ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೆಟ್ರೋಲ್‌ 100 ನಾಟೌಟ್‌': ಪೆಟ್ರೋಲ್‌ ಬಂಕ್‌ ಎದುರು ಕಾಂಗ್ರೆಸ್‌ ಪ್ರತಿಭಟನೆ

ನಗರದ ವಿವಿಧೆಡೆ ‘ಪೆಟ್ರೋಲ್‌ 100 ನಾಟೌಟ್‌’ ಪ್ರದರ್ಶನ
Last Updated 11 ಜೂನ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪೆಟ್ರೋಲಿಯಂ ಉತ್ಪನ್ನದಗಳ ದರ ಏರಿಕೆ ವಿರೋಧಿಸಿ ಕಾಂಗ್ರೆಸ್‌ ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರು ನಗರದ ವಿವಿಧೆಡೆ ಪೆಟ್ರೋಲ್‌ ಬಂಕ್‌ಗಳ ಎದುರು ಶುಕ್ರವಾರ ‘ಪೆಟ್ರೋಲ್‌ 100 ನಾಟೌಟ್‌’ ಪ್ರತಿಭಟನಾ ಪ್ರದರ್ಶನ ನಡೆಸಿದರು.

ಪ್ರತಿ ಲೀಟರ್‌ ಪೆಟ್ರೋಲ್‌ ದರ ₹ 100 ದಾಟಿರುವ ಕಾರಣದಿಂದ ದೇಶದಾದ್ಯಂತ ಪೆಟ್ರೋಲ್‌ ಬಂಕ್‌ಗಳ ಎದುರು ಪ್ರತಿಭಟನಾ ಪ್ರದರ್ಶನ ನಡೆಸುವಂತೆ ಎಐಸಿಸಿ ಸೂಚನೆ ನೀಡಿತ್ತು. ಅಭಿಯಾನದ ಭಾಗವಾಗಿ ಶಿವಾನಂದ ವೃತ್ತದ ರೆಡ್ಡಿ ಪೆಟ್ರೋಲ್‌ ಬಂಕ್‌, ಭಾರತೀಯ ರಿಸರ್ವ್‌ ಬ್ಯಾಂಕ್‌ ಪ್ರಧಾನ ಕಚೇರಿ ಮುಂಭಾಗದ ಪೆಟ್ರೋಲ್‌ ಬಂಕ್‌ ಸೇರಿದಂತೆ ಹಲವು ಕಡೆಗಳಲ್ಲಿ ಪ್ರತಿಭಟನೆ ನಡೆಸಿಸಿದರು.

ಶಿವಾನಂದ ವೃತ್ತದ ರೆಡ್ಡಿ ಪೆಟ್ರೋಲ್‌ ಬಂಕ್‌ ಬಳಿ ನಡೆದ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕರಾದ ದಿನೇಶ್‌ ಗುಂಡೂರಾವ್‌, ಆರ್‌.ವಿ. ದೇಶಪಾಂಡೆ, ವಿಧಾನ ಪರಿಷತ್‌ ಸದಸ್ಯ ಪ್ರಕಾಶ್‌ ರಾಥೋಡ್‌, ಮಾಜಿ ಶಾಸಕ ಅಶೋಕ್‌ ಪಟ್ಟಣ, ವಿಧಾನ ಪರಿಷತ್‌ನ ಮಾಜಿ ಸದಸ್ಯ ವಿ.ಆರ್‌. ಸುದರ್ಶನ್‌ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

‘ಪೆಟ್ರೋಲ್‌ 100 ನಾಟ್‌ ಔಟ್‌’ ಎಂಬ ಬರಹವುಳ್ಳ ಫಲಕಗಳನ್ನು ಹಿಡಿದಿದ್ದ ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು, ಕೆಲ ಕಾಲ ಪ್ರತಿಭಟನಾ ಪ್ರದರ್ಶನ ನಡೆಸಿದರು. ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂಬ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆ ಅಂತ್ಯಗೊಳಿಸಬೇಕೆಂಬ ಪೊಲೀಸರ ಮನವಿಯನ್ನು ಕಾಂಗ್ರೆಸ್‌ ನಾಯಕರು ತಿರಸ್ಕರಿಸಿದರು. ಬಳಿಕ ಎಲ್ಲರನ್ನೂ ವಶಕ್ಕೆ ಪಡೆದ ಹೈಗ್ರೌಂಡ್ಸ್‌ ಠಾಣೆ ಪೊಲೀಸರು ವಾಹನದಲ್ಲಿ ಕೆರದೊಯ್ದರು. ಕೆಲವು ಸಮಯದ ಬಳಿಕ ಎಲ್ಲರನ್ನೂ ಬಿಡುಗಡೆ ಮಾಡಿದರು.

₹ 100ರ ನೋಟು ಪ್ರದರ್ಶನ: ರಿಸರ್ವ್‌ ಬ್ಯಾಂಕ್‌ ಪ್ರಾದೇಶಿಕ ಕಚೇರಿ ಎದುರಿನ ಪೆಟ್ರೋಲ್‌ ಬಂಕ್‌ ಬಳಿ ನಡೆದ ಪ್ರತಿಭಟನೆಯ ನೇತೃತ್ವವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ ಮತ್ತು ಈಶ್ವರ ಖಂಡ್ರೆ ವಹಿಸಿದ್ದರು. ₹ 100ರ ನೋಟು ಪ್ರದರ್ಶಿಸಿ ಬೈಕ್‌ಗೆ ಪೆಟ್ರೋಲ್‌ ತುಂಬಿಸಿಕೊಂಡ ಕಾಂಗ್ರೆಸ್‌ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸಾಗಿದರು.

ಮನೋಹರ್‌, ಸಲೀಂ ಅಹ್ಮದ್, ಆನಂದ, ಜನಾರ್ದನ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT