ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಲೈಂಗಿಕ ಕಿರುಕುಳ: ಪುರುಷ ಕೆಲಸಗಾರರು ಕಾರಣ–ಆರೋಪ

Last Updated 7 ಫೆಬ್ರುವರಿ 2020, 19:43 IST
ಅಕ್ಷರ ಗಾತ್ರ

ಬೆಂಗಳೂರು: ‘ಹದಿನೆಂಟು ವರ್ಷದ ಕೆಳಗಿನ ವಿದ್ಯಾರ್ಥಿನಿಯರು ನೆಲೆಸಿರುವ ಬಾಲಮಂದಿರಗಳಲ್ಲಿ ಪುರುಷ ಕೆಲಸಗಾರರನ್ನು ನೇಮಕ ಮಾಡಿಕೊಳ್ಳಲಾಗಿದ್ದು ಇದು ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳಕ್ಕೆ ದಾರಿ ಮಾಡಿಕೊಟ್ಟಿದೆ’ ಎಂದು ‘ಬಚಪನ್‌ ಬಚಾವೊ ಆಂದೋಲನ’ ಹೈಕೋರ್ಟ್‌ಗೆ ದೂರಿದೆ.

‘ರಾಜ್ಯದ ವಿವಿಧೆಡೆ ಮಕ್ಕಳ ಸಂರಕ್ಷಣಾ ಕೇಂದ್ರಗಳಲ್ಲಿ 113 ಮಕ್ಕಳನ್ನು ಅಶ್ಲೀಲ ಚಿತ್ರಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ’ ಎಂಬ ಕೇಂದ್ರ ಸರ್ಕಾರದ ವರದಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರ ‘ಬಚಪನ್‌ ಬಚಾವೊ ಆಂದೋಲನ’ ಸಂಸ್ಥೆ ಪರ ವಕೀಲ ವೆಂಕಟೇಶ್ ಎಚ್‌.ದಳವಾಯಿ ಈ ಅಂಶವನ್ನು ಮೌಖಿಕವಾಗಿ ನ್ಯಾಯಪೀಠದ ಗಮನಕ್ಕೆ ತಂದರು. ತಮ್ಮ ಆರೋಪಕ್ಕೆ ಪೂರಕವಾಗಿ ಕಳೆದ ವರ್ಷ ನವೆಂಬರ್‌ನಲ್ಲಿ ರಾಯಚೂರಿನಲ್ಲಿ ಕಾವಲುಗಾರ ಅನಾಥ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾನೆಂಬ ಆರೋಪದ ಪ್ರಕರಣವನ್ನು ನ್ಯಾಯಪೀಠದ ಗಮನಕ್ಕೆ ತಂದರು.

‘ಮಕ್ಕಳ ಸಂರಕ್ಷಣಾ ಘಟಕಗಳ ಕಾಂಪೌಂಡ್‌ ಒಳಗೆ ಎಲ್ಲೂ ಪುರುಷ ಕೆಲಸಗಾರರು ಇರಬಾರದು. ಆದರೆ ಈ ನಿಯಮ ಉಲ್ಲಂಘನೆಯಾಗುತ್ತಿದೆ. ಇದರ ಪರಿಣಾಮ ಸಂರಕ್ಷಣಾ ಘಟಕಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಹೆಚ್ಚಾಗುತ್ತಿವೆ’ ಎಂಬ ಆತಂಕ ವ್ಯಕ್ತಪಡಿಸಿದರು.

ತರಾಟೆ: ‘ಕಲಬುರ್ಗಿ ಜಿಲ್ಲಾ ಮಕ್ಕಳ ಸಂರಕ್ಷಣಾ ಘಟಕದಲ್ಲಿ ಯಾವುದೇ ಮಗು ಅಶ್ಲೀಲ ಚಿತ್ರಗಳಿಗೆ ಬಳಕೆಯಾಗಿಲ್ಲ. ಆದ್ದರಿಂದ ಎಫ್‌ಐಆರ್‌ ರದ್ದುಗೊಳಿಸಬೇಕು’ ಎಂದು ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದ ಡಾನ್‌ ಬಾಸ್ಕೊ ಸಂಸ್ಥೆಯನ್ನು ನ್ಯಾಯಪೀಠ ಇದೇ ವೇಳೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.

ಅರ್ಜಿದಾರರ ಪರ ವಕೀಲರಿಗೆ, ‘ನೀವು ಯಾರನ್ನೊ ರಕ್ಷಿಸಲು ಗುರಾಣಿಯಾಗಿ ನಿಂತುಕೊಂಡಂತಿದೆ. ಇದೆಲ್ಲಾ ಪೊಲೀಸ್ ತನಿಖೆಗೆ ಒಳಪಡಬೇಕಾದ ವಿಷಯ. ಕ್ಲೀನ್ ಚಿಟ್ ಕೊಡಲು ನೀವಾರು, ನಿಮ್ಮ ಈ ಅರ್ಜಿ ವಾಪಸು ಪಡೆದುಕೊಳ್ಳದೇ ಹೋದರೆ ನಿಮ್ಮ ವಿರುದ್ಧವೇ ತನಿಖೆ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಸೂಚನೆ: ‘ಇಂತಹ ಪ್ರಕರಣಗಳಲ್ಲಿ ಪೊಲೀಸರು ಹೇಗೆ ತನಿಖೆ ನಡೆಸಬೇಕು, ಯಾವ ರೀತಿಯ ಪುನರ್ ಮನನ ಕಾರ್ಯಕ್ರಮ ನಡೆಸಲಾಗುವುದು ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆಗೆ ಪ್ರಮಾಣಪತ್ರ ಸಲ್ಲಿಸಿ’ ಎಂದು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಅವರಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಮಾರ್ಚ್‌ 10ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT