ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶೇ 20ರಷ್ಟು ಭರವಸೆ ಮಾತ್ರ ಈಡೇರಿಕೆ; ಸರ್ಕಾರದ ಸಾಧನೆ: ಸಮೀಕ್ಷಾ ವರದಿ ಬಿಡುಗಡೆ

ಸ್ವಯಂ ಸೇವಾ ಸಂಸ್ಥೆಗಳಿಂದ ಕಾಂಗ್ರೆಸ್‌ ಸರ್ಕಾರದ ವರ್ಷದ ಸಾಧನೆ ಕುರಿತ ಸಮೀಕ್ಷಾ ವರದಿ ಬಿಡುಗಡೆ
Published : 8 ಆಗಸ್ಟ್ 2024, 15:41 IST
Last Updated : 8 ಆಗಸ್ಟ್ 2024, 15:41 IST
ಫಾಲೋ ಮಾಡಿ
Comments

ಬೆಂಗಳೂರು: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳ ಪೈಕಿ ಶೇಕಡ 20ರಷ್ಟನ್ನು ಮಾತ್ರ ಒಂದು ವರ್ಷದ ಅವಧಿಯಲ್ಲಿ ಈಡೇರಿಸಲಾಗಿದೆ ಎಂದು ನಗರದ ಸ್ವಯಂ ಸೇವಾ ಸಂಸ್ಥೆಗಳು ನಡೆಸಿದ ಸರ್ಕಾರದ ಒಂದು ವರ್ಷದ ಸಾಧನೆ ಕುರಿತ ಸಮೀಕ್ಷಾ ವರದಿ ಹೇಳಿದೆ.

ನಗರದ ಸಿವಿಕ್‌ ಬೆಂಗಳೂರು, ಸಿಟಿಜನ್ಸ್‌ ಅಜೆಂಡಾ ಫಾರ್‌ ಬೆಂಗಳೂರು ಹಾಗೂ ಸ್ಮಾರ್ಟ್‌ ಸಿಟಿಜಿನ್ಸ್‌ ಲ್ಯಾಬ್‌ ಸಂಸ್ಥೆಗಳು ಸರ್ಕಾರದ ವಾರ್ಷಿಕ ಸಾಧನೆ ಕುರಿತು ಎರಡು ತಿಂಗಳು ನಡೆಸಿದ ಸಮೀಕ್ಷೆಯ ವರದಿಯನ್ನು ಗುರವಾರ ಬಿಡುಗಡೆ ಮಾಡಿವೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಬಜೆಟ್‌ನಲ್ಲಿ ಆರೋಗ್ಯ, ಶಿಕ್ಷಣ, ಪರಿಸರ, ಉದ್ಯೋಗ, ಕೈಗಾರಿಕೆ ಹಾಗೂ ಬೆಂಗಳೂರು ನಗರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿಲ್ಲ. ಜನರಿಗೆ ಆಶ್ವಾಸನೆಗಳನ್ನು ಮಾತ್ರ ನೀಡಿದೆ. ಪಂಚ ಗ್ಯಾರಂಟಿಗಳ ಪೈಕಿ ಶಕ್ತಿ, ಗೃಹ ಜ್ಯೋತಿ ಯೋಜನೆ ಯಶಸ್ವಿಯಾಗಿವೆ. ಆದರೆ, ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆಗಳಲ್ಲಿ ಸಾಕಷ್ಟು ಸಮಸ್ಯೆ ಇದೆ ಎಂದು ವರದಿ ತಿಳಿಸಿದೆ.

ಸಿವಿಕ್‌ ಬೆಂಗಳೂರು ಸಂಸ್ಥೆಯ ಎ.ಕೃಷ್ಣ ಪ್ರಶಾಂತ್ ಮಾತನಾಡಿ, ‘ಚುನಾವಣಾ ಪ್ರಣಾಳಿಕೆಯನ್ನಾಧರಿಸಿ ಸಂಬಂಧಪಟ್ಟ ಇಲಾಖೆಗಳು, ಯೋಜನೆಯ ಫಲಾನುಭವಿಗಳು ಹಾಗೂ ನಾಗರಿಕರ ಅಭಿಪ್ರಾಯ ಪಡೆದು ಸರ್ಕಾರದ ಒಂದು ವರ್ಷದ ಸಾಧನೆಯ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಕೊರತೆ ಇದೆ. ಖಾಲಿ ಇರುವ ತಜ್ಞ ವೈದ್ಯರು ಹಾಗೂ ಸಿಬ್ಬಂದಿ ಹುದ್ದೆ ಭರ್ತಿಯಾಗಿಲ್ಲ. ‌ಸರ್ಕಾರಿ ಶಾಲೆಗಳನ್ನು ಸ್ಮಾರ್ಟ್‌ ಶಾಲೆಗಳಾಗಿ ಮೇಲ್ದರ್ಜೆಗೇರಿಸಿಲ್ಲ. ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳು ತಮ್ಮ ಬ್ಯಾಂಕ್‌ ಖಾತೆಗೆ ಹಣ ಜಮೆಯಾಗಿದೆಯೋ ಇಲ್ಲವೋ ಎಂದು ನೋಡಿಕೊಂಡು ಬರುವಂತಾಗಿದೆ’ ಎಂದು ತಿಳಿಸಿದರು.

‘ಹಲವು ದೇಶಗಳಲ್ಲಿ 25 ವರ್ಷಗಳ ಅಭಿವೃದ್ಧಿಯ ಮುನ್ನೋಟವಿರುವ ಸಮಗ್ರ ಯೋಜನೆ (ಮಾಸ್ಟರ್ ಪ್ಲ್ಯಾನ್) ಇರುತ್ತದೆ. ನಮ್ಮಲ್ಲಿ ಯಾವುದೇ ಯೋಜನೆ ಇಲ್ಲ. ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಕ್ರಮ ಕೈಗೊಂಡಿಲ್ಲ. ಹಲವು ಮೆಟ್ರೊ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಐದು ವರ್ಷಕ್ಕೊಮ್ಮೆ ಮತ ಚಲಾಯಿಸಿ ಸುಮ್ಮನೆ ಕೂರಬಾರದು. ಸಾರ್ವಜನಿಕರಿಗೂ ಮಾಹಿತಿ ಇರಬೇಕೆಂಬ ಕಾರಣಕ್ಕೆ ವರದಿ ಬಿಡುಗಡೆ ಮಾಡಲಾಗಿದೆ ’ ಎಂದು ವಿವರಿಸಿದರು.

ಸಿಟಿಜನ್‌ ಅಜೆಂಡಾ ಫಾರ್ ಬೆಂಗಳೂರಿನ ಸಂಚಾಲಕ ಸಂದೀಪ್ ಅನಿರುಧನ್, ಕಾತ್ಯಾಯನಿ ಚಾಮರಾಜ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT