ಡಾ.ಶಿವರಾಮ ಕಾರಂತ ಬಡಾವಣೆ: ಅಭಿವೃದ್ಧಿಪಡಿಸಿದ ಶೇ 60 ಭೂಮಿಗೆ ಪಟ್ಟು
ಡಾ.ಶಿವರಾಮ ಕಾರಂತ ಬಡಾವಣೆಗೆ ಕೃಷಿ ಜಮೀನು ಕಳೆದುಕೊಂಡಿರುವ ರೈತರಿಗೆ 2013ರ ಭೂಸ್ವಾಧೀನ ಕಾಯ್ದೆ ಅಂತೆಯೇ ಭೂಪರಿಹಾರ ನೀಡಬೇಕು ಅಥವಾ ಅಭಿವೃದ್ಧಿಪಡಿಸಿದ ಶೇ 60ರಷ್ಟು ಭೂಮಿ ನೀಡಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ರೈತರು ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ರೈತರ ಮೇಲೆ ಹಾಕಿರುವ ಪ್ರಕರಣಗಳನ್ನು ವಾಪಸ್ ಪಡೆಯಬೇಕು. ತಕ್ಷಣವೇ ಜಾನುವಾರುಗಳು ಕುರಿ–ಮೇಕೆಗಳಿಗೆ ಮೇವು ಒದಗಿಸಬೇಕು ಎಂದು ಆಗ್ರಹಿಸಿದರು. ರೈತ ಕುಟುಂಬಗಳಿಗೆ ತಮ್ಮ ಜೀವನ ನಿರ್ವಹಣೆ ಮಕ್ಕಳ ವಿದ್ಯಾಭ್ಯಾಸ ವೃದ್ಧರ ಆರೋಗ್ಯ ತಪಾಸಣೆ ದೈನಂದಿನ ಬದುಕಿಗಾಗಿ ಯೋಜನೆ ಪೂರ್ಣಗೊಳ್ಳುವ ತನಕ ಮಾಸಾಶನ ನೀಡಬೇಕು ಎಂದು ಸಂತ್ರಸ್ತರು ಕೋರಿದರು. ಯೋಜನೆ ಮಂಜೂರಾತಿಗೆ ಬಿಡಿಎ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ 2013ರ ಭೂಸ್ವಾಧೀನ ಕಾಯ್ದೆ ಅಡಿಯಲ್ಲೇ ಭೂಪರಿಹಾರ ನೀಡಲಾಗುವುದು ಹೇಳಿತ್ತು. ಅದೇ ಪ್ರಸ್ತಾವಕ್ಕೆ ಸರ್ಕಾರವು ಒಪ್ಪಿಗೆ ಸಹ ನೀಡಿತ್ತು. ರಾಜ್ಯಪತ್ರದಲ್ಲೂ ಅದೇ ಅಂಶವಿದೆ. 2018ರಿಂದ 2020ರ ತನಕ ಜಾರಿ ಮಾಡಿರುವ ನೋಟಿಸ್‌ಗಳಲ್ಲೂ 2013ರ ಭೂಸ್ವಾಧೀನ ಕಾಯ್ದೆ ಪ್ರಕಾರವೇ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿತ್ತು. ಆದರೆ 2021ರ ಈಚೆಗೆ 1894ರ ಭೂಸ್ವಾಧೀನ ಕಾಯ್ದೆ ಅಡಿ ಪರಿಹಾರ ನೀಡುತ್ತೇವೆಂದು ಹೇಳಿ ರೈತರನ್ನು ಬಿಡಿಎ ಅಧಿಕಾರಿಗಳು ವಂಚಿಸುತ್ತಿದ್ದಾರೆ ಎಂದು ರಾಮಗೊಂಡನಹಳ್ಳಿ ಎಂ.ರಮೇಶ್ ಅವರು ಸಚಿವರ ಎದುರು ಅಳಲು ತೋಡಿಕೊಂಡರು. ಸುಪ್ರೀಂ ಕೋರ್ಟ್ ನೇಮಿಸಿರುವ ಸಮಿತಿಯ ಉಸ್ತುವಾರಿಯಲ್ಲಿ ರೈತರ ಸಹಭಾಗಿತ್ವದಲ್ಲಿ ಬಡಾವಣೆ ಅಭಿವೃದ್ಧಿಗೊಳ್ಳಬೇಕಿತ್ತು. ಬಿಡಿಎ ಅಧಿಕಾರಿಗಳು ರೈತರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದ ಆಪಾದಿಸಿದರು.