹಳೆಯ ಫಲಕದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

‘ಕಿದ್ವಾಯಿಯಲ್ಲಿ ವಿಶ್ವದರ್ಜೆ ಸೌಲಭ್ಯ’

‘ಸರ್ಕಾರಿ ಆಸ್ಪತ್ರೆ ಎಂದೊಡನೆ ನಮ್ಮ ಕಣ್ಣ ಮುಂದೆ ಬೇರೆಯದೇ ಚಿತ್ರಣ ಬರಲಿದೆ. ಆದರೆ, ಇದಕ್ಕೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಅಪವಾದವಾಗಿದೆ. ಸಂಸ್ಥೆಯಲ್ಲಿ ನರ್ಸಿಂಗ್‌ ಬ್ಲಾಕ್‌ ನಿರ್ಮಿಸಲು ಸೂಚನೆ ನೀಡಿದ್ದೇನೆ’ ಎಂದುಡಾ.ಸಿ.ಎನ್.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

‘ಮಂಡ್ಯದಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರ ಆರಂಭಿಸಲಾಗಿದೆ. ಮೈಸೂರು, ಬಳ್ಳಾರಿ, ಶಿವಮೊಗ್ಗ ಹಾಗೂ ಬೆಂಗಳೂರಿನ ವೈದ್ಯಕೀಯ ಕಾಲೇಜು ಮತ್ತು ಹುಬ್ಬಳಿಯಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರ ಪ್ರಾರಂಭಿಸಲಾಗುವುದು. ಈ ಎಲ್ಲ ಕೇಂದ್ರಗಳನ್ನು ಕಿದ್ವಾಯಿ ಸಂಸ್ಥೆ ನಿರ್ವಹಣೆ ಮಾಡಲಿದೆ’ ಎಂದು ತಿಳಿಸಿದರು.

***

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಚೀನಾದಿಂದ ಬಂದ ಪ್ರವಾಸಿಗರ ತಪಾಸಣೆ ಮಾಡಲಾಗುತ್ತಿದೆ. ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ ಸೌಕರ್ಯ ಹೆಚ್ಚಿಸಲು ಸೂಚಿಸಿದ್ದೇನೆ

– ಡಾ.ಸಿ.ಎನ್.ಅಶ್ವತ್ಥನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT