ಸೋಮವಾರ, ಸೆಪ್ಟೆಂಬರ್ 26, 2022
24 °C

ಕಾಂಗ್ರೆಸ್‌ ಸ್ವಾತಂತ್ರ್ಯ ನಡಿಗೆ: ಬೆಂಗಳೂರಲ್ಲಿ ಜನಸಾಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಾಂಗ್ರೆಸ್‌ ಪಕ್ಷ ನಗರದಲ್ಲಿ ‘ಸ್ವಾತಂತ್ರ್ಯ ನಡಿಗೆ’ಯ ದರ್ಶನ ಮಾಡಿಸಿತು. ರಾಷ್ಟ್ರಧ್ವಜ ಹಿಡಿದು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಸುಮಾರು ಏಳೂವರೆ ಕಿಲೋ ಮೀಟರ್ ಹೆಜ್ಜೆ ಹಾಕುವ ಮೂಲಕ ರಾಜಧಾನಿಯಲ್ಲಿ ಸ್ವಾತಂತ್ರ್ಯದ ಕಹಳೆ ಮೊಳಗಿಸಿದರು.

ಮೆಜೆಸ್ಟಿಕ್‌ನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪಾದಯಾತ್ರೆ ಆರಂಭವಾಯಿತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ  ರಾಮಲಿಂಗಾರೆಡ್ಡಿ, ಡಾ.ಜಿ.ಪರಮೇಶ್ವರ ಸೇರಿ ಕಾಂಗ್ರೆಸ್ ನಾಯಕರ ದಂಡು ಪಾದಯಾತ್ರೆಯಲ್ಲಿ ಭಾಗವಹಿಸಿತ್ತು. ಆ ಮೂಲಕ ಕಾಂಗ್ರೆಸ್ ಮತ್ತೊಮ್ಮೆ ಒಗ್ಗಟ್ಟು ಪ್ರದರ್ಶಿಸಿತು.

ರಾಜ್ಯದ ಹಲವೆಡೆಯಿಂದ ಬಂದಿದ್ದ ಪಕ್ಷದ ಕಾರ್ಯಕರ್ತರು ಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಪಕ್ಷದಿಂದ ವಿತರಿಸಿದ್ದ ಟೀ–ಶರ್ಟ್‌ ಮತ್ತು ಟೋಪಿಗಳನ್ನು ಧರಿಸಿದ್ದ ವಿದ್ಯಾರ್ಥಿಗಳು ಮತ್ತು ಮಹಿಳೆಯರು ಪಾದಯಾತ್ರೆಯಲ್ಲಿ ನಡೆಯುವ ಜತೆಗೆ ಕಲಾ ತಂಡಗಳೊಂದಿಗೆ ಕುಣಿದು ಕುಪ್ಪಳಿಸಿದರು. ಕಾರ್ಯಕರ್ತರ ಕೇಕೆ, ಹರ್ಷೋದ್ಗಾರ, ’ವಂದೇ ಮಾತರಂ‘ ಘೋಷಣೆ ಮುಗಿಲು ಮುಟ್ಟಿತ್ತು. ಜನಸ್ತೋಮ ಕಂಡು ಸಂಭ್ರಮದಲ್ಲಿದ್ದ ಡಿ.ಕೆ. ಶಿವಕುಮಾರ್ ಕೂಡ ಕಲಾ ತಂಡಗಳ ಮಧ್ಯ ತಾಳಕ್ಕೆ ಹೆಜ್ಜೆ ಹಾಕಿದರು.

ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸುರ್ಜೇವಾಲಾ, ‘ಸ್ವತಂತ್ರ ಭಾರತದಲ್ಲಿ ದೇಶ ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇತ್ತೀಚಿನ ದಿನಗಳಲ್ಲಿ ಪ್ರಜಾಪ್ರಭುತ್ವದ ಮೇಲೆ ಆಕ್ರಮಣ ಆಗುತ್ತಿದೆ. ಪರಸ್ಪರ ಭೇದ–ಭಾವ ಹುಟ್ಟು ಹಾಕಲಾಗುತ್ತಿದ್ದು, ಅಲ್ಪಸಂಖ್ಯಾತರನ್ನು ಎರಡನೇ ದರ್ಜೆ ಪ್ರಜೆಯಾಗಿ ನೋಡಲಾಗುತ್ತಿದೆ. ಈ ರೀತಿಯ ತಾರತಮ್ಯದ ಆಡಳಿತದಿಂದ ದೇಶವನ್ನು ಮುಂದಕ್ಕೆ ಕೊಂಡೊಯ್ಯಲು ಆಗುವುದಿಲ್ಲ’ ಎಂದು ಹೇಳಿದರು.

ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ‘ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದವರಲ್ಲಿ ಯಾರೂ ಪ್ರಧಾನಿ ಆಗಬೇಕು ಎಂದು ಕನಸು ಕಂಡವರಲ್ಲ. 75 ವರ್ಷಗಳಲ್ಲಿ ರಸ್ತೆ, ಬಂದರು, ವಿಮಾನ ನಿಲ್ದಾಣ, ಆಹಾರ ಸ್ವಾವಲಂಬನೆ ಸೇರಿ ಎಲ್ಲವೂ ಆಗಿವೆ. ಅದಕ್ಕೆ ಕಾಂಗ್ರೆಸ್ ಪಕ್ಷ ಮತ್ತು ಅದರ ಚುಕ್ಕಾಣಿ ಹಿಡಿದವರು ಕಾರಣ’ ಎಂದು ಪ್ರತಿಪಾದಿಸಿದರು.

‘ಎಲ್ಲಾ ಪ್ರಜೆಗಳಿಗೂ ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಸಿಗದಿದ್ದರೆ ಸ್ವಾತಂತ್ರ್ಯ ಸಿಕ್ಕಿದ್ದಕ್ಕೆ ಸಾರ್ಥಕ ಆಗುವುದಿಲ್ಲ. ಕಾಂಗ್ರೆಸ್‌ನ ಈ ಐತಿಹಾಸಿಕ ಸ್ವಾತಂತ್ರ್ಯ ನಡಿಗೆಯಲ್ಲಿ ಭಾಗವಹಿಸಿರುವ ನಾವೆಲ್ಲರೂ ಪ್ರಜಾಪ್ರಭುತ್ವ ಉಳಿಸುವ ಶಪಥ ಮಾಡಬೇಕು’ ಎಂದು ಹೇಳಿದರು.

ಪ್ರಧಾನಿಗೆ ಧನ್ಯವಾದ: ಡಿ.ಕೆ.ಶಿವಕುಮಾರ್
‘ಈ ದೇಶಕ್ಕೆ ನೆಹರೂ ಕುಟುಂಬ ನೀಡಿರುವ ಕೊಡುಗೆಯನ್ನು ಯಾರೂ ಅಲ್ಲಗಳೆಯುವಂತಿಲ್ಲ. ನೆಹರೂ ಅವರನ್ನು ಚರಿತ್ರೆಯಿಂದ ತೆಗೆದು ಹಾಕುವ ಪ್ರಯತ್ನವನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ನೆಹರೂ ಅವರನ್ನು ನೆನಪಿಸಿಕೊಂಡಿದ್ದಾರೆ. ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

‘ಸ್ವಾತಂತ್ರ್ಯ ನಡಿಗೆಗೆ ನಿರೀಕ್ಷೆಗೂ ಮೀರಿ ಜನ ಬಂದಿದ್ದಾರೆ. ರಾತ್ರಿ 9 ಗಂಟೆಯ ವೇಳೆಗೇ 1 ಲಕ್ಷಕ್ಕೂ ಹೆಚ್ಚು ಜನ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದರು. ನೋಂದಣಿ ಆಗದವರೂ ಬಂದಿದ್ದಾರೆ. ಒಂದೂವರೆ ಲಕ್ಷ ಟೀ–ಶರ್ಟ್‌, ಟೋಪಿ ಮತ್ತು ಬಾವುಟ ವಿತರಿಸಿದ್ದೆವು. ಆದರೂ ಅರ್ಧದಷ್ಟು ಜನರಿಗಷ್ಟೇ ತಲುಪಿದೆ. ಉಳಿದ ಎಲ್ಲರಿಗೂ ಪ್ರಮಾಣ ಪತ್ರ ತಲುಪಿಸುವ ಕೆಲಸ ಮಾಡುತ್ತೇವೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು