ಭಾನುವಾರ, ಏಪ್ರಿಲ್ 5, 2020
19 °C
ಪ್ರಾಧ್ಯಾಪಕನ ಉಚಿತ ಸೇವೆ l ಕೋಚಿಂಗ್‌ ಪಡೆದವರಿಂದ ಧನ ಸಹಾಯ

32 ಮಂದಿಗೆ ಸರ್ಕಾರಿ ಕೆಲಸ ಪಡೆಯಲು ನೆರವಾದ ಉಚಿತ ಕೋಚಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮರಬ್ಬಿಹಾಳುವಿನಲ್ಲಿನ ಪ್ರಾಧ್ಯಾಪಕರೊಬ್ಬರು ಐದು ವರ್ಷಗಳಿಂದೀಚೆಗೆ ಉಚಿತ ಕೋಚಿಂಗ್‌ ನೀಡುತ್ತಲೇ 30 ಮಂದಿಯನ್ನು ಪೊಲೀಸ್ ಕಾನ್‌ಸ್ಟೆಬಲ್‌ ಹಾಗೂ ಇಬ್ಬರನ್ನು ಪ್ರಾಥಮಿಕ ಶಾಲಾ ಶಿಕ್ಷಕರ
ಹುದ್ದೆಗೆ ಆಯ್ಕೆಯಾಗುವಂತೆ ಮಾಡಿದ್ದಾರೆ.

ಹಗರಿಬೊಮ್ಮನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಬಡಿಗೇರ ವೀರೇಶ ಎಸ್ಸೆಸ್ಸೆಲ್ಸಿ ಮುಗಿದ ನಂತರ ಮೂರು ವರ್ಷ ಶಿಕ್ಷಣದಿಂದ ದೂರ ಇದ್ದರು. ಕುಟುಂಬದ ವೃತ್ತಿಯಾದ ಬಡಗಿತನದ ಇನ್ನೊಂದು ರೂಪವಾದ ಗ್ಲಾಸ್‌ ಡಿಸೈನಿಂಗ್‌ ಅಂಗಡಿ ನಡೆಸುತ್ತಲೇ ಮೂರು ವರ್ಷಗಳ ತರುವಾಯ ಪಿಯು ಮುಗಿಸಿ, ಪದವಿ ವ್ಯಾಸಂಗ ಮಾಡಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ ಸಾಹಸಿ.

ಊರಿನಲ್ಲಿ ಗಟ್ಟಿಮುಟ್ಟಾದ ಯುವಕರು ಪೊಲೀಸ್‌ ಹುದ್ದೆಯ ದೈಹಿಕ ಪರೀಕ್ಷೆ ಪಾಸ್‌ ಮಾಡಿಕೊಳ್ಳುತ್ತಾರೆ, ಪ್ರವೇಶ ಪರೀಕ್ಷೆಯಲ್ಲಿ ಮಾತ್ರ ಫೇಲಾಗುತ್ತಾರೆ ಎಂಬುದನ್ನು ಕಂಡುಕೊಂಡ ವೀರೇಶ, 5 ವರ್ಷಗಳ ಹಿಂದೆ ತಮ್ಮೂರಿನ ಸರ್ಕಾರಿ ಶಾಲೆಯಲ್ಲಿ ಪ್ರತಿ ಭಾನುವಾರ ಕೋಚಿಂಗ್‌ ಆರಂಭಿಸಿದರು. ಆರಂಭದಲ್ಲಿ ಇದ್ದವರು ಕೇವಲ ನಾಲ್ವರು ಅಭ್ಯರ್ಥಿಗಳು. ದಿನಕಳೆದಂತೆ ಸಂಖ್ಯೆ ಹೆಚ್ಚಾಯಿತು. ಇಂದು ನೂರಕ್ಕೂ ಅಧಿಕ ಮಂದಿ ಕೋಚಿಂಗ್‌ ಪಡೆಯುತ್ತಿದ್ದಾರೆ. ಆಗಲೇ 32 ಮಂದಿ ಸರ್ಕಾರಿ ಉದ್ಯೋಗ ಗಳಿಸಿದ್ದಾರೆ.

‘ಧಾರವಾಡ ಇಲ್ಲವೇ ಬೆಂಗಳೂರಿನಲ್ಲಷ್ಟೇ ಉತ್ತಮ ಕೋಚಿಂಗ್‌ ಕೇಂದ್ರಗಳಿವೆ. ಗ್ರಾಮೀಣ ಭಾಗದ ಯುವಕರಿಗೆ ಅಲ್ಲಿಗೆ ಹೋಗಿ ಕೋಚಿಂಗ್‌ ಪಡೆಯುವುದು ಕಷ್ಟ. ಇದ್ದ ಮಟ್ಟಿಗೆ ಅವರಿಗೆ ಉತ್ತಮ ಮಾರ್ಗದರ್ಶನ ನೀಡುವ ನನ್ನ ಪ್ರಯತ್ನಕ್ಕೆ ಫಲ ಸಿಗುತ್ತಿದೆ ಎಂಬ ಖುಷಿ ಇದೆ. ಸ್ವಂತ ಖರ್ಚಿನಿಂದಲೇ ಝೆರಾಕ್ಸ್‌ ಮಾಡಿ ಟಿಪ್ಪಣಿ ಕೊಡುತ್ತಿದ್ದೆ, ಇದೀಗ ಸರ್ಕಾರಿ ಕೆಲಸ ಪಡೆದವರೇ ಒಂದಿಷ್ಟು ಖರ್ಚು ಹಾಕಿ ನನ್ನ ಭಾರ ಕಡಿಮೆ ಮಾಡುತ್ತಿದ್ದಾರೆ’ ಎಂದರು.

ಆಸಕ್ತರಿಗೆ ಕೋಚಿಂಗ್ ನೀಡುತ್ತಲೇ ನಾನೂ ಸಹ ಬೆಳೆದೆ, 8 ಸರ್ಕಾರಿ ಉದ್ಯೋಗ ಅರಸಿ ಬಂತು, ಜೀವನ ಸಾರ್ಥಕ ಎನಿಸಿದೆ ಎನ್ನುತ್ತಾರೆ ಸಹಾಯಕ ಪ್ರಾಧ್ಯಾಪಕ ಬಡಿಗೇರ ವೀರೇಶ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)