ಶುಕ್ರವಾರ, ಫೆಬ್ರವರಿ 26, 2021
29 °C
ಬಂಧಿಸದಿದ್ದರೆ ಪ್ರತಿಭಟನೆ: ಮುತಾಲಿಕ್

ಗಿರೀಶ ಕಾರ್ನಾಡ ವಿರುದ್ಧ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ‘ನಾನು ಕೂಡ ನಗರ ನಕ್ಸಲ್’ ಎಂದು ಹೇಳಿಕೊಂಡಿರುವ ಸಾಹಿತಿ ಗಿರೀಶ ಕಾರ್ನಾಡ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ‌ ಹಿಂದೂ ಜನಜಾಗೃತಿ ಸಮಿತಿ ಹಾಗೂ ಶ್ರೀರಾಮಸೇನೆ ಕಾರ್ಯಕರ್ತರು ಶುಕ್ರವಾರ ಬೆಂಗಳೂರು ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಅವರಿಗೆ ದೂರು ನೀಡಿದರು.

 ‘ನಕ್ಸಲ್ ಸಂಘಟನೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ನಿಷೇಧ ಮಾಡಲಾಗಿದೆ. ಹೀಗಿರುವಾಗ, ನಾನೂ ನಕ್ಸಲ್ ಎಂದು ಹೇಳಿಕೊಂಡು ಓಡಾಡುತ್ತಿರುವುದು ಸಂವಿಧಾನ ವಿರೋಧಿ ಕೃತ್ಯ. ಹೀಗಾಗಿ, ತಕ್ಷಣ ಅವರನ್ನು ಬಂಧಿಸಬೇಕು’ ಎಂದು ಕಾರ್ಯಕರ್ತರು ಒತ್ತಾಯಿಸಿದರು.

ದೂರು ಸ್ವೀಕರಿಸಿದ ಕಮಿಷನರ್, ‘ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ, ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿ ರಾಜ್ಯ ಘಟಕದ ವಕ್ತಾರ ಮೋಹನ್‌ಗೌಡ, ‘ಸಿಪಿಐನ (ಮಾವೋವಾದಿ) ಸಹ ಸಂಘಟನೆಯಾದ ಮಹಾರಾಷ್ಟ್ರದ ‘ಕಬೀರ್ ಕಲಾ ಮಂಚ್’ ಆಯೋಜಿಸಿದ್ದ ಕಾರ್ಯ
ಕ್ರಮವೊಂದರಲ್ಲಿ ಕಾರ್ನಾಡ ಪಾಲ್ಗೊಂಡಿದ್ದರು.

ನಿಷೇಧಿತ ಸಂಘಟನೆಯೊಂದರ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅಗತ್ಯವೇನಿತ್ತು? ಹೀಗಾಗಿ, ಅವರನ್ನು ‘ಕರ್ನಾಟಕದ ನಕ್ಸಲ್’ ಎಂದು ಪರಿಗಣಿಸಿ ಕ್ರಮ ತೆಗೆದುಕೊಳ್ಳುವಂತೆ ಕಮಿಷನರ್‌ಗೆ ಮನವಿ ಮಾಡಿದ್ದೇವೆ’ ಎಂದು ಹೇಳಿದರು.

‘ಕಾರ್ನಾಡ ಮಾತ್ರವಲ್ಲ. ಸ್ವಾಮಿ ಅಗ್ನಿವೇಶ್ ಸೇರಿದಂತೆ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಬಹುತೇಕರು ದೇಶ ವಿರೋಧಿ ಹೇಳಿಕೆ ನೀಡಿದ್ದಾರೆ. ಹೀಗಾಗಿ, ಸಮಾವೇಶ ಆಯೋಜಿಸಿದ್ದ ‘ಗೌರಿ ಲಂಕೇಶ್ ಬಳಗ’ದ ವಿರುದ್ಧವೂ ಸಂವಿಧಾನ ವಿರೋಧಿ ಕೃತ್ಯ, ಹಿಂಸೆಗೆ ಪ್ರಚೋದನೆ ಹಾಗೂ ದೇಶದ ವಿರುದ್ಧ ಯುದ್ಧ ಸಾರಿದ ಆರೋಪಗಳಡಿ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿದ್ದೇವೆ’ ಎಂದರು.

ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌, ‘ಪೊಲೀಸರ ಸಮ್ಮುಖದಲ್ಲೇ ಕಾರ್ನಾಡ ಅಂಥ ಹೇಳಿಕೆ ನೀಡಿದ್ದಾರೆ. ಪೊಲೀಸರು ಶೀಘ್ರ ಕ್ರಮ ಜರುಗಿಸದಿದ್ದರೆ, ಕಾರ್ನಾಡರ ಮನೆ ಮುಂದೆ ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು. ಕಾರ್ನಾಡ ಅವರ ಬಂಧನಕ್ಕೆ ಒತ್ತಾಯಿಸಿ ವಕೀಲ ಎನ್‌.ಪಿ.ಅಮೃತೇಶ್ ಸಹ ಶುಕ್ರವಾರ ವಿಧಾನಸೌಧ ಠಾಣೆಗೆ ದೂರು ಕೊಟ್ಟಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು