ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಜೆಪಿ ಕಾರ್ಯಾಲಯಗಳಾಗಿರುವ ಸರ್ಕಾರಿ ಕಚೇರಿಗಳು’

Last Updated 14 ಮಾರ್ಚ್ 2021, 18:31 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ : ‘ರಾಜ್ಯದಲ್ಲಿ ಜನಸಾಮಾನ್ಯರಿಗೆ ಸರ್ಕಾರದ ಸವಲತ್ತುಗಳು ಸಿಗುತ್ತಿಲ್ಲ. ಶ್ರೀಮಂತರಿಗೆ, ಬಿಜೆಪಿ ಕಾರ್ಯಕರ್ತರಿಗೆ ಸಿಗುತ್ತಿವೆ. ಸರ್ಕಾರಿ ಕಚೇರಿಗಳು ಬಿಜೆಪಿ ಕಾರ್ಯಾಲಯಗಳಂತೆ ಕೆಲಸ ಮಾಡುತ್ತಿವೆ’ ಎಂದು ಕಾಂಗ್ರೆಸ್‌ ಮುಖಂಡ ಪಿ. ನಾಗರಾಜು ದೂರಿದರು.

ಹೇರೋಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಕ್ಷದ ಅಧ್ಯಕ್ಷರುಗಳ ನೇಮಕಾತಿ ಆದೇಶ ಪತ್ರ ವಿತರಿಸಿ ಮಾತನಾಡಿದ ಅವರು, ‘ಅಧಿಕಾರಿಗಳು ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರಕಿಸಿಕೊಡದಿದ್ದರೆ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಹೇರೋಹಳ್ಳಿ, ದೊಡ್ಡಬಿದರಕಲ್ಲು, ಉಲ್ಲಾಳು ವಾರ್ಡ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದೇವೆ ಎಂದು ಲೆಕ್ಕ ತೋರಿಸಿ ಬಿಬಿಎಂಪಿ ಅಧಿಕಾರಿಗಳು ಹಣ ಲೂಟಿ ಮಾಡುತ್ತಿದ್ದಾರೆ’ ಎಂದೂ ಅವರು ಆರೋಪಿಸಿದರು.

ಹೇರೋಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರೇವಣಸಿದ್ದಯ್ಯ, ‘ಕೋವಿಡ್ ನಿರ್ವಹಣೆ ಹೆಸರಿನಲ್ಲಿ ಸಾವಿರಾರು ಕೋಟಿ ಹಣ ಲೂಟಿ ಮಾಡುವುದನ್ನೇ ಬಿಜೆಪಿಯವರು ದೊಡ್ಡ ಕಾಯಕ ಮಾಡಿಕೊಂಡಿದ್ದಾರೆ. ಮತದಾರರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ರಮೇಶ್, ತ್ಯಾಗರಾಜ, ಮಲ್ಲೇಶ ಇದ್ದರು.

ವಿವಿಧ ವಾರ್ಡ್ ಅಧ್ಯಕ್ಷರಾಗಿ ಕೆಂಪಣ್ಣ, ನಾಗರಾಜು, ಸುರೇಂದ್ರ, ವಿವಿಧ ಗ್ರಾಮಪಂಚಾಯತಿ ಕಾಂಗ್ರೆಸ್ ಅಧ್ಯಕ್ಷರಾಗಿ ಕೊಡಿಗೆಹಳ್ಳಿ-ಮಂಜುನಾಥ್, ತಾವರೆಕೆರೆ-ನರಸಿಂಹಯ್ಯ, ಚುಂಚನಕುಪ್ಪೆ-ಗಂಗಾಧರ, ಚಿಕ್ಕನಹಳ್ಳಿ-ಕಿರಣ್, ಅಜ್ಜನಹಳ್ಳಿ-ಭೀಮೇಶ್, ಚೋಳನಾಯಕನಹಳ್ಳಿ-ನಾಗೇಶ್, ಚನ್ನೇನಹಳ್ಳಿ– ಶ್ರೀನಿವಾಸ್‌ರಿಗೆ ನೇಮಕಾತಿ ಆದೇಶ ಪತ್ರ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT