ಗುರುವಾರ , ಜುಲೈ 29, 2021
27 °C
ಬೆಳಿಗ್ಗೆ 5ರಿಂದ 12ರವರೆಗೆ ಮಾತ್ರ ವ್ಯಾಪಾರ

ಲಾಕ್‌ಡೌನ್‌: ನಿಯಮ ಪಾಲಿಸದಿದ್ದರೆ ಕ್ರಿಮಿನಲ್ ಕೇಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ವೈರಾಣು ಹರಡುವಿಕೆ ತಡೆಗಾಗಿ ಮಂಗಳವಾರ ರಾತ್ರಿ 8 ಗಂಟೆಯಿಂದಲೇ ನಗರದಲ್ಲಿ ಲಾಕ್‌ಡೌನ್‌ ಜಾರಿ ಮಾಡಲಾಗಿದೆ. ಜುಲೈ 22ರವರೆಗೂ ಲಾಕ್‌ಡೌನ್ ಜಾರಿಯಲ್ಲಿರಲಿದ್ದು, ಅಗತ್ಯ ವಸ್ತುಗಳ ವ್ಯಾಪಾರಕ್ಕೆ ಬೆಳಿಗ್ಗೆ 5ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗಿದೆ.

ಲಾಕ್‌ಡೌನ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದಕ್ಕಾಗಿ ನಗರದಲ್ಲಿ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಮಂಗಳವಾರ ಸಂಜೆ ಆದೇಶ ಹೊರಡಿಸಿದ್ದಾರೆ.

‘ಲಾಕ್‌ಡೌನ್‌ ಸಂಬಂಧ ರಾಜ್ಯ ಸರ್ಕಾರ ರೂಪಿಸಿರುವ ನಿಯಮಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಅವುಗಳನ್ನು ಉಲ್ಲಂಘಿಸಿದರೆ ತಪ್ಪಿತಸ್ಥರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಐಪಿಸಿ 188ರಡಿ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ’ ಎಂದು ಭಾಸ್ಕರ್ ರಾವ್ ಎಚ್ಚರಿಸಿದ್ದಾರೆ.

‘ರಸ್ತೆಯಲ್ಲಿ ಸುಖಾಸುಮ್ಮನೇ ಜನರು ಓಡಾಡಬಾರದು. ದಿನಸಿ ಅಂಗಡಿ, ಆಹಾರ, ದವಸ ಧಾನ್ಯ, ಹಣ್ಣು-ತರಕಾರಿ, ಹಾಲು–ಹಾಲಿನ ಉತ್ಪನ್ನ, ಮಾಂಸ ಮತ್ತು ಮೀನು ಮಾರಾಟ ಸೇರಿ ಅಗತ್ಯ ವಸ್ತುಗಳ ವ್ಯಾಪಾರಕ್ಕೆ ಬೆಳಿಗ್ಗೆ 5 ಗಂಟೆಯಿಂದ 12 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗಿದೆ’ ಎಂದಿದ್ದಾರೆ.

‘ಇದೇ ಅವಧಿಯಲ್ಲೇ ಜನರು ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಅಂತರ ಕಾಯ್ದುಕೊಂಡು ಖರೀದಿಸಬೇಕು. ಮಾಸ್ಕ್ ಧರಿಸುವುದು ಕಡ್ಡಾಯವಾಗಿರಲಿದೆ’ ಎಂದು ಹೇಳಿದ್ದಾರೆ.

‘65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು, ಅಸ್ವಸ್ಥರು, ಗರ್ಭಿಣಿಯರು, 10 ವರ್ಷದೊಳಗಿನ ವಯಸ್ಸಿನ ಮಕ್ಕಳು ಲಾಕ್‌ಡೌನ್‌ ಸಂದರ್ಭದಲ್ಲಿ ತುರ್ತು ಸಂದರ್ಭ ಹೊರತುಪಡಿಸಿ ಬೇರೆ ಅವಧಿಯಲ್ಲಿ ಮನೆಯಿಂದ ಹೊರಗೆ ಬರಬಾರದು. ಉಳಿದಂತೆ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಎಲ್ಲರೂ ಪಾಲಿಸಬೇಕು’ ಎಂದೂ ಅವರು ಆದೇಶದಲ್ಲಿ ತಿಳಿಸಿದ್ದಾರೆ. 

ಪಾಸ್‌ ವ್ಯವಸ್ಥೆ ಇಲ್ಲ
'ಔಷಧಿ ಅಂಗಡಿಗಳು ರಾತ್ರಿಯವರೆಗೂ ಇರಲಿವೆ. ಆ್ಯಪ್‌ ಆಧರಿತ ಆಹಾರ ಪೂರೈಕೆಯನ್ನು ರಾತ್ರಿ 8ಕ್ಕೆ ಬಂದ್‌ ಮಾಡಬೇಕು. ವಾರದ ಲಾಕ್‌ಡೌನ್‌ ಇದಾಗಿದ್ದರಿಂದ ಯಾವುದೇ ಪಾಸ್ ಇರುವುದಿಲ್ಲ' ಎಂದು ಭಾಸ್ಕರ್ ರಾವ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು