ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯದ ಮೇಲೆ ಬರೆ ಎಳೆಯುತ್ತಿರುವ ಸರ್ಕಾರ -ವಿ.ಆರ್.ಸುದರ್ಶನ್

Last Updated 18 ಜುಲೈ 2021, 16:05 IST
ಅಕ್ಷರ ಗಾತ್ರ

ಬೆಂಗಳೂರು : ‘ಕೊರೊನಾ ಸೋಂಕನ್ನು ತಡೆಗಟ್ಟಲು ಸರ್ಕಾರ ಲಾಕ್‌ಡೌನ್‌ ಮಾಡಿದ್ದರಿಂದ, ಕೋಟ್ಯಂತರ ಜನ ಸಂಕಷ್ಟಕ್ಕೆ ಸಿಲುಕಿದರು. ಈ ಸಂದರ್ಭದಲ್ಲಿ ನೊಂದವರ ನೆರವಿಗೆ ಧಾವಿಸಬೇಕಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರವು ಪೆಟ್ರೋಲ್, ಡಿಸೇಲ್, ಅಡುಗೆ ಅನಿಲದ ದರವನ್ನು ಪ್ರತಿ ದಿನ ಏರಿಕೆ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿವೆ’ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಸಹ ಅಧ್ಯಕ್ಷ ವಿ.ಆರ್.ಸುದರ್ಶನ್ ಆರೋಪಿಸಿದರು.

ಕೋವಿಡ್‌ನಿಂದ ಮೃತಪಟ್ಟ 50 ಜನರ ಕುಟುಂಬ ಸದಸ್ಯರಿಗೆ ಗೊಟ್ಟಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್ ಲಕ್ಷ್ಮಣ್ ಮತ್ತು ಬಮೂಲ್ ಮಾಜಿ ಅಧ್ಯಕ್ಷ, ಕಾಂಗ್ರೆಸ್‌ ಮುಖಂಡ ಆರ್.ಕೆ.ರಮೇಶ್ ಅವರು ವೈಯಕ್ತಿಕವಾಗಿ ನೀಡಿದ ತಲಾ ₹10 ಸಾವಿರ ಧನಸಹಾಯವನ್ನು ವಿತರಿಸಿ ಮಾತನಾಡಿದರು.

ಆರ್.ಕೆ.ರಮೇಶ್ ಮಾತನಾಡಿ, ‘ಬೆಂಗಳೂರು ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿ ಸಾವಿರಾರು ಜನರ ನೆರವಿಗೆ ‘ಕಾಂಗ್ರೆಸ್‌ ಸಹಾಯಹಸ್ತ’ ಕಾರ್ಯಕ್ರಮದಡಿ ನೆರವು ನೀಡಲಾಗುತ್ತಿದೆ. ಔಷಧಿ ವಿತರಣೆ, ಇತರೆ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಆರ್ಥಿಕ ನೆರವು ನೀಡಿದ್ದಲ್ಲದೆ, ಎರಡು ಲಕ್ಷಕ್ಕೂ ಅಧಿಕ ಜನರಿಗೆ ದಿನಸಿ ಕಿಟ್ ವಿತರಿಸಲಾಗಿದೆ’ ಎಂದರು.

ಶ್ರೀಧರ್ ಲಕ್ಷ್ಮಣ್ ಮಾತನಾಡಿ, ‘ಅಂಜನಾಪುರದ ಕಡುಬಡತನದ ಪ್ರತಿಭಾವಂತ ಪಿಯುಸಿ ವಿದ್ಯಾರ್ಥಿನಿ ಮೇಘನಾ ಅವರಿಗೆ ನಮ್ಮ ಶಿಕ್ಷಣ ಸಂಸ್ಥೆಯಿಂದ ಉಚಿತವಾಗಿ ಪ್ರವೇಶ ನೀಡಲಾಗುವುದು’ ಎಂದರು.

ಗೊಟ್ಟಿಗೆರೆ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರವಿ, ವಾರ್ಡ್ ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಆವಲಹಳ್ಳಿ ರವಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಸದಸ್ಯರಾದ ನಿಜಾಂ, ಶುಭಂ, ಶ್ರೀಧರ್, ಮುದಾಸೀರ್, ಬಿ.ಟಿ.ನಾಗರಾಜ್, ಫ್ರಾಂಕ್ಲಿನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT