ಭಾನುವಾರ, ಜುಲೈ 25, 2021
28 °C
ಎಂ.ಎಸ್‌.ಪಾಳ್ಯದ ವಿಶ್ವನಗರದಲ್ಲಿ ಘಟನೆ

ಬೆಂಗಳೂರು | ರಸ್ತೆ ತಡೆದು ಅಂತ್ಯಕ್ರಿಯೆಗೆ ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ನಿಂದ ಮೃತಪಟ್ಟ 86 ವರ್ಷದ ವೃದ್ಧರೊಬ್ಬರ ಅಂತ್ಯ ಸಂಸ್ಕಾರಕ್ಕೆ ಅಡ್ಡಿಪಡಿಸಿ ಸ್ಮಶಾನದ ರಸ್ತೆಯನ್ನೇ ಬಂದ್ ಮಾಡಿ ಪ್ರತಿಭಟಿಸಿದ ಘಟನೆ ನಗರದ ಎಂ.ಎಸ್‌.ಪಾಳ್ಯದಲ್ಲಿ ಗುರುವಾರ ನಡೆಯಿತು.

ವಸಂತನಗರದ ನಿವಾಸಿಯೂ ಆಗಿದ್ದ ವೃದ್ಧರೊಬ್ಬರಿಗೆ ಕೆಲದಿನಗಳ ಹಿಂದಷ್ಟೇ ಕೊರೊನಾ ಸೋಂಕು ತಗುಲಿತ್ತು. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಬುಧವಾರ ಮೃತಪಟ್ಟಿದ್ದರು. ಮೃತರ ಅಂತ್ಯ ಸಂಸ್ಕಾರವನ್ನು ಸಮುದಾಯದ ಪದ್ಧತಿಯಂತೆ ವಿಶ್ವನಗರದಲ್ಲಿ ನೆರವೇರಿಸಲು ಕುಟುಂಬಸ್ಥರು ತೀರ್ಮಾನಿಸಿದ್ದರು. ಅದರಂತೆ ಗುಂಡಿಯನ್ನೂ ತೆಗೆಸಿದ್ದರು.

ಮೃತದೇಹವನ್ನು ಗುರುವಾರ ಬೆಳಿಗ್ಗೆ ಆಂಬುಲೆನ್ಸ್‌ನಲ್ಲಿ ಸ್ಮಶಾನ ಸಮೀಪ ತರಲಾಗಿತ್ತು. ರಸ್ತೆಯಲ್ಲೇ ಆಂಬುಲೆನ್ಸ್‌ ತಡೆದಿದ್ದ ಸ್ಥಳೀಯರು, ವಾಪಸ್ ಹೋಗುವಂತೆ ಒತ್ತಾಯಿಸಿದರು.

‘ನಮ್ಮ ಪ್ರದೇಶದಲ್ಲಿ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಪಟ್ಟು ಹಿಡಿದರು. ಆಂಬುಲೆನ್ಸ್ ಸ್ಮಶಾನದತ್ತ ಹೋಗದಂತೆ ರಸ್ತೆಯಲ್ಲಿ ಅಡ್ಡವಾಗಿ ಸಿಮೆಂಟ್ ಪೈಪ್‌ಗಳು ಹಾಗೂ ದೊಡ್ಡ ಗಾತ್ರದ ಕಲ್ಲುಗಳನ್ನು ಹಾಕಿದ್ದರು.

ಸ್ಥಳಕ್ಕೆ ಬಂದ ವಿದ್ಯಾರಣ್ಯಪುರ ಠಾಣೆ ಇನ್‌ಸ್ಪೆಕ್ಟರ್‌ ವೈ.ಎಲ್‌.ಪ್ರವೀಣ್‌ಕುಮಾರ್‌ ಹಾಗೂ ಸಿಬ್ಬಂದಿ, ಸ್ಥಳೀಯರ ಜೊತೆ ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಇದರಿಂದಾಗಿ ಮೃತದೇಹವಿದ್ದ ಆಂಬುಲೆನ್ಸ್ ಗಂಟೆಗಟ್ಟಲೇ ರಸ್ತೆಯಲ್ಲೇ ನಿಲ್ಲುವಂತಾಯಿತು.

‘ಸ್ಮಶಾನಕ್ಕೆ ಹೊಂದಿಕೊಂಡಂತೆ 480ಕ್ಕೂ ಹೆಚ್ಚು ಮನೆಗಳಿವೆ. ವೃದ್ಧರು, ಮಕ್ಕಳು ಇದ್ದಾರೆ. ಇಂಥ ಸ್ಥಳದಲ್ಲಿ ಸೋಂಕಿತರ ಅಂತ್ಯ ಸಂಸ್ಕಾರ ಮಾಡುವುದು ಬೇಡ‘ ಎಂದು ಸ್ಥಳೀಯರು ಹೇಳಿದರು.

‘ಅಸಹಜ ಸಾವು ಎಂದಿದ್ದ ಕುಟುಂಬಸ್ಥರು ಬುಧವಾರ ತಡರಾತ್ರಿ ಬಂದು ಸ್ಮಶಾನದಲ್ಲಿ ಗುಂಡಿ ತೆಗೆಸಿದ್ದರು.  ಕೊರೊನಾದಿಂದ ಮೃತಪಟ್ಟಿದ್ದಾರೆ ಎಂದು ಬೆಳಿಗ್ಗೆ ಗೊತ್ತಾಯಿತು. ಹೀಗಾಗಿ, ಪ್ರತಿಭಟನೆ ಮಾಡುತ್ತಿದ್ದೇವೆ. ’ ಎಂದರು.  

ಸ್ಥಳೀಯರ ವಿರೋಧದಿಂದಾಗಿ ಮೃತದೇಹದ ಸಮೇತ ಆಂಬುಲೆನ್ಸ್‌ ಸ್ಥಳದಿಂದ ಹೊರಟು ಹೋಯಿತು.

‘ಕುಟುಂಬಸ್ಥರು ಮೃತದೇಹವನ್ನು ಹೊಸೂರು ರಸ್ತೆಯಲ್ಲಿರುವ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ಮಾಡಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು