ಮಂಗಳವಾರ, ಮಾರ್ಚ್ 21, 2023
30 °C

ದಾಸರಹಳ್ಳಿ ಕ್ಷೇತ್ರ ಸ್ಥಿತಿ ಗತಿ: ಜೆಡಿಎಸ್‌ ಹಣಿಯಲು ಬಿಜೆಪಿ, ಕಾಂಗ್ರೆಸ್ ತಯಾರಿ

ಸಚ್ಚಿದಾನಂದ ಕುರಗುಂದ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆಗ್ನೇಯ ಏಷ್ಯಾದಲ್ಲಿಯೇ ಅತಿ ದೊಡ್ಡ ಕೈಗಾರಿಕಾ ಪ್ರದೇಶ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಪೀಣ್ಯ ಕೈಗಾರಿಕಾ ಪ್ರದೇಶವನ್ನು ಒಳಗೊಂಡಿರುವ ದಾಸರಹಳ್ಳಿ ವಿಧಾನಸಭಾ ಕ್ಷೇತ್ರವು, ಹೆಚ್ಚು ವಲಸಿಗರಿಂದಲೇ ಕೂಡಿದೆ. 

ಈ ಕ್ಷೇತ್ರದಲ್ಲಿ ಐದು ಸಾವಿರಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿವೆ. ಅಸಂಖ್ಯಾತ ಜನರಿಗೆ ಉದ್ಯೋಗ ನೀಡಿರುವ ಈ ಕೈಗಾರಿಕಾ ಪ್ರದೇಶದಲ್ಲಿ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯ ಮತ್ತು ಹೊರರಾಜ್ಯದ ವಲಸಿಗರಿದ್ದಾರೆ. ಇಂತಹ ವೈವಿಧ್ಯದಿಂದ ಕೂಡಿರುವ ಈ ಕ್ಷೇತ್ರದಲ್ಲಿ ಜೆಡಿಎಸ್‌ನ ಬಲ ಕುಗ್ಗಿಸಲು ಬಿಜೆಪಿ ಮತ್ತು ಕಾಂಗ್ರೆಸ್‌ ಪೈಪೋಟಿಗಿಳಿದಿವೆ.

ಜೆಡಿಎಸ್‌ನ ಹಾಲಿ ಶಾಸಕ ಆರ್‌. ಮಂಜುನಾಥ್‌ ಈ ಬಾರಿಯೂ ಸ್ಪರ್ಧಿಸಲಿದ್ದು, ಅವರಿಗೆ ಟಿಕೆಟ್‌ ಘೋಷಿಸಲಾಗಿದೆ. ಬಿಜೆಪಿಯಿಂದ ಮಾಜಿ ಶಾಸಕ ಎಸ್. ಮುನಿರಾಜು ಮತ್ತು ದಾಸರಹಳ್ಳಿ ಮಂಡಲ ಅಧ್ಯಕ್ಷ ಮತ್ತು ಪಾಲಿಕೆಯ ಮಾಜಿ ಸದಸ್ಯ ಎನ್‌. ಲೋಕೇಶ್‌ ಅವರ ಹೆಸರುಗಳು ಕೇಳಿಬರುತ್ತಿವೆ. ಮುನಿರಾಜು ಅವರು 2008 ಮತ್ತು 2013ರಲ್ಲಿ ಸತತ ಎರಡು ಬಾರಿ ಗೆಲವು ಸಾಧಿಸಿದ್ದರು. 2018ರ ಚುನಾವಣೆಯಲ್ಲಿ ಮಂಜುನಾಥ್‌ ಅವರ ವಿರುದ್ಧ 10,675 ಮತಗಳ ಅಂತರದಿಂದ ಮುನಿರಾಜು ಪರಾಭವಗೊಂಡಿದ್ದರಿಂದ ಹ್ಯಾಟ್ರಿಕ್‌ ಕನಸು ಭಗ್ನಗೊಂಡಿತ್ತು.

ಮುನಿರಾಜು ಅವರು, 2008ರಲ್ಲಿ 22,155 ಮತಗಳ ಅಂತರದಿಂದ ಹಾಗೂ 2013ರಲ್ಲಿ 10,828 ಮತಗಳ ಅಂತರದಿಂದ ಜಯಗಳಿಸಿದ್ದರು. ಈ ಬಾರಿಯೂ ಮತ್ತೊಮ್ಮೆ ಚುನಾವಣಾ ಅಖಾಡಕ್ಕಿಳಿಯಲು ಅವರು ಸಿದ್ಧತೆ ನಡೆಸಿ, ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾರೆ.

ಕಾಂಗ್ರೆಸ್‌ನಿಂದ ಪಿ.ಎನ್‌. ಕೃಷ್ಣಮೂರ್ತಿ, ಡಾ. ನಾಗಲಕ್ಷ್ಮಿ ಸೇರಿದಂತೆ 9 ಆಕಾಂಕ್ಷಿಗಳು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ಕೆಲವರು ಈಗಾಗಲೇ ಪ್ರಚಾರದಲ್ಲಿಯೂ ತೊಡಗಿದ್ದಾರೆ. ಆಮ್‌ ಆದ್ಮಿ ಪಕ್ಷದಿಂದ ಎಂ. ಕೀರ್ತನ್ ಕುಮಾರ್ ನಿಯೋಜಿತ ಅಭ್ಯರ್ಥಿಯಾಗಿದ್ದಾರೆ.

ಈ ಕ್ಷೇತ್ರದಲ್ಲಿ 2008ರಲ್ಲಿ ಬಿಜೆಪಿ–ಕಾಂಗ್ರೆಸ್‌ ನಡುವೆ ಪೈಪೋಟಿ ನಡೆದಿತ್ತು. 2013ರಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ನಡುವೆ ತ್ರಿಕೋನ ಸ್ಪರ್ಧೆ ಹಾಗೂ 2018ರಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ನಡುವೆ ಸ್ಪರ್ಧೆ ನಡೆದಿತ್ತು.

ಕ್ಷೇತ್ರದಲ್ಲಿನ ಮೂಲಸೌಕರ್ಯ ಕೊರತೆಗೆ ಪರಿಹಾರ ದೊರೆತಿಲ್ಲ. ಒಳಚರಂಡಿ, ರಸ್ತೆ, ಕುಡಿಯುವ ನೀರು, ಸಂಚಾರದ ಸಮಸ್ಯೆಗಳು ಮುಕ್ತಿ ಕಂಡಿಲ್ಲ. ಸರ್ಕಾರ ಈ ಕ್ಷೇತ್ರಕ್ಕೆ ಅಗತ್ಯವಿರುವಷ್ಟು ಅನುದಾನ ನೀಡಿಲ್ಲ ಎಂದು ಶಾಸಕ ಮಂಜುನಾಥ್‌ ಹಲವು ಬಾರಿ ದೂರಿದ್ದರು. ಆದರೆ, ಅನುದಾನವನ್ನು ಸಮರ್ಪಕವಾಗಿ ಬಳಸಿಲ್ಲ ಎನ್ನುವುದು ಬಿಜೆಪಿ ಮುಖಂಡರ ಆರೋಪ.

ಪುನರ್‌ ವಿಂಗಡಣೆ ನಂತರ 2008ರಲ್ಲಿ ಈ ಕ್ಷೇತ್ರದಲ್ಲಿ ಮೊದಲ ಬಾರಿ ಚುನಾವಣೆ ನಡೆದಿತ್ತು. ನಾಲ್ಕನೇ ಬಾರಿ ನಡೆಯಲಿರುವ ಚುನಾವಣೆಯಲ್ಲಿ 3 ಪಕ್ಷಗಳು ಬಲ ಪ್ರದರ್ಶನಕ್ಕೆ ಸಜ್ಜಾಗಿವೆ. ಅದರಲ್ಲೂ, ಜೆಡಿಎಸ್‌ ಮತ್ತು ಬಿಜೆಪಿ ನಡುವೆ ನಡೆಯುತ್ತಿರುವ ಪ್ರಬಲ ಪೈಪೋಟಿಯಲ್ಲಿ ಕಾಂಗ್ರೆಸ್‌ ಸಹ ತನ್ನ ಮತ ಬ್ಯಾಂಕ್‌ ಬಲಪಡಿಸಿಕೊಳ್ಳಲು ಹೋರಾಟ ನಡೆಸುತ್ತಿದೆ.


Caption

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು