ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡಿಪಿಗೆ ಅಂಗವಿಕಲರ ಕೊಡುಗೆ: ಸಮೀಕ್ಷೆ ಆಗಲಿ-ಬಸವರಾಜ ಬೊಮ್ಮಾಯಿ

Published 3 ಮಾರ್ಚ್ 2024, 19:27 IST
Last Updated 3 ಮಾರ್ಚ್ 2024, 19:27 IST
ಅಕ್ಷರ ಗಾತ್ರ

ಬೆಂಗಳೂರು: ಅಂಗವಿಕಲರಿಗೆ ಅವಕಾಶ ನೀಡಿದರೆ ಅವರು ಸ್ವಾಭಿಮಾನದಿಂದ ಬದುಕುತ್ತಾರೆ. ಅವರು ನಿಜವಾದ ಯೋಗಿಗಳು ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಚಾಮರಾಜಪೇಟೆಯ ಕುವೆಂಪು ಕಲಾಕ್ಷೇತ್ರದಲ್ಲಿ ಸಕ್ಷಮ ಸಂಸ್ಥೆ ಆಯೋಜಿಸಿದ್ದ ವಿಶೇಷಚೇತನರ ದಕ್ಷಿಣ ಪ್ರಾಂತ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು.

‘ಅವರನ್ನು ವಿಶೇಷಚೇತನರು ಎಂದು ಕರೆಯುತ್ತೇವೆ. ಅವರಿಗೆ ಕೆಲವು ಅಂಗ ಊನ‌ವಿದ್ದರೂ ಛಲದಿಂದ ಬದುಕುತ್ತಾರೆ’ ಎಂದು ಹೇಳಿದರು.

‘ನಾವು ಕೆಲವು ಸಾರಿ ಭಿಕ್ಷುಕರಾಗುತ್ತೇವೆ. ರಾಜಕಾರಣಿಗಳು ಟಿಕೆಟ್ ಭಿಕ್ಷೆ ಬೇಡುತ್ತಾರೆ. ವ್ಯಾಪಾರಿ ಹಣಕ್ಕಾಗಿ ಬೇಡಿಕೆ ಇಡುತ್ತಾರೆ. ಆದರೆ, ಅಂಗವಿಕಲರು ಸ್ವಾಭಿಮಾನದಿಂದ ಬದುಕುತ್ತಾರೆ’ ಎಂದರು.

‘ದೇಶದ ಜಿಡಿಪಿಗೆ ಅಂಗವಿಕಲರ ಕೊಡುಗೆ ಏನು ಎಂದು ರಾಷ್ಟ್ರಮಟ್ಟದಲ್ಲಿ ಸಮೀಕ್ಷೆಯಾಗಬೇಕು. ಆಗ ಅವರ ಸೇವೆ ಏನಿದೆ ಅಂತ ಎಲ್ಲರಿಗೂ ಗೊತ್ತಾಗುತ್ತದೆ. ಅವರು ಎಲ್ಲ ರಂಗದಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಕಲ್ಪನಾ ಶಕ್ತಿ ಬಹಳ ವಿಸ್ತಾರವಾಗಿರುತ್ತದೆ. ಸಾಮಾನ್ಯ ಮನುಷ್ಯರಿಗಿಂತ ಮಿಗಿಲಾದ ಕಲ್ಪನಾ ಶಕ್ತಿಯನ್ನು ಅಂಗವಿಕಲರು ಹೊಂದಿರುತ್ತಾರೆ’ ಎಂದರು.

‘ಅಂಗವಿಕಲ ಮಕ್ಕಳಲ್ಲಿ ಯಾವಾಗಲೂ ಮುಗ್ಧತೆ ಇರುತ್ತದೆ. ನಮ್ಮದು ವಯಸ್ಸಾದಂತೆ ಮುಗ್ದತೆ ಕಡಿಮೆಯಾಗುತ್ತದೆ. ಅಂಗವಿಕಲರಿಗೆ ಅನುಕಂಪ ಬೇಡ ಅವಕಾಶ ಕೊಡಬೇಕು. ಅವಕಾಶ ನೀಡಿದರೆ ಸಾಧಿಸುವ ಛಲ ಅವರಿಗಿದೆ’ ಎಂದರು.

‘ಸರ್ಕಾರಗಳು ಅನೇಕ ಯೋಜನೆಗಳನ್ನು ಅಂಗವಿಕಲರಿಗಾಗಿ ಜಾರಿಗೊಳಿಸುತ್ತಿವೆ. ಆದರೆ, ಅವರಿಗೆ ಸರಿಯಾಗಿ ಮುಟ್ಟಿಸುವ ಕೆಲಸ ಆಗುವುದಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯಾವುದೇ ಯೋಜನೆ ಅಂತಿಮ‌ ವ್ಯಕ್ತಿಗೆ ತಲುಪುವಂತೆ ಮಾಡುತ್ತಾರೆ. ನಾವು ಅಧಿಕಾರದಲ್ಲಿದ್ದಾಗ ಸಕ್ಷಮ ಸಂಸ್ಥೆಯ ಸೇವೆ ನೋಡಿ ಪ್ರಶಸ್ತಿ ನೀಡಿದ್ದೆವು. ಉತ್ತಮ ಕೆಲಸ ಮಾಡುವವರನ್ನು ಗೌರವಿಸುವುದರಲ್ಲಿ ತಪ್ಪಿಲ್ಲ’ ಎಂದು ಹೇಳಿದರು.

ಶಾಸಕ ಉದಯ ಗರುಡಾಚಾರ್, ವಿಧಾನ ಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT