ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಚುನಾವಣಾ ಮೀಸಲಾತಿ ಪಟ್ಟಿ: ವಿಕಾಸಸೌಧದಲ್ಲಿ ಕಾಂಗ್ರೆಸ್‌ ಪ್ರತಿಭಟನೆ

Last Updated 5 ಆಗಸ್ಟ್ 2022, 21:15 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಚುನಾವಣಾ ಮೀಸಲಾತಿ ಪಟ್ಟಿಯನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು ಶುಕ್ರವಾರ ವಿಕಾಸಸೌಧದಲ್ಲಿರುವ ನಗರಾಭಿವೃದ್ಧಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಬಿಬಿಎಂಪಿ ಚುನಾವಣೆ ಸಂಬಂಧ ಮೀಸಲಾತಿ ಪಟ್ಟಿ ಹೊರಡಿಸುವಂತೆ ಸುಪ್ರೀಂಕೋರ್ಟ್‌ ಗಡುವು ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದೆ. ಇದು ಅವೈಜ್ಞಾನಿಕ ಎಂದು ದೂರಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ನಾಯಕರು, ನಗರಾಭಿವೃದ್ಧಿ ಇಲಾಖೆ ಕಚೇರಿಯ ಫಲಕಕ್ಕೆ ‘ಆರ್‌ಎಸ್‌ಎಸ್‌–ಬಿಜೆಪಿ ಕಚೇರಿ’ಎಂದು ನಾಮಫಲಕ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಮೀಸಲಾತಿ ಪಟ್ಟಿಯು ಮಾರ್ಗಸೂಚಿಯ ಪ್ರಕಾರ ಇಲ್ಲ. ವಾರ್ಡ್‌ಗಳ ಮರು ವಿಂಗಡಣೆಯನ್ನು ಬಿಜೆಪಿ ಶಾಸಕರು ಮತ್ತು ಸಂಸದರ ಅನುಕೂಲಕ್ಕೆ ತಕ್ಕಂತೆ ರೂಪಿಸಲಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಮಾಡ ಬೇಕಾದ ಕೆಲಸವನ್ನು ಸಮಿತಿ ಮುಖ್ಯಸ್ಥರಾದ ಆಯುಕ್ತರು ಒಂದೇಒಂದು ಸಭೆ ಮಾಡದೇ, ಆರ್‌ಎಸ್‌ಎಸ್‌ನ ಅಣತಿಯಂತೆ ಕೇಶವಕೃಪಾದಲ್ಲಿ ಸಿದ್ಧಪಡಿಸಿದ್ದಾರೆ’ ಎಂದು ಕಾಂಗ್ರೆಸ್‌ ಶಾಸಕ ರಾಮಲಿಂಗಾರೆಡ್ಡಿ ದೂರಿದರು.

‘ಈ ಮೀಸಲಾತಿ ಪಟ್ಟಿ ಸಂಚಿನಿಂದ ಕೂಡಿದೆ. ಕಾಂಗ್ರೆಸ್‌ನವರು ಗೆಲ್ಲದಂತೆ ನೋಡಿಕೊಳ್ಳುವುದರ ಜತೆಗೆ, ಬಿಜೆಪಿಯ ಸಂಸದರು, ಶಾಸಕರಿಗೆ ಪಕ್ಷದಲ್ಲೇ ಪ್ರತಿಸ್ಪರ್ಧಿಗಳು ಸೃಷ್ಟಿಯಾಗದಂತೆಯೂ ತಂತ್ರ ರೂಪಿಸಿದ್ದಾರೆ’ ಎಂದರು.

‘ಚಾಮರಾಜಪೇಟೆ ಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದವರು 350 ರಿಂದ 400 ಜನ ಇರಬಹುದು. ಅವರಿಗೆ ಎಸ್‌ಟಿ ಮೀಸಲಾತಿ ನೀಡಿದ್ದಾರೆ. ಚಾಮರಾಜಪೇಟೆಯನ್ನು ಜಾಲಿ ಮೊಹಲ್ಲಾಗೆ ಸೇರಿಸಿದ್ದಾರೆ. ಕಾಂಗ್ರೆಸ್‌ ಒಂದು ಸ್ಥಾನವೂ ಗೆಲ್ಲಬಾರದು ಎಂಬ ಕಾರಣಕ್ಕೆ ಈ ರೀತಿ ಕುತಂತ್ರ ಮಾಡಿದ್ದಾರೆ’ ಎಂದು ಶಾಸಕ ಜಮೀರ್‌ ಅಹಮದ್‌ ಖಾನ್‌ ಕಿಡಿಕಾರಿದರು.

ಶಿವಾಜಿನಗರ ಶಾಸಕ ರಿಜ್ವಾನ್‌ ಅರ್ಷದ್‌ ಮಾತನಾಡಿ, ‘ಬಿಬಿಎಂಪಿ ಚುನಾವಣಾ ಪ್ರಕ್ರಿಯೆ ನಗರದ ಹಿತದೃಷ್ಟಿಯಿಂದ ಮಾಡಿಲ್ಲ. ಬಿಜೆಪಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಬೇಕಾಬಿಟ್ಟಿ ಮೀಸಲಾತಿ ನಿಗದಿ ಮಾಡಿದ್ದಾರೆ. ಬಿಜೆಪಿ ಶಾಸಕರ ಕ್ಷೇತ್ರ ಮತ್ತು ಕಾಂಗ್ರೆಸ್‌ ಶಾಸಕರ ಕ್ಷೇತ್ರ ಹೋಲಿಕೆ ಮಾಡಿದರೆ, 19 ಸಾವಿರ ಮತವಿರುವ ಒಂದು ವಾರ್ಡ್‌ ಸೃಷ್ಟಿಸಿದರೆ, ಅದರ ಪಕ್ಕದಲ್ಲಿ 45 ಸಾವಿರ ಮತವಿರುವ ವಾರ್ಡ್‌ ಮಾಡಲಾಗಿದೆ’ ಎಂದರು.

ಪ್ರತಿಭಟನೆಯಲ್ಲಿ ವಿಧಾನಪರಿಷತ್‌ ವಿರೋಧಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌, ಸಂಸದ ಡಿ.ಕೆ.ಸುರೇಶ್‌, ಶಾಸಕರಾದ ದಿನೇಶ್‌ ಗುಂಡೂರಾವ್‌, ಕೃಷ್ಣ ಬೈರೇಗೌಡ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT