ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ’ ನಾಯಕರ ಆತ್ಮಾವಲೋಕನ

ಸಿಎಲ್‌ಪಿ ನಾಯಕ, ಕೆಪಿಸಿಸಿಗೆ ಸಾರಥಿ ಆಯ್ಕೆ ಗೊಂದಲ
Last Updated 4 ಜನವರಿ 2020, 19:49 IST
ಅಕ್ಷರ ಗಾತ್ರ

ಬೆಂಗಳೂರು: ‘ಒಟ್ಟಾಗಿ ಬನ್ನಿ’ ಎಂದು ಪಕ್ಷದ ನಾಯಕಿ ಸೋನಿಯಾ ಗಾಂಧಿ ಸೂಚಿಸಿದ ಬೆನ್ನಲ್ಲೇ, ಮೂಲ– ವಲಸಿಗರೆಂಬ ಭಿನ್ನಮತ ಮರೆತು, ಒಗ್ಗಟ್ಟು ಪ್ರದರ್ಶಿಸಿದ ರಾಜ್ಯ ಕಾಂಗ್ರೆಸ್‌ ನಾಯಕರು, ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕ ಮತ್ತು ಕೆಪಿಸಿಸಿಗೆ ಸಾರಥಿ ಆಯ್ಕೆ ವಿಷಯದಲ್ಲಿ ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧರಾಗಿರಲು ನಿರ್ಧರಿಸಿದ್ದಾರೆ.

ಶಾಸಕ ಜಿ. ಪರಮೇಶ್ವರ ಅವರ ಸದಾಶಿವನಗರದಲ್ಲಿರುವ ನಿವಾಸದಲ್ಲಿ ಶನಿವಾರ ಸಭೆ ಸೇರಿದ ಹಿರಿಯ ‘ಕೈ’ ನಾಯಕರು, ಸದ್ಯದ ರಾಜಕೀಯ ಪರಿಸ್ಥಿತಿ, ಆಂತರಿಕ ಗೊಂದಲಗಳು, ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಅಷ್ಟೇ ಅಲ್ಲ, ರಾಜ್ಯದಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಲು ಕಾರಣವಾದ ಸಂದರ್ಭ ಸೃಷ್ಟಿಯಾದ ಬಗ್ಗೆಯೂ ಆತ್ಮಾವಲೋಕನ ನಡೆಸಿದರು.

‘ಎಲ್ಲರೂ ಒಟ್ಟಾಗಿ ಚರ್ಚಿಸಿ ಒಮ್ಮತ ತೀರ್ಮಾನವಾದ ಬಳಿಕ ದೆಹಲಿಗೆ ಬನ್ನಿ ಎಂದು ಸೋನಿಯಾ ಮೇಡಂ ಸೂಚಿಸಿದ್ದಾರೆ. ನಮ್ಮಲ್ಲಿ ಕೆಲವು ಭಿನ್ನಾಭಿಪ್ರಾಯಗಳಿವೆ. ಕೆಲವು ವಿಚಾರಗಳಲ್ಲಿ ನಮ್ಮ ನಡುವೆಯೇ ಗೊಂದಲಗಳಿವೆ. ಅವೆಲ್ಲವನ್ನು ನಾವೇ ಬಗೆಹರಿಸಿಕೊಂಡು ದೆಹಲಿಗೆ ಹೋಗಬೇಕಿದೆ’ ಎಂದು ಸಭೆ
ಯಲ್ಲಿ ಪ್ರಾಸ್ತಾವಿಕವಾಗಿ ಪರಮೇಶ್ವರ ಹೇಳಿದರು.

‘ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಗೊತ್ತಿಲ್ಲ. ಈಗ ನಾವೆಲ್ಲರೂ ಭಿನ್ನಾಭಿಪ್ರಾಯ ಮರೆಯಬೇಕು. ಹೈಕಮಾಂಡ್ ಯಾವುದೇ ತೀರ್ಮಾನ ತೆಗೆದುಕೊಂಡರೂ ನಾವು ಒಪ್ಪಿಕೊಳ್ಳಬೇಕಿದೆ. ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ನಾವೆಲ್ಲರೂ ಒಟ್ಟಾಗೋಣ. ಅನಗತ್ಯ ಗೊಂದಲಕ್ಕೆ ಅವಕಾಶ ಕೊಡುವುದು ಬೇಡ’ ಎಂದೂ ಸಲಹೆ ನೀಡಿದ್ದಾರೆ.

ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಪರಮೇಶ್ವರ, ‘ಆದಷ್ಟು ಶೀಘ್ರ ಎಲ್ಲ ಗೊಂದಲಗಳು ಬಗೆಹರಿಯಲಿವೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

‘ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ’:‘ಗ್ರಾಮ ಪಂಚಾಯಿತಿ, ಬಿಬಿಎಂಪಿ ಚುನಾವಣೆ ಹತ್ತಿರ ಬರುತ್ತಿದೆ. ಅದಕ್ಕೆ ತಯಾರಾಗಬೇಕಿದೆ. ಅದಕ್ಕೂ ಮೊದಲು ಪಕ್ಷದ ಅಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕ ಸ್ಥಾನದ ಬಗ್ಗೆ ನಿರ್ಧಾರ ಆಗಬೇಕು. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಯಾರು ಅಧ್ಯಕ್ಷರಾಗಬೇಕೆಂಬ ಬಗ್ಗೆ ವೈಯಕ್ತಿಕ ಚರ್ಚೆಯಾಗಿಲ್ಲ. ಆಕಾಂಕ್ಷಿಗಳ ಬಗ್ಗೆಯೂ ಚರ್ಚೆ ಆಗಿಲ್ಲ’ ಎಂದು ಶಾಸಕ ಜಿ. ಪರಮೇಶ್ವರ ಸ್ಪಷ್ಟಪಡಿಸಿದರು.

‘ಸಿಎಲ್‌ಪಿ ಮತ್ತು ವಿರೋಧ ಪಕ್ಷ ನಾಯಕ ಸ್ಥಾನ ಪ್ರತ್ಯೇಕದ ಬಗ್ಗೆ ಚರ್ಚೆ ನಡೆಸಿಲ್ಲ. ಹೈಕಮಾಂಡ್ ನಮಗೆ ತಿಳಿಸಿದ ಬಳಿಕ ದೆಹಲಿಗೆ ಹೋಗುತ್ತೇವೆ. ಹೈಕಮಾಂಡ್ ಕರೆದು ಅಂತಿಮ ತೀರ್ಮಾನ ಮಾಡಬಹುದು. ನಮ್ಮಲ್ಲಿ‌ ಗೊಂದಲಗಳಿವೆ ಎಂಬುದಾಗಿ ಮಾಧ್ಯಮಗಳಲ್ಲೂ ಸುದ್ದಿಗಳು ಬರುತ್ತಿವೆ. ಆದರೆ, ಯಾವುದೇ ಗೊಂದಲಗಳಿಲ್ಲ ಎನ್ನುವುದನ್ನು ಸಭೆಯ ಮೂಲಕ ತೋರಿಸಿದ್ದೇವೆ’ ಎಂದು ಹೇಳಿದರು.

ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಬಿ.ಕೆ. ಹರಿಪ್ರಸಾದ್, ವೀರಪ್ಪ ಮೊಯಿಲಿ, ಕೆ.ಎಚ್. ಮುನಿಯಪ್ಪ, ಎಂ.ಬಿ. ಪಾಟೀಲ, ಸತೀಶ ಜಾರಕಿಹೊಳಿ, ಎಂ. ಕೃಷ್ಣಪ್ಪ, ದಿನೇಶ್ ಗುಂಡೂರಾವ್, ಎಸ್.ಆರ್. ಪಾಟೀಲ, ಈಶ್ವರ್ ಖಂಡ್ರೆ, ಕೃಷ್ಣ ಬೈರೇಗೌಡ, ರೆಹಮಾನ್ ಖಾನ್, ಮಾರ್ಗರೇಟ್ ಆಳ್ವಾ ಸೇರಿದಂತೆ ಹಲವು ನಾಯಕರು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT